ADVERTISEMENT

ಡಿ.ಸಿ ನಡೆ-ಹಳ್ಳಿ ಕಡೆ ನಾಳೆ; ರಾಜ್ಯಮಟ್ಟದ ಕಾರ್ಯಕ್ರಮಕ್ಕೆ ಸಚಿವ ಆರ್.ಅಶೋಕ ಚಾಲನೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 5:38 IST
Last Updated 19 ಫೆಬ್ರುವರಿ 2021, 5:38 IST
ಜಿಲ್ಲಾಧಿಕಾರಿ ಕೆ.ಶ್ರೀನಿವಾಸ ಮಾಹಿತಿ ನೀಡಿದರು
ಜಿಲ್ಲಾಧಿಕಾರಿ ಕೆ.ಶ್ರೀನಿವಾಸ ಮಾಹಿತಿ ನೀಡಿದರು   

ದೊಡ್ಡಬಳ್ಳಾಪುರ: ಸರ್ಕಾರದ ಮಹತ್ವಾಕಾಂಕ್ಷೆ ಕಾರ್ಯಕ್ರಮ ‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ 2021ರ‌ ಫೆ.20 ಶನಿವಾರ ತಾಲ್ಲೂಕಿನ ಸಾಸಲು ಹೋಬಳಿ ಹೊಸಹಳ್ಳಿ ಗ್ರಾಮದಲ್ಲಿ ಕಂದಾಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ ಉದ್ಘಾಟಿಸಲಿದ್ದಾರೆ. ಸಂಜೆ ಇದೇ ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ ತಿಳಿಸಿದರು.

ಕಾರ್ಯಕ್ರಮ ಸಿದ್ಧತೆ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಂತರ ಮಾಹಿತಿ ನೀಡಿ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಂದಾಯ ಇಲಾಖೆ ವತಿಯಿಂದ ‘ಜಿಲ್ಲಾಧಿಕಾರಿ ನಡೆ-ಹಳ್ಳಿ ಕಡೆ’ ಕಾರ್ಯಕ್ರಮ ನಡೆ
ಯಲಿದ್ದು ರಾಜ್ಯಮಟ್ಟದ ಕಾರ್ಯಕ್ರಮಕ್ಕೆ ಕಂದಾಯ ಸಚಿವರು ಚಾಲನೆ ನೀಡಲಿ
ದ್ದಾರೆ. ಬೆಂಗಳೂರು ಪ್ರಾದೇಶಿಕ ಆಯುಕ್ತರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೇರಿದಂತೆ ಕಂದಾಯ ಇಲಾಖೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.

ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದ ಹಳ್ಳಿಯಾದ ಸಾಸಲು ಹೋಬಳಿ ಹೊಸಹಳ್ಳಿಯನ್ನು ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲಾಗುವುದು ಎಂದರು.

ADVERTISEMENT

ಫೆ.20ರ ಶನಿವಾರ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಪಿಂಚಣಿ,ಆಧಾರ್, ಪಹಣಿ, ಸ್ಮಶಾನಕ್ಕೆ ಭೂಮಿ ಮಂಜೂರು, ಗಿಡ ನೆಡುವುದು ಸೇರಿದಂತೆ ಪಡಿತರ ಚೀಟಿ ಸಮಸ್ಯೆಬಗೆಹರಿಸಲಾಗುವುದು. ಆರೋಗ್ಯ ಶಿಬಿರ, ವೇದಿಕೆ ಕಾರ್ಯಕ್ರಮ ನಡೆಸಲಾಗುವುದು. ಸಚಿವರು ದಲಿತರ ಮನೆಗಳಿಗೆ ತೆರಳಿ ಉಪಾಹಾರ ಸೇವಿಸಲಿದ್ದಾರೆ ಎಂದರು.

ಸರ್ಕಾರದ ನಿರ್ದೇಶನದಂತೆ ಈಗಾಗಲೇ ಕಂದಾಯ ಅಧಿಕಾರಿಗಳು ಹಲವು ವಿಷಯಗಳ ಫಲಾನುಭವಿಗಳನ್ನು ಗುರುತಿಸಲು ಕ್ರಮ ಕೈಗೊಳ್ಳಲಾಗಿದೆ. ಅದರಂತೆ ಪಹಣಿ ಕಾಲಂ 3 ಮತ್ತು 9ಕ್ಕೆ ವ್ಯತ್ಯಾಸ ಸರಿಪಡಿಸುವ ಬಗ್ಗೆ ಆದೇಶ ಹೊರಡಿಸಲಾಗುವುದು‌. ಗ್ರಾಮದಲ್ಲಿ ಪೌತಿ ಹೊಂದಿದ ಖಾತೆದಾರರನ್ನು ಗುರುತಿಸಿ ಪೌತಿ ಖಾತೆ ಬದಲಾವಣೆ ಮಾಡಲು ಕ್ರಮಕೈಗೊಳ್ಳಲಾಗಿದ್ದು, ಗ್ರಾಮದ ಎಲ್ಲ ಅರ್ಹ ವ್ಯಕ್ತಿಗಳನ್ನು ಗುರುತಿಸಿ ಪಿಂಚಣಿ ಮಂಜೂರು ಮಾಡಲಾಗುವುದು ಎಂದರು.

ಆಶ್ರಯ ಯೋಜನೆಗೆ ಜಮೀನು ಮಂಜೂರು ಮಾಡಲಾಗುವುದು, ಆಧಾರ್ ಕಾರ್ಡ್‌ನ ಅನುಕೂಲತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಹದ್ದು ಬಸ್ತು ಪೋಡಿ ಬಗ್ಗೆ ಮಾಹಿತಿ ನೀಡಲಾಗುವುದು. ಸರ್ಕಾರಿ ವಸತಿ ನಿಲಯಕ್ಕೆ ಭೇಟಿ ನೀಡಿ ಸುಸ್ಥಿತಿ ಬಗ್ಗೆ ಪರಿಶೀಲಿಸಲಾಗುವುದು. ಎಲ್ಲ ಅರ್ಹ ಬಡ ಕುಟುಂಬದವರಿಗೆ ಬಿಪಿಎಲ್ ಕಾರ್ಡ್ ನೀಡಲು ಕ್ರಮವಹಿಸಲಾಗುವುದು. ಗುಡಿಸಲು ರಹಿತ ವಾಸದ ಮನೆಗಳ ನಿರ್ಮಾಣದ ಬಗ್ಗೆ ಗ್ರಾಮ ಭೇಟಿಯ ಸಂರ್ಧಭದಲ್ಲಿ ಪರಿಶೀಲಿಸಲಾಗುವುದು ಹಾಗೂ ಇತರೆ ಇಲಾಖೆಗಳಿಂದ ನೀಡಬಹುದಾದ ಸೌಲಭ್ಯದ ಬಗ್ಗೆ ಗ್ರಾಮದಲ್ಲಿ ಮಾಹಿತಿ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕಂದಾಯ ಇಲಾಖೆಯಿಂದ ನೀಡಲಾಗುವ ಸವಲತ್ತುಗಳಾದ ವಿವಿಧ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆಯಡಿಯಲ್ಲಿ 150 ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ, 250 ಫಲಾನುಭವಿಗಳ ಆಧಾರ್ ನೋಂದಣಿ, 50 ಫಲಾನುಭವಿಗಳಿಗೆ ಮತದಾರರ ಗುರುತಿನ ಚೀಟಿ(EPIC), 200 ಪಹಣಿ ಕಾಲಂ 3ಮತ್ತು 9ರ ತಿದ್ದುಪಡಿ, 25 ಪೌತಿ ಖಾತೆ ಸೇರಿದಂತೆ 625 ಫಲಾನುಭವಿಗಳಿಗೆ ಸವಲತ್ತುಗಳನ್ನು ನೀಡಲಿದ್ದೇವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಜಗದೀಶ್.ಕೆ.ನಾಯಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಎನ್.ಎಸ್.ಮಹೇಶ್, ಸಹಾಯಕ ನಿರ್ದೇಶಕಿ ಜೆ.ಹೇಮಾವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.