ದೇವನಹಳ್ಳಿ: ತಾಲ್ಲೂಕಿನ ಕುಂದಾಣ ಹೋಬಳಿಯ ಸಿಂಗ್ರಹಳ್ಳಿ ಗ್ರಾಮದ ಸರ್ವೆ ನಂ 6ರ ಗೋಮಾಳದಲ್ಲಿ 4 ಎಕರೆ ದಲಿತರ ಸ್ಮಶಾನಕ್ಕಾಗಿ ಮೀಸಲಿಟ್ಟಿರುವ ಜಾಗಕ್ಕೆ ಶುಕ್ರವಾರ ರಾತ್ರಿ ಕಾಂಪೌಂಡ್ ನಿರ್ಮಿಸಿದ್ದು, ಸ್ಥಳೀಯರು ಭೂಮಿ ಉಳಿವಿಗಾಗಿ ಹೋರಾಟಕ್ಕೆ ಮುಂದಾಗಿದ್ದಾರೆ.
ಜಾಲಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಎಂ. ಆನಂದ್ ಕುಮಾರ್ ಮಾತನಾಡಿ, ‘ಜಿಲ್ಲಾಡಳಿತ ಭವನದ ಸಮೀಪದ, ವಿಮಾನ ನಿಲ್ದಾಣದಿಂದ 15 ಕಿ.ಮೀ ದೂರದಲ್ಲಿರುವ ಸಿಂಗ್ರಹಳ್ಳಿ ಗ್ರಾಮದ ಸರ್ಕಾರಿ ಭೂಮಿಯನ್ನು ಕಬಳಿಕೆ ಮಾಡಲು ಬಲಾಢ್ಯರು ಮುಂದಾಗಿದ್ದಾರೆ’ ಎಂದು ಆರೋಪಿಸಿದರು.
‘ಕಂದಾಯ ಅಧಿಕಾರಿಗಳು ಸಿಂಗ್ರಹಳ್ಳಿ ಗ್ರಾಮದಲ್ಲಿ 4 ಎಕರೆ ದಲಿತರ ಸ್ಮಶಾನಕ್ಕಾಗಿ ಕಾಯ್ದಿರಿಸಿದ್ದಾರೆ. ಈಗಾಗಲೇ ಸಮಾಧಿ ಇರುವ ಭೂಮಿಗೆ ರಾತ್ರೋರಾತ್ರಿ ಬಂದು ಕಾಂಪೌಂಡ್ ಹಾಕಿ ಒತ್ತುವರಿ ಮಾಡಿದ್ದಾರೆ’ ಎಂದು ದೂರಿದರು.
‘ಶುಕ್ರವಾರ ನೂರಾರು ಜನ ಕಾಂಪೌಂಡ್ ಹಾಕಲು ಮುಂದಾಗಿದ್ದರು. ಇದನ್ನು ತಡೆಯಲು ಕುಂದಾಣ ನಾಡಕಚೇರಿಯಿಂದ ಆರ್‌ಐ ಉಪೇಂದ್ರ ಕುಮಾರ್ ಸೇರಿದಂತೆ ಕಂದಾಯ ಅಧಿಕಾರಿಗಳು ಬಂದು, ಕಾಂಪೌಂಡ್ ಹಾಕದಂತೆ ಸೂಚನೆ ನೀಡಿದ್ದರೂ ಯಾರ ಮಾತಿಗೂ ಬೆಲೆ ನೀಡದೇ ರಾತ್ರಿ ಕಾಂಪೌಂಡ್ ಹಾಕಿದ್ದಾರೆ’ ಎಂದು ತಿಳಿಸಿದರು.
ಸಿಂಗ್ರಹಳ್ಳಿ ಗ್ರಾಮದ ನಿವಾಸಿ ನರಸಿಂಹಯ್ಯ ಮಾತನಾಡಿ, ‘4 ಎಕರೆ ಸ್ಮಶಾನದ ಜಾಗವಿದೆ. ಇದು ಮಾದಿಗರಿಗಾಗಿ ಮೀಸಲಿಟ್ಟಿರುವ ಸ್ಮಶಾನದ ಜಾಗ. ಇದನ್ನು ಒತ್ತುವರಿ ಮಾಡಲು ಭೂಗಳ್ಳರು ಮುಂದಾಗಿದ್ದಾರೆ. 10 ಗುಂಟೆಯಷ್ಟು ಸ್ಮಶಾನದ ಜಾಗ ಕಬಳಿಸಿ ರಾತ್ರೋರಾತ್ರಿ ತಡೆಗೋಡೆ ನಿರ್ಮಿಸಿದ್ದಾರೆ ಕಂದಾಯ ಇಲಾಖೆ ಅಧಿಕಾರಿಗಳೂ ಮೌನಕ್ಕೆ ಶರಣಾಗಿದ್ದಾರೆ’ ಎಂದರು.
ಸ್ಮಶಾನ ಜಾಗ ಒತ್ತುವರಿ ತೆರವುಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ದೇವನಹಳ್ಳಿ ತಹಶೀಲ್ದಾರ್‌ಗೆ ಮನವಿ ನೀಡಿದರು. ಸೋಲೂರು ನಾಗರಾಜ್, ಕಾರಹಳ್ಳಿ ಶ್ರೀನಿವಾಸ್, ರಾಯಸಂದ್ರ ಸೋಮಶೇಖರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.