ADVERTISEMENT

ಇಂದು ಕಾಟಿಮರಾಯಸ್ವಾಮಿ ದೇಗುಲ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2021, 3:15 IST
Last Updated 14 ಜನವರಿ 2021, 3:15 IST
ಕಾಟಿಮರಾಯನ ಗುಡಿ
ಕಾಟಿಮರಾಯನ ಗುಡಿ   

ದೊಡ್ಡಬಳ್ಳಾಪುರ: ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ನಡೆಯುವ ಕಾಟಿಮರಾಯನ ಆಚರಣೆಗೆ ಸಕಲ ಸಿದ್ದತೆ ನಡೆದಿದೆ.

ಸಂಕ್ರಾಂತಿ ಹಬ್ಬವನ್ನು ಗ್ರಾಮೀಣ ಪ್ರದೇಶದಲ್ಲಿ ಕಾಟಿಮರಾಯನ ಹಬ್ಬವೆಂದು ಕರೆಯಲಾಗುತ್ತದೆ. ಕಾಟಿರಾಯನ ಹಬ್ಬದಂದು ರೈತರು ತಮ್ಮ ರಾಸುಗಳಿಗೆ ವಿಶೇಷ ಪೂಜೆ ಸಲ್ಲಿಸುವ, ಕಾಟಿಮರಾಯನಿಗೆ ಹರಕೆ ತೀರಿಸುವ,ಕಿಚ್ಚು ಹಾಯಿಸುವ ಅಚರಣೆಗಳಿಂದ ಸಂಕ್ರಾಂತಿ ಹಬ್ಬ ಗ್ರಾಮಗಳಲ್ಲಿ ವಿಶೇಷ ಗಮನ ಸೆಳೆಯುತ್ತದೆ.

ಊರಿನ ಹೊರಗಿರುವ ಕಾಟಿಮರಾಯನ ಗೋಪುರಕ್ಕೆ ಸುಣ್ಣ ಮತ್ತು ಕೆಮ್ಮಣ್ಣಿನಿಂದ ಅಲಂಕಾರ ಮಾಡಿ, ಅದಕ್ಕೆ ಬಾಳೆ ಮತ್ತು ಮಾವಿನ ಸೊಪ್ಪು ಕಟ್ಟುವುದು ಸಾಮಾನ್ಯ ದೃಶ್ಯವಾಗಿತ್ತು.

ADVERTISEMENT

ಕ್ಷುದ್ರ ದೇವತೆಗಳ ಹೆಸರುಗಳಲ್ಲಿ ಒಂದು ಕಾಟಿಮ ಎಂಬುದು. ರೈತ ತಾನು ಸಾಕುವ ರಾಸುಗಳಿಗೆ ಯಾವುದೇ ಕಾಯಿಲೆಗಳು ಈ ಕ್ಷುದ್ರ ದೇವತೆಯಿಂದ ಬಾರದಿರಲೆಂದು ಪೂಜೆ ಸಲ್ಲಿಸುವುದು
ಪದ್ಧತಿಯಾಗಿದೆ.

ಊರ ಹೊರಗಿನ ಭಾಗದಲ್ಲಿ ಮಣ್ಣಿನ ಗೋಪುರವನ್ನು ನಿರ್ಮಾಣ ಮಾಡಿ, ಅದನ್ನು ಕಾಟಿಮರಾಯನ ಗುಡಿ ಎಂದು ಕರೆಯಲಾಗುತ್ತದೆ. ಈ ಗೋಪುರಕ್ಕೆ ಸುಣ್ಣ ಮತ್ತು ಕೆಮ್ಮಣ್ಣು ಪಟ್ಟೆಗಳನ್ನು ಬಳಿಯಲಾಗುತ್ತದೆ. ಹೊಲಗಳಲ್ಲಿ ಸಿಗುವ ತುಂಬೆ ಹೂವು, ಅಣ್ಣೆ ಸೊಪ್ಪಿನ ಹೂವು, ಅವರೆ ಹೂವು, ಹುಚ್ಚೇಳ್ಳು ಹೂವುಗಳನ್ನು ಪೂಜೆಗೆ ಬಳಸಲಾಗುತ್ತದೆ. ಕೆಲವು ಗ್ರಾಮಗಳಲ್ಲಿ ಮಂಟಪದ ರೀತಿಯಲ್ಲಿ ಕಾಟಿಮರಾಯನ ಗುಡಿ ನಿರ್ಮಾಣವಾಗಿರುವುದನ್ನು ಕಾಣಬಹುದಾಗಿದೆ.

ವಾರದಿಂದಲೇ ಕಾಟಿಮರಾಯನ ಹಬ್ಬಕ್ಕಾಗಿ ಹಳ್ಳಿಗಳಲ್ಲಿ ಸಿದ್ಧತೆ ಪ್ರಾರಂಭಿಸಲಾಗುತ್ತದೆ. ವಾರದ ಮೊದಲೇ ಹಳ್ಳಿಯ ಯುವಕರು ಹಾಡುಗಳನ್ನು ಹೇಳುತ್ತಾ ಮನೆ ಮನೆಗೆ ತೆರಳಿ ತುಂಬೆ ಹೂವು ಹಾಕುವ ಪದ್ಧತಿ ಇದೆ. ನಂತರ ಪ್ರತಿ ಮನೆಯಿಂದ ಅಕ್ಕಿ, ಕಾಳು, ಬೆಲ್ಲ ಸೇರಿದಂತೆ ರೈತರು ಬೆಳೆಯುವ ಹಲವಾರು ಪದಾರ್ಥಗಳನ್ನು ಸಂಘಟಕರು ಸಂಗ್ರಹಿಸುತ್ತಾರೆ.

ಇಂದು ಕಾಟಿಮರಾಯಸ್ವಾಮಿ ದೇವಾಲಯ ಉದ್ಘಾಟನೆ:

ತಾಲ್ಲೂಕಿನ ಕಾಡನೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕಾಟಿಮರಾಯಸ್ವಾಮಿ ದೇವಾಲಯದ ಉದ್ಘಾಟನೆ ಜ.14 ನಡೆಯಲಿದೆ.ಕಾಟಿಮರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು,ದಾಸೋಹ, ಚನ್ನಕೇಶವಸ್ವಾಮಿ ಭಜನಾ ಮಂಡಲಿ ಕಲಾವಿದರಿಂದ ಭಜನೆ,ರಾಸುಗಳ ಉತ್ಸವ ಮತ್ತು ಮೆರವಣಿಗೆ,ಕಿಚ್ಚು ಹಾಯಿಸುವ ಕಾರ್ಯಕ್ರಮಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.