ADVERTISEMENT

ವಿಜಯಪುರ: ಚೆರ್ರಿ ತಳಿಯ ಟೊಮೆಟೊ ತಿಪ್ಪೆ ಪಾಲು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2020, 12:34 IST
Last Updated 23 ಏಪ್ರಿಲ್ 2020, 12:34 IST
ಚನ್ನರಾಯಪಟ್ಟಣ ಹೋಬಳಿ ಚೀಮಾಚನಹಳ್ಳಿಯ ರೈತ ಗೋಪಾಲಪ್ಪ ಅವರು ಬೆಳೆದಿದ್ದ ಚೆರ್ರಿ ತಳಿಯ ಟೊಮೆಟೋ ತೋಟವನ್ನು ಬೆಲೆಯಿಲ್ಲದ ಕಾರಣ ಕಟಾವು ಮಾಡಿದ್ದು ಹಣ್ಣುಗಳು ಉದುರಿರುವುದನ್ನು ತೋರಿಸುತ್ತಿರುವುದು
ಚನ್ನರಾಯಪಟ್ಟಣ ಹೋಬಳಿ ಚೀಮಾಚನಹಳ್ಳಿಯ ರೈತ ಗೋಪಾಲಪ್ಪ ಅವರು ಬೆಳೆದಿದ್ದ ಚೆರ್ರಿ ತಳಿಯ ಟೊಮೆಟೋ ತೋಟವನ್ನು ಬೆಲೆಯಿಲ್ಲದ ಕಾರಣ ಕಟಾವು ಮಾಡಿದ್ದು ಹಣ್ಣುಗಳು ಉದುರಿರುವುದನ್ನು ತೋರಿಸುತ್ತಿರುವುದು   

ವಿಜಯಪುರ: ಬಂಡವಾಳ ಹಣ ಇಲ್ಲ, ಸಾಲ ಮಾಡಿ ಬೆಳೆದಿರುವ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಬೆಳೆ ನಾಟಿ ಮಾಡಲು ಮಾಡಿಕೊಂಡಿರುವ ಸಾಲಗಳು ತೀರಿಸಲು ಸಾಧ್ಯವಾಗುತ್ತಿಲ್ಲ. ಮುಂದೇನು ಎನ್ನುವ ಆತಂಕ ಎದುರಾಗಿದೆ ಎಂದು ರೈತ ಗೋಪಾಲಪ್ಪ ತಮ್ಮ ಅಳಲು ತೋಡಿಕೊಂಡರು.

ಚನ್ನರಾಯಪಟ್ಟಣ ಹೋಬಳಿ ಚೀಮಾಚನಹಳ್ಳಿ ಗ್ರಾಮದ ರೈತ ಗೋಪಾಲಪ್ಪ ಅವರು ಮಾತನಾಡಿ, ‘ನನಗಿರುವ ಜಮೀನಿನಲ್ಲಿ ಮಿಶ್ರ ಬೆಳೆಗಳನ್ನು ಬೆಳೆದಿದ್ದೇನೆ. ಒಂದು ಎಕರೆ ಪ್ರದೇಶದಲ್ಲಿ ಚೆರ್ರಿ ತಳಿಯ ಟೊಮೆಟೊ ಬೆಳೆದಿದ್ದೇನೆ. ಗಿಡದ ತುಂಬಾ ಕಾಯಿ ಬಿಡುತ್ತಿದ್ದಂತೆ ಮನೆ ಕಟ್ಟಲು, ತೋಟಗಳಿಗೆ ಮಾಡಿರುವ ಸಾಲವನ್ನು ಈ ಬಾರಿಯಾದರೂ ತೀರಿಸಿಕೊಂಡು ನೆಮ್ಮದಿಯ ಜೀವ ನಡೆಸುವ ಆಲೋಚನೆ ಮಾಡುತ್ತಿರುವಾಗಲೇ ಆವರಿಸಿದ ಕೊರೊನಾ ಭೀತಿ ಹಾಗೂ ಲಾಕ್‌ಡೌನ್ ಆದೇಶದ ಹಿನ್ನೆಲೆಯಲ್ಲಿ ತೋಟದಲ್ಲೆ ಹಣ್ಣಾದ ಟೊಮೆಟೊ ಹಣ್ಣನ್ನು ಎರಡು ಬಾರಿ ಮಾತ್ರ ಕಿತ್ತು ಮಾರುಕಟ್ಟೆಗೆ ತೆಗೆದುಕೊಂಡು ಹೋದರೂ ಪ್ರತಿ ಕೆ.ಜಿಗೆ ₹ 100ರಂತೆ ಮಾರಾಟವಾಗಬೇಕಾಗಿದ್ದದ್ದು, ಕೇವಲ ₹ 20ಕ್ಕೆ ಮಾರಾಟ ಮಾಡಬೇಕಾಗಿದೆ’ ಎಂದರು.

‘ಇದರಿಂದ ಬೇಸರಗೊಂಡು ತೋಟದಲ್ಲಿನ ಗಿಡವನ್ನು ಹಣ್ಣಿನ ಸಮೇತ ಕಿತ್ತುಹಾಕಿದ್ದೇನೆ. ಇದುವರೆಗೂ ಟ್ಯಾಂಕರ್‌ಗ‌ಳಲ್ಲಿ ₹ 1.50 ಲಕ್ಷ ಬಂಡವಾಳ ಹಾಕಿ ನೀರು ಹಾಯಿಸಿದ್ದೇನೆ. ಇದ್ದ ಕೊಳವೆಬಾವಿಗಳು ಬತ್ತಿಹೋಗಿವೆ. 5ರಿಂದ 6 ಲಕ್ಷ ಸಿಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ, ಬೆಳೆ ನಷ್ಟವಾಗಿದ್ದರಿಂದ ನನ್ನ ನಿರೀಕ್ಷೆಯೆಲ್ಲಾ ಸುಳ್ಳಾಯಿತು. ಮನೆಯ ಕೆಲಸ ಅರ್ಧಕ್ಕೆ ನಿಂತಿದೆ. ಸಾಲ ಹೇಗೆ ತೀರಿಸೋದು, ಮುಂದಿನ ಬೆಳೆಗೆ ಬಂಡವಾಳ ಹಾಕೋದು ಹೇಗೆ? ಎನ್ನುವ ಚಿಂತೆ ಕಾಡುತ್ತಿದೆ. ನನ್ನಂತೆ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಆಸರೆಯಾಗಿ ನಿಲ್ಲಬೇಕು. ನಷ್ಟ ಪರಿಹಾರವನ್ನು ಕೊಡಬೇಕು, ಕೊಳವೆಬಾವಿ ಕೊರೆಯಿಸಲಿಕ್ಕೂ ಹಣವಿಲ್ಲದಂತಹ ಪರಿಸ್ಥಿತಿಯಲ್ಲಿರುವ ನಮಗೆ ಗಂಗಾಕಲ್ಯಾಣ ಯೋಜನೆಯಡಿ ಕೊಳವೆಬಾವಿ ಮಂಜೂರು ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.