ADVERTISEMENT

ಅಮೆರಿಕಾ ಜತೆ ಒಪ್ಪಂದ: ರೈತರ ಮರಣ ಶಾಸನ

ಎನ್‌ಎಸ್‌ಯುಐ ಘಟಕದ ಮುಖಂಡ ಕೆ.ಎನ್.ಮುನೀಂದ್ರ ಕಳವಳ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 13:41 IST
Last Updated 25 ಫೆಬ್ರುವರಿ 2020, 13:41 IST
ಕೆ.ಎನ್.ಮುನೀಂದ್ರ
ಕೆ.ಎನ್.ಮುನೀಂದ್ರ   

ವಿಜಯಪುರ: ‘ಅಮೆರಿಕ ಜತೆಗಿನ ಒಪ್ಪಂದ ಭಾರತದ ಹೈನುಗಾರಿಕೆ ಮತ್ತು ಕುಕ್ಕುಟೋದ್ಯಮಕ್ಕೆ ಮರಣ ಶಾಸನವಾಗಲಿದೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಟ್ರಂಪ್ ಅವರನ್ನು ಆಹ್ವಾನಿಸಿ, ಹೈನುಗಾರಿಕೆ ಮತ್ತು ಕುಕ್ಕುಟೋದ್ಯಮದ ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕುವುದನ್ನು ತೀವ್ರವಾಗಿ ಖಂಡಿಸುತ್ತೇವೆ’ ಎಂದು ಎನ್‌ಎಸ್‌ಯುಐ ಘಟಕದ ಮುಖಂಡ ಕೆ.ಎನ್.ಮುನೀಂದ್ರ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಈ ಒಪ್ಪಂದ ಜಾರಿಯಾದರೆ ಭಾರತಕ್ಕೆ ವಾರ್ಷಿಕ ಅಂದಾಜು 42 ಸಾವಿರ ಕೋಟಿ ಹೈನು ಉತ್ಪನ್ನ, ಕೋಳಿ ಉತ್ಪನ್ನ, ಟರ್ಕಿ ಮತ್ತಿತರ ಕೃಷಿ ಉತ್ಪನ್ನಗಳ ವಸ್ತುಗಳು ಆಮದಾಗುತ್ತವೆ. ಇದರಿಂದ ದೇಶದಲ್ಲಿ ಹೈನುಗಾರಿಕೆಯಲ್ಲಿ ತೊಡಗಿರುವ ಸುಮಾರು 10 ಕೋಟಿ ರೈತರು, ಅದರಲ್ಲೂ ರೈತ ಮಹಿಳೆಯರು ಮತ್ತು ಬಡವರು ಸರ್ಕಾರದ ಸಂಕಷ್ಟಕ್ಕೆ ಸಿಲುಕುತ್ತಾರೆ. ಹೈನುಗಾರಿಕೆ ಮತ್ತು ಕುಕ್ಕುಟ ಉದ್ಯಮದಲ್ಲಿ ತೊಡಗಿರುವ ಕಾರ್ಮಿಕರು ಕೂಡ ತಮ್ಮ ಜೀವನೋಪಾಯದಿಂದ ವಂಚಿತರಾಗುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಸೇಬು, ಚೆರ್ರಿ, ಬಾದಾಮಿ, ಸೋಯಾಬಿನ್, ಗೋಧಿ, ಜೋಳ ಮೊದಲಾದ ಹಣ್ಣು ಮತ್ತು ಕಾಳುಗಳ ಮೇಲಿನ ಆಮದು ತೆರಿಗೆಯನ್ನು ಶೇ 100ರಿಂದ ಶೇ 10ಕ್ಕೆ ಇಳಿಸಿದರೆ ರೈತರ ಮೇಲೆ ಗಂಭೀರ, ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ.‌ ಆರ್ಥಿಕ ಸಹಭಾಗಿತ್ವದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿಲ್ಲ ಎಂದು ಹೇಳಿಕೊಂಡ ಬಿಜೆಪಿ ಸರ್ಕಾರ, ಈಗ ಈ ಹೊಸ ಒಪ್ಪಂದದ ಮೂಲಕ ಆರ್‌ಸಿಇಪಿಗಿಂತಲೂ ಹೆಚ್ಚಿನ ಆಘಾತಕಾರಿ ಪರಿಣಾಮವನ್ನು ಉಂಟುಮಾಡಲು ಹೊರಟಿದೆ. ಇದನ್ನು ದೇಶದ ಜನತೆ, ಅದರಲ್ಲೂ ರೈತಾಪಿ ವರ್ಗ ಸಹಿಸುವುದಿಲ್ಲ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.