ADVERTISEMENT

ಆನೇಕಲ್: ಮೇಳದಲ್ಲಿ 2000 ಸ್ಕೌಟ್ಸ್, ಗೈ‍ಡ್ಸ್‌ ಭಾಗಿ

ಉರಿಬಿಸಿಲಿನಲ್ಲೂ ಉತ್ಸಾಹದಿಂದ ಪಾಲ್ಗೊಂಡ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 6:09 IST
Last Updated 21 ಫೆಬ್ರುವರಿ 2026, 6:09 IST
ಆನೇಕಲ್‌ನಲ್ಲಿ ಶುಕ್ರವಾರ ನಡೆದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಮಟ್ಟದ ಮೇಳದಲ್ಲಿ ಪಾಲ್ಗೊಂಡಿದ್ದ ವಿವಿಧ ಶಾಲೆಗಳ ವಿದ್ಯಾರ್ಥಿಗಳು
ಆನೇಕಲ್‌ನಲ್ಲಿ ಶುಕ್ರವಾರ ನಡೆದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಮಟ್ಟದ ಮೇಳದಲ್ಲಿ ಪಾಲ್ಗೊಂಡಿದ್ದ ವಿವಿಧ ಶಾಲೆಗಳ ವಿದ್ಯಾರ್ಥಿಗಳು   

ಆನೇಕಲ್: ಪಟ್ಟಣದಲ್ಲಿ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಜಿಲ್ಲಾ ಮಟ್ಟದ ಮೇಳವನ್ನು ಶುಕ್ರವಾರ ಆಯೋಜಿಸಲಾಯಿತು. ವಿವಿಧ ಶಾಲೆಗಳ ಎರಡು ಸಾವಿರಕ್ಕೂ ಹೆಚ್ಚು ಸ್ಕೌಟ್ಸ್‌ ಮತ್ತು ಗೈ‍ಡ್ಸ್‌ಗಳು ಮೇಳದಲ್ಲಿ ಪಾಲ್ಗೊಂಡರು. 

ಸರ್ಕಾರಿ ಹೊಸ ಮಾಧ್ಯಮಿಕ ಪಾಠ ಶಾಲೆ ಆಟದ ಮೈದಾನದಲ್ಲಿ ಮಕ್ಕಳಿಗೆ ರಂಗೋಲಿ, ಗಾಳಿಪಟ ಹಾರಿಸುವುದು, ವಸ್ತು ಪ್ರದರ್ಶನ, ಪಥಸಂಚಲನ, ಚಿತ್ರಕಲೆ, ವೆಜಿಟಬಲ್ ಕಾರ್ವಿಂಗ್, ಕ್ಲೇ ಮಾಡಲಿಂಗ್, ಕರಕುಶಲ ವಸ್ತುಗಳ ತಯಾರಿಕೆ, ಛದ್ಮವೇಷ, ಕುಕಿಂಗ್‌ ವಿಥ್‌ಔಟ್‌ ಫೈರ್‌, ಫೇಸ್‌ ಚಿತ್ರಕಲೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು. 

ವಿದ್ಯಾರ್ಥಿಗಳ ಛದ್ಮವೇಷ ಗಮನ ಸೆಳೆಯಿತು. ಅರ್ಧನಾರೀಶ್ವರ, ವೆಂಕಟೇಶ್ವರ, ಹನುಮ, ಒನಕೆ ಓಬವ್ವ ಸೇರಿದಂತೆ ವಿವಿಧ ವೇಷಗಳು ನೋಡುಗರ ಕಣ್ಮನ ಸೆಳೆದವು. 

ADVERTISEMENT

ಉರಿ ಬಿಸಿಲಿನಲ್ಲಿಯೂ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಗಾಳಿಪಟ ಹಾರಿಸುವಲ್ಲಿ ವಿದ್ಯಾರ್ಥಿಗಳು ಮಗ್ನರಾಗಿದ್ದರು. ಪಥಸಂಚಲನ ಸ್ಪರ್ಧೆಯಲ್ಲಿ ಲೆಫ್ಟ್‌ ರೈಟ್‌ ಎಂಬ ಸದ್ದು ಪ್ರೇಕ್ಷಕರನ್ನು ಸೆಳೆಯಿತು.

ಶಾಸಕ ಬಿ.ಶಿವಣ್ಣ ಮಾತನಾಡಿ, ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳು ಮೌಲ್ಯಾಧಾರಿತ ಗುಣಗಳನ್ನು ಬೆಳೆಸಿಕೊಳ್ಳಬೇಕು. ಪಠ್ಯಾಧಾರಿತ ಶಿಕ್ಷಣದ ಜೊತೆಗೆ ಸಹಪಠ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ವಿದ್ಯಾರ್ಥಿಗಳನ್ನು ಶಿಕ್ಷಕರು ಹುರಿದುಂಬಿಸಬೇಕು. ಸಾಹಿತ್ಯ, ಕ್ರೀಡೆ, ಸಂಸ್ಕೃತಿ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಮಾಹಿತಿ ನೀಡಬೇಕು. ಸ್ಕೌಟ್ಸ್‌ ಮತ್ತು ಗೈಡ್ಸ್‌ನಲ್ಲಿ ಭಾಗಿಯಾಗುವುದರಿಂದ ದೇಶಭಕ್ತಿ, ನಾಯಕತ್ವ ಮತ್ತು ಶಿಸ್ತು ಹೆಚ್ಚುತ್ತದೆ. ಸ್ಕೌಟ್ಸ್‌, ಗೈಡ್ಸ್ ಮತ್ತು ಎನ್‌ಎಸ್‌ಎಸ್‌ನಲ್ಲಿ ಭಾಗಿಯಾಗುವುದರಿಂದ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದರು. 

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಆಯುಕ್ತ ಚಿನ್ನಸ್ವಾಮಿ ರೆಡ್ಡಿ ಮಾತನಾಡಿ, ಸ್ಕೌಟ್ ಸಂಸ್ಥೆ ಸಂಸ್ಥಾಪಕ ಲಾರ್ಡ್ ಬೇಡನ್ ಪೊವೆಲ್ ಅವರು ತಮ್ಮ ಮಿಲಿಟರಿ ಜೀವನದ ಅನುಭವದ ಆಧಾರದಲ್ಲಿ 117 ವರ್ಷಗಳ ಹಿಂದೆ ಒಂದು ಸಣ್ಣ ದ್ವೀಪದಲ್ಲಿ 20 ವಿದ್ಯಾರ್ಥಿಗಳಿಗೆ ಶಿಬಿರ ನಡೆಸಿದರು. ಅದು ಇದೀಗ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಾಗಿ ಈಗ ಇಡೀ ವಿಶ್ವದಾದ್ಯಂತ ವ್ಯಾಪಿಸಿದೆ. ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಸದಾ ಕ್ರಿಯಾಶೀಲವಾಗಿರುವಂತೆ ಮಾಡಿದೆ. ಇಂದು ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆ, ಕಲೆ, ಕೌಶಲ್ಯಗಳನ್ನು ಗುರುತಿಸಿ ಅದನ್ನು ಹೊರತಂದು ಅವರ ಆತ್ಮಸ್ಥೈರ್ಯ ಹೆಚ್ಚು ಮಾಡುತ್ತದೆ ಎಂದರು.

ಸ್ಕೌಟ್ಸ್‌ನ ಜಿಲ್ಲಾ ಕಾರ್ಯದರ್ಶಿ ಎ.ಎನ್.ನರೇಂದ್ರ ಕುಮಾರ್‌ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪ್ರತಿಭೆಯಿರುತ್ತದೆ. ಆದರೆ ಉತ್ತಮ ವೇದಿಕೆ ದೊರೆತಿರುವುದಿಲ್ಲ. ಹಾಗಾಗಿ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗೆ ವೇದಿಕೆ ಕಲ್ಪಿಸಲು ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೇಳ ಆಯೋಜಿಸಲಾಗಿದೆ. ಗಾಳಿಪಟ ಹಾರಿಸುವ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಗ್ರಾಮೀಣ ಸೊಗಡಿನ ವಾತಾವರಣ ತಿಳಿಸಲು ಇಂತಹ ಸ್ಪರ್ಧೆಗಳ ಅವಶ್ಯಕತೆಯಿದೆ ಎಂದರು.

ಬಮೂಲ್‌ ನಿರ್ದೇಶಕ ಆರ್‌.ಕೆ.ರಮೇಶ್‌, ಟೊಯೊಟೊ ಇಂಡಸ್ಟ್ರೀಸ್‌ ಉಪ ಪ್ರಧಾನ ವ್ಯವಸ್ಥಾಪಕ ಸತೀಶ್‌, ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಗುರುಮೂರ್ತಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಆನೇಕಲ್‌ ಅಧ್ಯಕ್ಷ ಪುರುಷೋತ್ತಮರೆಡ್ಡಿ, ಸ್ಕೌಟ್ಸ್‌ ಸಂಸ್ಥೆ ಜಿಲ್ಲಾ ಪದಾಧಿಕಾರಿ ನರೇಂದ್ರಕುಮಾರ್, ಮುನಿಕೃಷ್ಣಪ್ಪ, ವರಲಕ್ಷ್ಮಿ, ನಟೇಶ್‌, ಆರ್‌.ಎಲ್‌. ನಾರಾಯಣಸ್ವಾಮಿ, ವಸಂತಮ್ಮ, ಸುಮಾ ಇದ್ದರು.

ಭಾರತ್ ಸ್ಕೌಟ್ಸ್ ಮತ್ತ ಗೈಡ್ಸ್‌ನ ಜಿಲ್ಲಾ ಮಟ್ಟದ ಮೇಳದಲ್ಲಿ ಛದ್ಮವೇಷದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು
ಭಾರತ್ ಸ್ಕೌಟ್ಸ್ ಮತ್ತ ಗೈಡ್ಸ್‌ನ ಜಿಲ್ಲಾ ಮಟ್ಟದ ಮೇಳದಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಶಾಸಕ ಬಿ.ಶಿವಣ್ಣ ಸನ್ಮಾನಿಸಿದರು