ದೇವನಹಳ್ಳಿ: ಪ್ರತಿಯೊಬ್ಬರು ಗಿಡ-ಮರ ಬೆಳೆಸುವ ಜತೆಗೆ ಪರಿಸರ ಸಮತೋಲನಕ್ಕಾಗಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪರಿಸರ ಸಮತೋಲನ ಕಾಪಾಡುವುದರಿಂದ ಉತ್ತಮ ಆರೋಗ್ಯ, ಶುದ್ಧ ವಾತಾವರಣ ಪಡೆಯಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕುಂದಾಣ ಬೆಟ್ಟದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ‘ಟ್ರಕ್ಕಿಂಗ್, ಸಸಿ ನೆಡುವ ಹಾಗೂ ಸ್ವಚ್ಛತಾ ಹೀ ಸೇವಾ ಆಂದೋಲನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ವಚ್ಛತೆ ಹಾಗೂ ಗಿಡ-ಮರ ಬೆಳೆಸೋದು ಕೇವಲ ಸರ್ಕಾರದ ಕೆಲಸ ಅಷ್ಟೇ ಅಲ್ಲ. ಸಾರ್ವಜನಿಕರ ಭಾಗವಹಿಸುವಿಕೆ ಅಗತ್ಯವಾಗಿದೆ. ಪರಿಸರ ಬೆಳೆಸುವ ಕಾರ್ಯದಿಂದ ರೋಗರುಜಿ ತಡೆದು ಆಸ್ಪತ್ರೆಗೆ ಹೋಗುವುದರಿಂದ ದೂರ ಉಳಿಯಲು ಸಾಧ್ಯ ಎಂದು ಸಾರ್ವಜನಿಕರಲ್ಲಿ ಪರಿಸರ ಅರಿವು ಮೂಡಿಸಿದರು.
ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಚಾರಣಕ್ಕೆ ಅನುಕೂಲಕರ ವಾತಾವರಣವನ್ನು ಜಿಲ್ಲಾಡಳಿತ ಕಲ್ಪಿಸುತ್ತಿದ್ದು, ಸಾರ್ವಜನಿಕರು ಪ್ರವಾಸಿ ತಾಣಗಳಿಗೆ ಭೇಟಿ ನೀಡಿದಾಗ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದರು.
ಜಿಲ್ಲಾಧಿಕಾರಿ ಎ.ಬಿ ಬಸವರಾಜು ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮ ದಿನಾಚರಣೆ ಹಾಗೂ ಸ್ವಚ್ಛತೆಯೇ ಸೇವೆ ಕಾರ್ಯಕ್ರಮ ಮಾಡಲಾಗುತ್ತಿದೆ. ಇದರ ಭಾಗವಾಗಿ ಜಿಲ್ಲೆಯಾದ್ಯಂತ ಕೆರೆ, ಕುಂಟೆ, ಕಲ್ಯಾಣಿ ಹಾಗೂ ಗ್ರಾಮದ ಸ್ವಚ್ಛತೆ ಜತೆಗೆ ಸಸಿ ನೆಡುವ ಕಾರ್ಯದಲ್ಲಿ ಜಿ.ಪಂ ಹಾಗೂ ಗ್ರಾ.ಪಂ ಪೌರಕಾರ್ಮಿಕರು ಬಹು ಉತ್ಸುಕತೆಯಿಂದ ಕಾರ್ಯಪ್ರವೃತ್ತರಾಗಿದ್ದಾರೆ ಎಂದರು.
ಬಯಪ ಅಧ್ಯಕ್ಷ ಶಾಂತಕುಮಾರ್, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಸಿ.ಜಗನ್ನಾಥ, ಕುಂದಾಣ ಗ್ರಾ.ಪಂ ಅಧ್ಯಕ್ಷ ವಿಜಯಮ್ಮ, ಪುರಸಭೆ ಅಧ್ಯಕ್ಷ ಡಿ.ಎಂ ಮುನಿಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ.ಜುನಾಥ, ಜಿ.ಪಂ ಉಪಕಾರ್ಯದರ್ಶಿ ಶಿವಕುಮಾರ್, ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಪ್ರೀತಿ, ತಹಶೀಲ್ದಾರ್ ಅನೀಲ್ ಎಂ. ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.