ADVERTISEMENT

ಬೂದಿಗೆರೆ: ಶಿವಕುಮಾರ ಸ್ವಾಮೀಜಿ ಕಂಚಿನ ಪ್ರತಿಮೆ ಅನಾವರಣ

ಬೂದಿಗೆರೆಯಲ್ಲಿ ಸಿದ್ಧಗಂಗಾ ಹಳೇ ವಿದ್ಯಾರ್ಥಿಗಳ ಸಂಘದಿಂದ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 24 ಜೂನ್ 2022, 3:06 IST
Last Updated 24 ಜೂನ್ 2022, 3:06 IST
ಚನ್ನರಾಯಪಟ್ಟಣ ಹೋಬಳಿ ಬೂದಿಗೆರೆಯಲ್ಲಿ ನಿರ್ಮಾಣ ಮಾಡಿರುವ ಸಿದ್ಧಗಂಗಾ ಆಂಗ್ಲ ಮಾಧ್ಯಮ ಶಾಲೆಯನ್ನು ಸಿದ್ಧಲಿಂಗಸ್ವಾಮಿ ಉದ್ಘಾಟಿಸಿ ಮಾತನಾಡಿದರು
ಚನ್ನರಾಯಪಟ್ಟಣ ಹೋಬಳಿ ಬೂದಿಗೆರೆಯಲ್ಲಿ ನಿರ್ಮಾಣ ಮಾಡಿರುವ ಸಿದ್ಧಗಂಗಾ ಆಂಗ್ಲ ಮಾಧ್ಯಮ ಶಾಲೆಯನ್ನು ಸಿದ್ಧಲಿಂಗಸ್ವಾಮಿ ಉದ್ಘಾಟಿಸಿ ಮಾತನಾಡಿದರು   

ಬೂದಿಗೆರೆ (ವಿಜಯಪುರ): ಚನ್ನರಾಯಪಟ್ಟಣ ಹೋಬಳಿ ಬೂದಿಗೆರೆಯಲ್ಲಿ ಸಿದ್ಧಗಂಗಾ ಹಳೇ ವಿದ್ಯಾರ್ಥಿಗಳ ಸಂಘದಿಂದ ನಿರ್ಮಾಣ ಮಾಡಿರುವ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಕಂಚಿನ ಪ್ರತಿಮೆ ಅನಾವರಣ ಮಾಡಲಾಯಿತು.

ಆಂಗ್ಲ ಮಾಧ್ಯಮ ಶಾಲಾ ಕಟ್ಟಡ ಉದ್ಘಾಟನಾ ಸಮಾರಂಭವನ್ನು ಸಿದ್ಧಗಂಗಾಮಠದ ಸಿದ್ಧಲಿಂಗ ಸ್ವಾಮೀಜಿ ಉದ್ಘಾಟನೆ ಮಾಡಿದರು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಗಮನಸೆಳೆದವು. ಜಾನಪದ ಕಲಾತಂಡಗಳು ಹಾಗೂ ಪೂರ್ಣಕುಂಭದೊಂದಿಗೆ ಸ್ವಾಗತ ಕೋರಿದರು.

ಶಾಲಾಕಟ್ಟಡದ ದಾನಿಗಳಾದ ಗೋಧೂಳಿ ಡೆವಲಪರ್ ಶಾಂತ್ ಕುಮಾರ್, ಪಿಎಲ್.ಡಿ.ಬ್ಯಾಂಕ್ ನಿರ್ದೇಶಕ ನಾರಾಯಣಸ್ವಾಮಿ, ಲಕ್ಷ್ಮೀನಾರಾಯಣಪ್ಪ, ಹಾಗೂ ಶಾಲೆಗೆ ಭೂಮಿಯನ್ನು ದಾನ ಮಾಡಿರುವ ಪಿಳ್ಳಪ್ಪ, ಕಟ್ಟಡ ನಿರ್ಮಾಣ ಮಾಡಿಸಿಕೊಟ್ಟಿರುವ ಮರಿಶಾಮಪ್ಪ, ಮುದ್ದಪ್ಪ, ಎಂ.ಕೆ.ಗೋಪಾಲಪ್ಪ, ಅವರನ್ನು ನೆನಪಿಸಿಕೊಂಡರು. ಶಾಲಾ ಕಟ್ಟಡ ನಿರ್ಮಾಣಕ್ಕೆ
ಸಹಕಾರ ನೀಡಿದ್ದವರನ್ನು ಸನ್ಮಾನಿಸಿದರು.

ADVERTISEMENT

ಸಿದ್ಧಲಿಂಗಸ್ವಾಮಿ ಮಾತನಾಡಿ, ‘ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು, ಕೇವಲ ಶಿಕ್ಷಣ ಪಡೆದುಕೊಂಡರೆ ಸಾಲದು, ಉತ್ತಮ ಸಂಸ್ಕಾರವನ್ನು ಪಡೆದುಕೊಳ್ಳಬೇಕು. ಶಿಕ್ಷಣ ಸಂಸ್ಥೆಗಳು ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರವನ್ನು
ಕಲಿಸುವಂತಹ ಕೆಲಸ ಮಾಡಬೇಕು. ಶಿವಕುಮಾರ ಸ್ವಾಮೀಜಿ, ಸ್ವಾಮಿ ವಿವೇಕಾನಂದರಿಂದ ಪ್ರೇರಣೆಗೊಂಡು ಸಮಾಜವನ್ನು ಪರಿವರ್ತನೆ ಹಾಗೂ ಅಭಿವೃದ್ಧಿಯ ಕಡೆಗೆ ಕೊಂಡೊಯ್ಯಬೇಕಾದರೆ, ಶಿಕ್ಷಣದಿಂದ ಮಾತ್ರ ಸಾಧ್ಯವೆಂಬುದನ್ನು ಅರಿತುಕೊಂಡು, ಮಠದಲ್ಲಿ ಜಾತಿ, ಮತ, ಭೇದವಿಲ್ಲದೇ ಶಿಕ್ಷಣ ನೀಡುವ ಕಾರ್ಯವನ್ನು ಕೈಗೆತ್ತಿಕೊಂಡರು’ ಎಂದರು.

‘ಸರ್ಕಾರ ಕೆಲಸ ಮಾಡಿದಿದ್ದಾಗ, ಎಲ್ಲಾ ಮಕ್ಕಳು ಶಿಕ್ಷಣ ಪಡೆಯಲಿಕ್ಕೆ ಸಾಧ್ಯವಿಲ್ಲದೇ ಇರುವಾಗ, ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಸಂಸ್ಕಾರವಂತ ಶಿಕ್ಷಣ ಕೊಡಲಿಕ್ಕೆ ನಮ್ಮ ಮಠ ಕೆಲಸ ಮಾಡುತ್ತಿದೆ. ಗ್ರಾಮೀಣ ಭಾಗದಲ್ಲಿ ಹಳೇಯ ವಿದ್ಯಾರ್ಥಿಗಳು ಒಗ್ಗಟ್ಟು ಕಾಪಾಡಿಕೊಂಡು ಶಿಕ್ಷಣ ಸಂಸ್ಥೆ ಕಟ್ಟಿರುವುದು ಶ್ಲಾಘನೀಯವಾಗಿದ್ದು, ಮುಂದಿನ ದಿನಗಳಲ್ಲಿ ಶಾಲೆಗೆ ಅಗತ್ಯವಾಗಿರುವ ಸೌಕರ್ಯಗಳನ್ನು ಒದಗಿಸಿಕೊಡುವಂತಹ ಕೆಲಸವನ್ನೂ ಮಾಡಬೇಕಾಗಿದೆ.ಮಕ್ಕಳಲ್ಲಿ ಓದುವಂತಹ ಅಭಿರುಚಿ ಕಡಿಮೆಯಾಗದಂತೆ ನೋಡಿಕೊಳ್ಳಬೇಕು’ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ ಮಾತನಾಡಿ, ‘ಸಿದ್ಧಗಂಗಾ ಶ್ರೀಗಳು ತೋರಿಸಿಕೊಟ್ಟಿರುವ ಮಾರ್ಗದಲ್ಲಿ ನಾವೆಲ್ಲರೂ ನಡೆಯುವುದು ಅನಿವಾರ್ಯವಾಗಿದೆ. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಶಿಕ್ಷಣದ ಜೊತೆಗೆ ಕನ್ನಡ ಸಾಹಿತ್ಯ, ಭಾಷೆಯನ್ನು ಉಳಿಸಿ ಬೆಳೆಸಬೇಕಾಗಿದೆ. ಗ್ರಾಮೀಣ ಭಾಗದಲ್ಲಿನ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರವಾದದ್ದು’ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಆನಂದ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಭಾರತಿ ಲಕ್ಷ್ಮಣಗೌಡ, ಸಿದ್ಧಗಂಗಾ ಹಳೇಯ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷ ಎಂ.ಭೈರೇಗೌಡ, ಅಧ್ಯಕ್ಷ ಕೆ.ಶ್ರೀನಿವಾಸಗೌಡ, ಉಪಾಧ್ಯಕ್ಷರಾದ ಎಂ.ರಮೇಶ್, ಕೆ.ರಮೇಶ್, ಪ್ರಧಾನ ಕಾರ್ಯದರ್ಶಿ ಆರ್.ಈರಣ್ಣ, ಖಜಾಂಚಿ ಎಂ.ಶಿವರಾಜು, ಸಹ ಖಜಾಂಚಿ ಎ.ಗೋಪಿನಾಥ್, ಸಹಕಾರ್ಯದರ್ಶಿ ನಾರಾಯಣಸ್ವಾಮಿ, ಆರ್.ಪ್ರಭಾಕರ್, ಸಿ.ನಟರಾಜ್, ಕೆ.ನಾಗರಾಜ್, ವಿ.ಅನಂತರಾಜು, ಸುನೀಲ್, ಚೇತನ್, ಸುರೇಶ್, ಶೈಲಜಾ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.