ADVERTISEMENT

‘ಬಂಡವಾಳಶಾಹಿ ವರ್ಗಕ್ಕೆ ತೊಂದರೆ; ಬಡವರಿಗಲ್ಲ‘

ಮೋದಿ ಪರ ಅಲೆ ಇದೆ, ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2019, 13:44 IST
Last Updated 20 ಮಾರ್ಚ್ 2019, 13:44 IST
ಚನ್ನರಾಯಪಟ್ಟಣ ಹೋಬಳಿ ಭಟ್ಟರಮಾರೇನಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿಯ ಪರವಾಗಿ ರಾಜ್ಯ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಶರತ್‌ ಬಚ್ಚೇಗೌಡ ಮತಯಾಚನೆ ಮಾಡಿದರು
ಚನ್ನರಾಯಪಟ್ಟಣ ಹೋಬಳಿ ಭಟ್ಟರಮಾರೇನಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿಯ ಪರವಾಗಿ ರಾಜ್ಯ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಶರತ್‌ ಬಚ್ಚೇಗೌಡ ಮತಯಾಚನೆ ಮಾಡಿದರು   

ವಿಜಯಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಗೆಲುವು ಸಾಧಿಸುವ ಎಲ್ಲ ಅವಕಾಶಗಳಿವೆ. ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಜನರಿಗೆ ತಿಳಿವಳಿಕೆ ನೀಡಬೇಕು ಎಂದು ರಾಜ್ಯ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಶರತ್‌ ಬಚ್ಚೇಗೌಡ ಹೇಳಿದರು.

ಚನ್ನರಾಯಪಟ್ಟಣ ಹೋಬಳಿ ಭಟ್ಟರ ಮಾರೇನಹಳ್ಳಿ ಗ್ರಾಮದಲ್ಲಿ ಬೂತ್‌ ಮಟ್ಟದ ಕಾರ್ಯಕರ್ತರೊಟ್ಟಿಗೆ ಅವರು ಮಾತನಾಡಿದರು.

ಕೇಂದ್ರದಲ್ಲಿ 5 ವರ್ಷ ಆಡಳಿತ ನಡೆಸಿದ ಪ್ರಧಾನಿ ಮೋದಿ ಅವರು ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ಅವರು ಜಾರಿಗೆ ತಂದಿರುವ ಕಾರ್ಯಕ್ರಮಗಳ ಮೂಲಕ ಇಂದು ದೇಶದ ಕೋಟ್ಯಂತರ ಮಂದಿ ಸದುಪಯೋಗ ಪಡಿಸಿಕೊಂಡಿದ್ದಾರೆ. ಅವರು ತೆಗೆದುಕೊಂಡ ಕೆಲವು ಕಠಿಣ ನಿರ್ಧಾರಗಳಿಂದಾಗಿ ಬಂಡವಾಳಶಾಹಿಗಳಿಗೆ ತೊಂದರೆ ಆಗಿದೆ. ಹೊರತು ಬಡವರು, ಮಧ್ಯಮ ವರ್ಗದವರಿಗೆ ತೊಂದರೆಯಾಗಿಲ್ಲ ಎಂದರು.

ADVERTISEMENT

‘ದೇಶಕ್ಕೆ ತೆರಿಗೆ ಕಟ್ಟದೆ ವಂಚನೆ ಮಾಡಿಕೊಂಡು ಬಂದಿದ್ದವರಿಗೆ ಕಳವಳ ಉಂಟಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದೇವೆ. ಈ ಬಾರಿ ಮೊಯಿಲಿ ಅವರಿಂದ ಬೇಸತ್ತಿರುವ ಕಾಂಗ್ರೆಸ್, ಜೆಡಿಎಸ್‌ ಮತದಾರರು ಈ ಬಾರಿ ನಮಗೆ ಮತ ಹಾಕಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕು ರೈತ ಮೋರ್ಚಾ ಅಧ್ಯಕ್ಷ ಅಗ್ರಹಾರ ರಾಜಣ್ಣ ಮಾತನಾಡಿ, ಚನ್ನರಾಯಪಟ್ಟಣ ಹೋಬಳಿಯಾದ್ಯಂತ ಹಳ್ಳಿ ಹಳ್ಳಿಯಲ್ಲೂ ಮೋದಿ ಪರವಾದ ಅಲೆಯಿದೆ. ಇಂದು ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದರೂ ಹಳ್ಳಿಗಳಲ್ಲಿನ ಜನರು ಮೋದಿ ಅವರನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಅಭ್ಯರ್ಥಿಗೆ ಮತ ನೀಡುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಚನ್ನರಾಯಪಟ್ಟಣ ಹೋಬಳಿ ಘಟಕದ ಬಿಜೆಪಿ ಅಧ್ಯಕ್ಷ ರಾಮಾಂಜಿನೇಯ, ಹೊಸಕೋಟೆ ತಾಲ್ಲೂಕು ಘಟಕದ ಬಿಜೆಪಿ ಉಪಾಧ್ಯಕ್ಷ ಸುಬ್ಬಣ್ಣ, ಜಿಲ್ಲಾ ಮುಖಂಡ ಪ್ರಭಾಕರ್, ಕಾಳಪ್ಪ, ರಾಧಾಕೃಷ್ಣ, ಮಾರೇಗೌಡ, ಮುರಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.