‘ಸರ್ಕಾರಿ ಜಮೀನು ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಡಿ’
ಆನೇಕಲ್ : ರಾಜ್ಯ ಸರ್ಕಾರ ಸ್ವಾಧೀನ ಪಡಿಸಿರುವ ಸರ್ಕಾರಿ ಜಮೀನುಗಳನ್ನು ಹರಾಜು ಮಾಡುವುದನ್ನು ನಿಲ್ಲಿಸಿ ಸಾರ್ವಜನಿಕ ಉದ್ದೇಶಗಳಿಗಾಗಿ ಸರ್ಕಾರಿ ಜಮೀನುಗಳನ್ನು ಮೀಸಲಿಡಬೇಕು ಎಂದು ಒತ್ತಾಯಿಸಿ ಪ್ರಜಾ ವಿಮೋಚನಾ ಚಳವಳಿ ಸಂಘಟನೆಯ ಕಾರ್ಯಕರ್ತರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಆನೇಕಲ್ ಕೃಷ್ಣಪ್ಪ ಮಾತನಾಡಿ, ‘ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಐದು ತಾಲ್ಲೂಕುಗಳಲ್ಲಿ ಜಿಲ್ಲಾಡಳಿತವು ಸುಮಾರು 16 ಸಾವಿರ ಎಕರೆ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಆದರೆ ಈ ಜಮೀನುಗಳನ್ನು ಸರ್ಕಾರ ಹರಾಜು ಮಾಡಲು ತೀರ್ಮಾನಿಸಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಸರ್ಕಾರಿ ಜಮೀನನ್ನು ವಸತಿಹೀನ ಬಡ ಕುಟುಂಬಗಳಿಗೆ ನೀಡಿ ಸೂರು ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
‘ಸರ್ಕಾರಿ ಭೂಮಿಯನ್ನು ಹರಾಜು ಹಾಕಿ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸುವ ಸರ್ಕಾರದ ನಿರ್ಧಾರ ಸಾರ್ವಜನಿಕರಿಗೆ ಮಾಡಿದ ಮೋಸ. ಸರ್ಕಾರಿ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಡಬೇಕೆ ವಿನಃ ಬಂಡವಾಳಗಾರರಿಗೆ ಹರಾಜು ಮೂಲಕ ನೀಡುವ ತೀರ್ಮಾನ ಕೈಬಿಡಬೇಕು’ ಎಂದು ಒತ್ತಾಯಿಸಿದರು.
ಸಂಘಟನೆಯ ಬೆಂಗಳೂರು ವಿಭಾಗೀಯ ಅಧ್ಯಕ್ಷ ಯಡವನಹಳ್ಳಿ ಕೃಷ್ಣಪ್ಪ, ಪದಾಧಿಕಾರಿಗಳಾದ ಅರೇಹಳ್ಳಿ ಅಶ್ವಥ್, ರವಿ, ವೆಂಕಟೇಶ್, ಎ.ಲವ, ಮುನಿರಾಜು, ವೆಂಕಟೇಶ್, ನಾಗರಾಜು, ವ್ರಜಪ್ಪ, ಹಳೇಹಳ್ಳಿ ರವಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.