ADVERTISEMENT

ಕಳೆಗುಂದಿದ ಪಟಾಕಿ ವ್ಯಾಪಾರ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 1:38 IST
Last Updated 13 ನವೆಂಬರ್ 2020, 1:38 IST
ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿನ ಪಟಾಕಿ ಮಾರಾಟಕ್ಕೆ ಸಿದ್ಧವಾಗುತ್ತಿರುವ ಅಂಗಡಿಗಳು
ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿನ ಪಟಾಕಿ ಮಾರಾಟಕ್ಕೆ ಸಿದ್ಧವಾಗುತ್ತಿರುವ ಅಂಗಡಿಗಳು   

ದೊಡ್ಡಬಳ್ಳಾಪುರ: ಕೋವಿಡ್-19 ಸಂಕಷ್ಟದ ನಡುವೆ ಬಂದಿರುವ ದೀಪಾವಳಿ ಸಿದ್ಧತೆಗಳು ನಡೆಯುತ್ತಿರುವುದು ಒಂದು ಕಡೆಯಾದರೆ, ದೀಪಾವಳಿಯ ಪ್ರಮುಖ ಆಕರ್ಷಣೆಯಾಗಿರುವ ಪಟಾಕಿ ಮಾರಾಟ ಕಳೆಗುಂದಿದೆ.

ರಾಜ್ಯ ಸರ್ಕಾರ ಪಟಾಕಿ ಮಾರಾಟಕ್ಕೆ ನಿಷೇಧ ಹೇರಿ ನಂತರ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ. ಈ ಹಿನ್ನೆಲೆಯಲ್ಲಿ ಪಟಾಕಿ ಮಾರಾಟಕ್ಕೆ ಪರವಾನಗಿ ಸಿಗುವುದು ವಿಳಂಬವಾಗಿ, ಗುರುವಾರ ಸಂಜೆಯವರೆಗೂ ಪಟಾಕಿ ಮಾರಾಟಗಾರರು ಕಾದು ಕುಳಿತುಕೊಳ್ಳುವಂತಾಗಿತ್ತು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಪರವಾನಗಿ ಪಡೆದ 6 ಅಂಗಡಿಗಳ ವ್ಯಾಪಾರಿಗಳು ಪಟಾಕಿಗಳನ್ನು ಮಾರಾಟ ಮಾಡುತ್ತಿದ್ದಾರೆ. 2019ನೇ ಸಾಲಿನಲ್ಲಿ 8 ಅಂಗಡಿಗಳಿದ್ದು, ಈ ಬಾರಿ ಕಡಿಮೆಯಾಗಿವೆ. ಸುಪ್ರೀಂ ಕೋರ್ಟ್ ಸೂಚಿಸಿರುವ ಹಸಿರು ಪಟಾಕಿಗಳ ಬಗ್ಗೆ ಇನ್ನೂ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಇಲ್ಲ. ಇನ್ನು ಕೋವಿಡ್-19 ಹಿನ್ನೆಲೆಯಲ್ಲಿ ಪಟಾಕಿ ಬಳಕೆ ಸೀಮಿತವಾಗುವ ಲಕ್ಷಣಗಳು ಗೋಚರಿಸುತ್ತಿವೆ.

ADVERTISEMENT

ಮಾರ್ಗ ಸೂಚಿ ಪಾಲನೆ: ‘ಸರ್ಕಾರ ಈ ಮೊದಲು ಪಟಾಕಿ ಮಾರಾಟದ ಬಗ್ಗೆ ಸೂಚನೆ ನೀಡದೇ ಇದ್ದುದರಿಂದ ನಾವು ಪಟಾಕಿಗಳನ್ನು ಎಂದಿನಂತೆ ಖರೀದಿಸಿದ್ದೇವೆ. ಸರ್ಕಾರ ಆ ನಂತರ ಪಟಾಕಿ ನಿಷೇಧ ಹಾಗೂ ಹಸಿರು ಪಟಾಕಿ ಮಾರಾಟದ ಬಗ್ಗೆ ಸೂಚನೆ ನೀಡಿತ್ತು. ಸುಪ್ರೀಂ ಕೋರ್ಟ್ ಸೂಚನೆಯಂತೆ ಹಸಿರು ಪಟಾಕಿಗಳ ತಯಾರಿಕೆಯ ಮಾರ್ಗಸೂಚಿಗಳನ್ನು ಅನುಸರಿಸಿ ತಯಾರಿಸಲಾಗಿರುವ ಕಂಪನಿಗಳಿಂದಲೇ ನಾವು ಪಟಾಕಿಗಳನ್ನು ಖರೀದಿಸಿ ಮಾರಾಟ ಮಾಡಲಾಗುತ್ತಿದೆ. ಆದ್ದರಿಂದ ಗ್ರಾಹಕರು ಯಾವುದೇ ಆತಂಕವಿಲ್ಲದೇ ಖರೀದಿಸಬಹುದು. ಆದರೆ ಎಂದಿನಂತೆ ನಮಗೆ ಪಟಾಕಿ ಅಂಗಡಿ ಇಡುವುದಕ್ಕೆ ವಿವಿಧ ಇಲಾಖೆಗಳಿಂದ ಅನುಮತಿ ಪಡೆದು ಪರವಾನಗಿ ಪಡೆಯುವುದು ಸಹ ಕಷ್ಟವಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಪಟಾಕಿ ವ್ಯಾಪಾರ ಕುಸಿತ ಕಂಡಿದೆ. ಸರ್ಕಾರ ಯಾವುದೇ ಸುತ್ತೋಲೆ ಹೊರಡಿಸಿದರೂ ಮುಂಚಿತವಾಗಿ ಹೇಳಿದರೆ ನಮಗೆ ಅನುಕೂಲವಾಗಲಿದೆ’ ಎನ್ನುತ್ತಾರೆ ಪಟಾಕಿ ವ್ಯಾಪಾರಿಗಳಾದ ನವೀನ್ ಕುಮಾರ್, ಮಹೇಶ್, ರವಿಕುಮಾರ್.

ಮನೆ ಮುಂದೆ ಹಚ್ಚುವ ಹಣತೆಗಳ ಮಾರಾಟ ಭರದಿಂದ ಸಾಗಿದೆ.ಮಾರುಕಟ್ಟೆ ಪ್ರದೇಶದಲ್ಲಿ ದೀಪಾವಳಿಗೆ ತರಕಾರಿ ಹಾಗೂ ಅಗತ್ಯ ವಸ್ತುಗಳನ್ನು ಕೊಂಡೊಯ್ಯುತ್ತಿರುವ ಸಾರ್ವಜನಿಕರು ಹಬ್ಬ ಆಚರಿಸಲು ಸಿದ್ಧವಾಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.