ADVERTISEMENT

ಕಲಾ ವಿಭಾಗದಲ್ಲೂ ಉತ್ತಮ ಅವಕಾಶಗಳಿವೆ

​ಪ್ರಜಾವಾಣಿ ವಾರ್ತೆ
Published 16 ಮೇ 2019, 13:57 IST
Last Updated 16 ಮೇ 2019, 13:57 IST
ಕಾಲೇಜು ವಾರ್ಷಿಕೋತ್ಸವ ಸಮಾರಂಭವನ್ನು ಪ್ರಾಂಶುಪಾಲ ಪ್ರೊ.ಆರ್.ಎನ್.ಪಂಚಾಕ್ಷರಯ್ಯ ಉದ್ಘಾಟಿಸಿದರು
ಕಾಲೇಜು ವಾರ್ಷಿಕೋತ್ಸವ ಸಮಾರಂಭವನ್ನು ಪ್ರಾಂಶುಪಾಲ ಪ್ರೊ.ಆರ್.ಎನ್.ಪಂಚಾಕ್ಷರಯ್ಯ ಉದ್ಘಾಟಿಸಿದರು   

ದೊಡ್ಡಬಳ್ಳಾಪುರ: ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಲ್ಲಿ ವಿಶೇಷವಾದ ಪ್ರತಿಭೆ ಇರುತ್ತದೆ. ಅದನ್ನು ಹೊರತರಲು ವೇದಿಕೆ ಕಲ್ಪಿಸಬೇಕು ಎಂದು ಕಾಲೇಜಿನ ಉಪಪ್ರಾಂಶುಪಾಲ ಪ್ರೊ.ಎ.ವಿ.ನಿಜಲಿಂಗಪ್ಪ ಹೇಳಿದರು.

ಅವರು ಕೊಂಗಾಡಿಯಪ್ಪ ಕಾಲೇಜಿನ ಕಲಾವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಇತ್ತೀಚಿನ ದಿನಗಳಲ್ಲಿ ಕಲಾವಿಭಾಗಕ್ಕೆ ಸೇರುವ ವಿದ್ಯಾರ್ಥಿಗಳು ಕಡಿಮೆಯಾಗುತ್ತಿದ್ದಾರೆ.ದಿಢೀರ್ ಉದ್ಯೋಗದ ಭರವಸೆ ಮೂಡಿಸಿ ಹಣ ಸಂಪಾದನೆ ಮಾಡುವ ಕೋರ್ಸ್‍ಗಳಿಗೆ ಸೇರ ಬಯಸುವವರೇ ಹೆಚ್ಚಿಗಿದ್ದಾರೆ. ಈಗಲೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸ್ಥಾನವನ್ನು ಪಡೆದು ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವವರು ಕಲಾವಿಭಾಗದಲ್ಲಿ ವ್ಯಾಸಂಗ ಮಾಡಿದವರೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಕಲಾ ವಿಭಾಗದ ವಿದ್ಯಾರ್ಥಿಗಳು ಆಸಕ್ತಿಯಿಂದ ಓದಿದರೆ ಉನ್ನತ ಸ್ಥಾನಕ್ಕೆ ಹೋಗಲು ಸಾಕಷ್ಟು ಅವಕಾಶಗಳಿವೆ’ ಎಂದರು.

ADVERTISEMENT

ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಚಂದ್ರಪ್ಪ ಮಾತನಾಡಿ, ‘ವಿದ್ಯೆ ಜ್ಞಾನಕ್ಕೆ ಮೂಲ. ಬುದ್ಧಿ ಬದುಕಿಗೆ ಮೂಲ. ವಿದ್ಯಾರ್ಥಿಗಳು ತಮ್ಮಲ್ಲಿ ಅಡಗಿರುವ ಬುದ್ಧಿಬಲದಿಂದ ಯಾವುದೇ ಉದ್ಯೋಗವನ್ನು ಮಾಡಲು ಸಿದ್ದವಿರಬೇಕು. ಆಗ ಮಾತ್ರ ನಿರುದ್ಯೋಗವನ್ನು ಹಿಮ್ಮೆಟ್ಟಿಸಲು ಸಾಧ್ಯ’ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ, ‘ಪ್ರೊ.ಆರ್.ಎನ್.ಪಂಚಾಕ್ಷರಯ್ಯ ಮಾತನಾಡಿ, ‘ಪ್ರತಿಭಾವಂತ ವಿಭಾಗವೆಂದರೆ ಕಲಾವಿಭಾಗ. ಅತ್ಯುನ್ನತ ಸಂಸ್ಕಾರಗಳಿಗೆ ಸಾಕ್ಷಿಯಾದ ಮತ್ತು ನೆಮ್ಮದಿಯ ಜೀವನವನ್ನು ರೂಢಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿಭಾಗಕ್ಕೆ ಸೇರಲು ಕಲಾ ವಿಭಾಗದ ವಿದ್ಯಾರ್ಥಿಗಳು ಮಾರ್ಗದರ್ಶನ ಮಾಡಬೇಕು’ ಎಂದರು.

ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಜಿ.ಅಮರನಾಥ್, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ನಾರಾಯಣಸ್ವಾಮಿ, ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಈಶ್ವರಾಚಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.