ವಿಜಯಪುರ (ದೇವನಹಳ್ಳಿ): ಹಲವು ದಶಕಗಳ ಹೋರಾಟದ ಫಲವಾಗಿ ಪಟ್ಟಣದ ಹೊರವಲಯದ ಪಂಚಜನ್ಯ ಲೇಔಟ್‍ನಲ್ಲಿ ನಿರ್ಮಾಣಗೊಂಡಿರುವ ಮಹರ್ಷಿ ವಾಲ್ಮೀಕಿ ಭವನದ ನೂತನ ಕಟ್ಟಡ ಉದ್ಘಾಟನೆಗೊಂಡ ಬಳಿಕ ಬಳಕೆಯಾಗದೇ ಅನಾಥವಾಗಿದೆ.
ಸದ್ಯ ಕಟ್ಟಡದ ಕಾಂಪೌಂಡ್ ಒಳಗಡೆ ಪ್ರವೇಶಿಸಿದರೆ ಒಡೆದ ಗಾಜಿನ ಕಿಟಕಿ, ಮುರಿದ ಬೀಗ, ಕಟ್ಟಡದ ಸುತ್ತ, ಮೇಲ್ಛಾವಣಿ ಮೇಲೆ ಆವರಿಸಿರುವ ಗಿಡಗಂಟಿಗಳು, ಕಳ್ಳರಿಗೆ, ಕುಡುಕರಿಗೆ ತಾಣವಾಗಿದೆ. ಮೂಲಸೌಕರ್ಯಗಳಾದ ನೀರು, ಸ್ವಚ್ಛತೆ, ಶೌಚಾಲಯ, ಸಿಬ್ಬಂದಿ, ನಿರ್ವಹಣೆ ಕೊರತೆ, ವಿದ್ಯುತ್ ಇಲ್ಲದಿರುವುದು ದರ್ಶನವಾಗುತ್ತದೆ.
ಪರಿಶಿಷ್ಟ ವರ್ಗಗಳ ಅಸ್ಮಿತೆಯಾಗಬೇಕಿದ್ದ ವಾಲ್ಮೀಕಿ ಭವನ ಈಗ ಹಲ್ಲಿ, ಹಾವು, ಇಲಿ ಹೆಗ್ಗಣಗಳ ಆಶ್ರಯತಾಣವಾಗಿ ದುರ್ವಾಸನೆ ಬೀರುತ್ತಿದೆ.
ಸರ್ಕಾರ ಭವನದ ಕಟ್ಟಡ ಕಾಮಗಾರಿಗೆ ₹50 ಲಕ್ಷ, ಕಾಂಪೌಂಡ್ ನಿರ್ಮಿಸಲು ₹7 ಲಕ್ಷ ವೆಚ್ಚ ಮಾಡಿದೆ. ಆದರೆ ಭವನದಲ್ಲಿ ಮೂಲಸೌಲಭ್ಯ ಒದಗಿಸದೆ ಕೈ ಚೆಲ್ಲಿರುವುದರಿಂದ ಸಮುದಾಯ ಬಳಕೆಗೆ ಇದ್ದು ಇಲ್ಲದಂತಾಗಿದೆ. ನಮ್ಮ ಸಮಾಜಕ್ಕೆ ಅಧಿಕಾರಿಗಳಿಂದ ಅನ್ಯಾಯವಾಗುತ್ತಿದೆ ಎಂದು ಸಮಾಜದ ಮುಖಂಡರು ಆರೋಪಿಸಿದ್ದಾರೆ.
ಅನೈತಿಕ ಚಟುವಟಿಕೆಗೆ ತಾಣ: 2016ರಲ್ಲಿ ವಾಲ್ಮೀಕಿ ಭವನದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿತು. ಚುನಾವಣೆ ಇತರೆ ಕಾರಣಗಳಿಂದ ವರ್ಷಾನುಗಟ್ಟಲೆ ಕಾಮಗಾರಿ ವಿಳಂಬವಾಯಿತು. 2023ರ ಅಕ್ಟೋಬರ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರು ವಾಲ್ಮೀಕಿ ಭವನವನ್ನು ಉದ್ಘಾಟಿಸಿದರು. ನಂತರ ಜಿಲ್ಲಾಧಿಕಾರಿ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ, ಪುರಸಭೆ ಅಧಿಕಾರಿಗಳು ಭವನದ ಬಳಕೆಯ ಕಡೆಗೆ ಗಮನ ಹರಿಸದ ಕಾರಣ ಈಗ ಅನೈತಿಕ ಚಟುವಟಿಕೆಗೆ ತಾಣವಾಗಿದೆ ಎಂದು 8ನೇ ವಾರ್ಡಿನ ಪುರಸಭೆ ಸದಸ್ಯ, ವಾಲ್ಮೀಕಿ ನಾಯಕರ ಸಂಘದ ಮುಖಂಡ ಸಿ.ಎಂ.ರಾಮು ಆರೋಪಿಸಿದ್ದಾರೆ.
ವಿಜಯಪುರ ಟೌನ್ ನಲ್ಲಿ ವಾಲ್ಮೀಕಿ ಸಮುದಾಯದ ಮೂರು ಸಾವಿರ ಜನಸಂಖ್ಯೆ ಇದೆ. ವಾಲ್ಮೀಕಿ ಜಯಂತಿ ಆಚರಿಸಲು ಭವನ ಇದ್ದರೂ ಇಲ್ಲವಾಗಿದೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ತರಾತುರಿಯಲ್ಲಿ ಭವನದ ಕಟ್ಟಡದಲ್ಲಿ ಮೂಲಸೌಲಭ್ಯ ಕಲ್ಪಿಸಿದೆ ಉದ್ಘಾಟಿಸಿರುವುದರಿಂದ ಇಲ್ಲಿನ ಪುರಸಭೆಯ ಅಧಿಕಾರಿಗಳು ನಿರ್ವಹಣೆಯ ಕುಂಟು ನೆಪ ಹೇಳಿ ಕಾಲ ಕಳೆಯುತ್ತಿದ್ದಾರೆ ಎಂದು ಅವರು ದೂರಿದರು.
ಮನವಿಗೆ ಸ್ಪಂದನೆ ಇಲ್ಲ
ವಾಲ್ಮೀಕಿ ಭವನವನ್ನು ಸಮುದಾಯದ ಸದ್ಭಳಕೆಗೆ ಸಂಬಂಧಪಟ್ಟ ವಿವಿಧ ಇಲಾಖೆಯ ಅಧಿಕಾರಿಗಳಿಗೆ ವಾಲ್ಮೀಕಿ ನಾಯಕರ ಸಂಘದಿಂದ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಈವರೆಗೆ ಸ್ಪಂದನೆ ಸಿಕ್ಕಿಲ್ಲ ಎಂದು ಸಮಾಜದ ಮುಖಂಡರು ಬೇಸರ ವ್ಯಕ್ತಪಡಿಸಿದರು. ಮೂಲ ಸೌಲಭ್ಯ ಕಲ್ಪಿಸಿ ವಾಲ್ಮೀಕಿ ಸಮುದಾಯ ಆರ್ಥಿಕವಾಗಿ ಹಿಂದುಳಿದೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಬೇರೆ ಕಡೆ ಶುಭ ಕಾರ್ಯಗಳನ್ನು ಮಾಡಲು ಸಮುದಾಯದ ಸಾಂಸ್ಕೃತಿ ಚಟುವಟಿಕೆಗಳನ್ನು ಆಯೋಜಿಸಲು ಸಾಧ್ಯವಾಗುತ್ತಿಲ್ಲ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ವಾಲ್ಮೀಕಿ ಭವನಕ್ಕೆ ಮೂಲಸೌಲಭ್ಯ ಕಲ್ಪಿಸಬೇಕು. ಸಿ.ಎಂ.ರಾಮು ಪುರಸಭೆ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.