ADVERTISEMENT

ವಿದ್ಯುತ್‌ ಚಾಲಿತ AC ಬಸ್‌ಗೆ ಚಾಲನೆ:ಕೆಐಎಯಿಂದ ಬೆಂಗಳೂರು ವಿವಿಧ ಭಾಗಕ್ಕೆ ಸಂಪರ್ಕ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 22:39 IST
Last Updated 14 ಆಗಸ್ಟ್ 2025, 22:39 IST
ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌–2ರಲ್ಲಿ ವಿದ್ಯುತ್ ಚಾಲಿತ ಹವಾನಿಯಂತ್ರಿತ ವಾಯು ವಜ್ರ ಬಸ್‌ಗಳ ಸಂಚಾರಕ್ಕೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಸಂಸದ ಡಾ.ಕೆ.ಸುಧಾಕರ್‌ ಚಾಲನೆ ನೀಡಿದರು
ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌–2ರಲ್ಲಿ ವಿದ್ಯುತ್ ಚಾಲಿತ ಹವಾನಿಯಂತ್ರಿತ ವಾಯು ವಜ್ರ ಬಸ್‌ಗಳ ಸಂಚಾರಕ್ಕೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಸಂಸದ ಡಾ.ಕೆ.ಸುಧಾಕರ್‌ ಚಾಲನೆ ನೀಡಿದರು   

ದೇವನಹಳ್ಳಿ: ಬೆಂಗಳೂರು ಮಹಾನಗರದ ವಿವಿಧ ಭಾಗಗಳಿಗೆ ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಂಪರ್ಕ ಕಲ್ಪಿಸುವ ‘ವಾಯು ವಜ್ರ’ ಸೇವೆಗೆ ನೂತನವಾಗಿ 84 ವಿದ್ಯುತ್ ಚಾಲಿತ ಬಸ್‌ಗಳು ಸೇರ್ಪಡೆಗೊಂಡಿದ್ದು, ಗುರುವಾರ ಸಾಂಕೇತವಾಗಿ ಹತ್ತು ಬಸ್‌ಗಳನ್ನು ಸೇವೆಗೆ ಮುಕ್ತಗೊಳಿಸಲಾಯಿತು.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಸಂಸದ ಡಾ.ಕೆ.ಸುಧಾಕರ್ ನೂತನ ಬಸ್‌ಗಳಿಗೆ ಚಾಲನೆ ನೀಡಿದರು. ನಂತರ ಮಾತನಾಡಿದ ರಾಮಲಿಂಗಾ ರೆಡ್ಡಿ, ‘ಬಿಎಂಟಿಸಿಯಲ್ಲಿ 10 ಸಾವಿರಕ್ಕೂ ಅಧಿಕ ಬಸ್‌ಗಳಿವೆ. ಅದರಲ್ಲಿ ಬಹುತೇಕ ಶೂನ್ಯ ಮಾಲಿನ್ಯ ಬಸ್‌ಗಳಾಗಿವೆ. ಇದರಿಂದ ಮಾಲಿನ್ಯ ನಿಯಂತ್ರಣ ಹಾಗೂ ಇಂಧನ ವೆಚ್ಚ ತಗ್ಗಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ನಗರದ ವಿವಿಧ ಭಾಗಗಳಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನೂತನ ಜಿಸಿಸಿ ಮಾದರಿಯ ವಿದ್ಯುತ್‌ ಚಾಲಿತ ಎಸಿ ಬಸ್‌ಗಳನ್ನು ನೀಡಲಾಗುತ್ತಿದೆ. ಇವುಗಳ ಚಾರ್ಜ್‌ಗಾಗಿ ವಿಮಾನ ನಿಲ್ದಾಣದ ಪಿ7 ಪಾರ್ಕಿಂಗ್‌ನಲ್ಲಿ 240 ಕಿಲೋ ವ್ಯಾಟ್‌ ಸಾಮರ್ಥ್ಯದ 9 ಚಾರ್ಜರ್‌ ಅಳವಡಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಸಂಸದ ಕೆ.ಸುಧಾಕರ್ ಮಾತನಾಡಿ, ಬೆಂಗಳೂರಿನ ಸುಸ್ಥಿರ ಮತ್ತು ಹಸಿರು ಸಂಚಾರ ವ್ಯವಸ್ಥೆಗೆ ಬಲನೀಡುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಮಹತ್ವಾಕಾಂಕ್ಷಿ ಯೋಜನೆಯಾದ ಪಿಎಂ ಇ-ಡ್ರೈವ್‌ ಯೋಜನೆಯಡಿ ಬೆಂಗಳೂರು ಮಹಾನಗರಕ್ಕೆ 4,500 ಬಸ್‌ ನೀಡಲಾಗಿದೆ ಎಂದು ತಿಳಿಸಿದರು.

ವಿದ್ಯುತ್‌ ಚಾಲಿತ ಬಸ್‌ಗಳ ಮೂಲ ಸೌಕರ್ಯಕ್ಕಾಗಿ ಬಿಎಂಟಿಸಿ ₹1.5 ಕೋಟಿ ಹೂಡಿಕೆ ಮಾಡಿದೆ. ಮೊದಲ ಹಂತದಲ್ಲಿ 10 ನೂತನ ವಿದ್ಯುತ್ ಚಾಲಿತ ಬಸ್‌ಗಳು ಆಗಸ್ಟ್‌ 14ರಿಂದ ಕಾರ್ಯಾಚರಣೆ ಮಾಡುತ್ತಿವೆ
ರಾಮಲಿಂಗಾ ರೆಡ್ಡಿ ಸಾರಿಗೆ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.