ADVERTISEMENT

ದೊಡ್ಡಬಳ್ಳಾಪುರ: ಸಂಗೀತ ಜ್ಞಾನ ದೂರ; ವೀಣೆಗೆ ಜೀವ

ಪೆನ್ನ ಓಬಳಯ್ಯ ನಾದ ಸಾಂಗತ್ಯ ಅಂತ್ಯ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 2:28 IST
Last Updated 4 ನವೆಂಬರ್ 2025, 2:28 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಸಿಂಪಾಡಿಪುರದ ಪೆನ್ನ ಓಬಳಯ್ಯ ಅವರ ಪಾರ್ಥೀವ ಶರೀರಕ್ಕೆ ತಾಲ್ಲೂಕು ಆಡಳಿತದ ಪರವಾಗಿ ತಹಶೀಲ್ದಾರ್‌ ವಿಭಾ ವಿದ್ಯಾ ರಾಥೋಡ್‌ ಗೌರವ ಸಲ್ಲಿಸಿದರು.
ದೊಡ್ಡಬಳ್ಳಾಪುರ ತಾಲ್ಲೂಕಿನ ಸಿಂಪಾಡಿಪುರದ ಪೆನ್ನ ಓಬಳಯ್ಯ ಅವರ ಪಾರ್ಥೀವ ಶರೀರಕ್ಕೆ ತಾಲ್ಲೂಕು ಆಡಳಿತದ ಪರವಾಗಿ ತಹಶೀಲ್ದಾರ್‌ ವಿಭಾ ವಿದ್ಯಾ ರಾಥೋಡ್‌ ಗೌರವ ಸಲ್ಲಿಸಿದರು.   

ಪ್ರಜಾವಾಣಿ ವಾರ್ತೆ

ದೊಡ್ಡಬಳ್ಳಾಪುರಸಂಗೀತದ ಲವಲೇಷವೂ ಗೊತ್ತಿಲ್ಲದ ನಾಯಕ ಜನಾಂಗದ ಕೃಷಿ ಕೂಲಿ ಕಾರ್ಮಿಕರೊಬ್ಬರು ತಯಾರಿಸಿದ ವೀಣೆಯನ್ನು ದೇಶದ ಖ್ಯಾತನಾಮ ಸಂಗೀತ ಕಲಾವಿದರು ಮೀಟಿ ಸುಮಧುರ ನಾದವನ್ನು ಹೊರ ಹೊಮ್ಮಿಸುತ್ತಿದ್ದಾರೆ.

 ತಾಲ್ಲೂಕಿನ ಮಧುರೆ ಸಮೀಪದ ಸಿಂಪಾಡಿಪುರದಲ್ಲಿ ಪೆನ್ನ ಓಬಳಯ್ಯ ತಯಾರಿಸಿದ ಸಾವಿರಾರು ವೀಣೆಗಳು ಇಂದಿಗೂ ದೇಶ, ವಿದೇಶಗಳ ಮೂಲೆ, ಮೂಲೆಯಲ್ಲಿ ನಾದವನ್ನು ಹೊಮ್ಮಿಸುತ್ತಿವೆ. ಖ್ಯಾತ ವೀಣೆ ವಾದಕರ ಸಂಗೀತ ಕಚೇರಿಗಳಿಗೆ ಜೀವಸ್ವರವಾಗಿವೆ. 

ADVERTISEMENT

ವೀಣೆಯ ಪ್ರಮುಖ ಭಾಗವಾದ ಕೊಡ ತೋಡುವುದು, ದಂಡಿ, ತಲೆ ದೋಣಿ ಸಿದ್ಧಪಡಿಸಿ ಬಣ್ಣ ಬಳಿದು ಮೇಲೆ ಸುಂದರವಾಗಿ ಹೂವುಗಳ ಚಿತ್ತಾರ ಪಡೆಯುವ ತನಕ ಓಬಳಯ್ಯ ಕೈಚಳಕ ಕಾಣಬಹುದು.  

ಸಂಗೀತ ಜ್ಞಾನದ ಕೊರತೆಯಿಂದಾಗಿ ಕಾರಣ ತಂತಿ ಇಲ್ಲದ ವೀಣೆಗಳನ್ನು ಬೆಂಗಳೂರಿನ ವಿವಿಧ ಸಂಗೀತ ಪರಿಕರಗಳ ಮಾರಾಟ ಮಳಿಗೆಗಳಿಗೆ ಮಾರಾಟ ಮಾಡುತ್ತಿದ್ದರು. ಅಲ್ಲಿ ಸಂಗೀತ ಪರಿಣತರು ತಂತಿ ಬಿಗಿಯುವ ಕೆಲಸ ಮಾಡುತ್ತಿದ್ದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇಲ್ಲವೇ ಸಂಗೀತ ಅಕಾಡಮಿಯಿಂದ ಗ್ರಾಮದಲ್ಲಿಯೇ ಒಂದು ಸಂಗೀತ ಶಾಲೆ ತೆರೆದು ಇಲ್ಲಿನ  ಯುವ ತಲೆಮಾರಿನವರಿಗೆ ಸಂಗೀತ ವಿದ್ಯೆ ಕಲಿಸಿದರೆ ವೀಣೆಗೆ ತಂತಿ ಕಟ್ಟುವ, ಸ್ವರ ಹೊಂದಿಸುವ ಕೆಲಸ ಮಾಡಬಹುದು. ಗ್ರಾಹಕರಿಗೆ ನೇರವಾಗಿ ನಾವೇ ವೀಣೆ ಮಾರಾಟ ಮಾಡಬಹುದು ಎನ್ನುವುದು ಓಬಳಯ್ಯ ಕನಸಾಗಿತ್ತು.

ಇದರಿಂದ ಗ್ರಾಮದ ಯುವಕರು ಆರ್ಥಿಕವಾಗಿ ಸಬಲರಾಗಬಹುದು. ಮಧ್ಯವರ್ತಿಗಳಿಲ್ಲದೆ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ವೀಣೆಗಳನ್ನು ಮಾರಾಟ ಮಾಡಬಹುದು ಎನ್ನುವುದು ಅವರ ಕನಸಾಗಿತ್ತು ಎನ್ನುತ್ತಾರೆ ಸಿಂಪಾಡಿಪುರ ಗ್ರಾಮದ ವೀಣೆ ತಯಾರಕರು. 

ಓಬಳಯ್ಯ ಕೊನೆಯ ಉಸಿರು ಇರುವರೆಗೂ ಆಸಕ್ತರಿಗೆ ವೀಣೆ ತಯಾರಿಸುವ ಕಲೆ, ಕೌಶಲ ಧಾರೆ ಎರೆಯುವ ಮೂಲಕ ನಾಡಿನ ಸಾಂಪ್ರದಾಯಿಕ ಕಲೆಯ ನಿರಂತರತೆ ಕಾಪಾಡುವಲ್ಲಿ ಶ್ರಮಿಸಿದ್ದರು.

50ರ ದಶಕದಲ್ಲೇ ಕೂಲಿ ಕೆಲಸ ಮಾಡಲು ಬೆಂಗಳೂರಿನ ಮೆಜೆಸ್ಟಿಕ್‌ ಸಮೀಪದ ತುಳಿಸಿ ತೋಟ ಬಳಿ ವಾಸವಾಗಿದ್ದ ಓಬಳಯ್ಯ ವೀಣೆ ತಯಾರಿಸುವ ಶ್ರೀನಿವಾಸ್‌ ಬಳಿ ಕೆಲಸಕ್ಕೆ ಸೇರಿದರು. ಶ್ರೀನಿವಾಸ ಕುಟುಂಬ ಕೂಡ ಸಿಂಪಾಡಿಪುರಕ್ಕೆ ಸಮೀಪದ ಚಿಕ್ಕಹೆಜ್ಜಾಜಿಯಿಂದ ಬಂದು ನೆಲೆಸಿತ್ತು.

ಸುಮಾರು 10 ವರ್ಷ ಕೆಲಸ ಕಲಿತ ಅವರು ಸಿಂಪಾಡಿಪುರಕ್ಕೆ ವಾಪಾಸಾಗಿ ಗ್ರಾಮದಲ್ಲಿಯೇ ವೀಣೆ ತಯಾರಿಕೆ ಆರಂಭಿಸಿದರು. ತಾವು ತಯಾರಿಸಿದ ವೀಣೆಗಳನ್ನು ಬೆಂಗಳೂರಿನ ರಾಜಾಜಿ ನಗರದ ಅರುಣ್‌ ಮ್ಯೂಜಿಕಲ್‌, ಬಳಪೇಟೆಯ ವಿವಿಧ ಸಂಗೀತ ಪರಿಕರಗಳ ಮಾರಾಟ ಮಳಿಗೆಗಳಿಗೆ ಮಾರಾಟ ಮಾಡುತ್ತ ಬದುಕು ರೂಪಿಸಿಕೊಂಡರು.

ಇದನ್ನು ಗಮನಿಸಿದ ಗ್ರಾಮದ ಇತರೆ ಜನಾಂಗದವರು ಸಹ ಪೆನ್ನ ಓಳಬಳಯ್ಯ ಅವರಿಂದ ವೀಣೆ ತಯಾರಿಕೆ ವಿದ್ಯೆ ಕಲಿತರು. ಇಂದು ಗ್ರಾಮದಲ್ಲಿ 40 ಕುಟುಂಬಗಳು ಕೃಷಿ ಕೆಲಸದೊಂದಿಗೆ ವೀಣೆ ತಯಾರಿಕೆಯನ್ನೇ ಮುಖ್ಯ ಕಸುಬಾಗಿಸಿಕೊಂಡಿದ್ದಾರೆ ಎನ್ನುತ್ತಾರೆ ಓಬಳಯ್ಯ ಅವರ ಸಂಬಂಧಿ ಹಾಗೂ ವೀಣೆ ತಯಾರಕ ಮಂಜುನಾಥ್‌.

ವೀಣೆಗೆ ಜೀವ ನೀಡುತ್ತಿರುವ ಪೆನ್ನ ಓಬಳಯ್ಯ
ಸಿಂಪಾಡಿಪುರದಲ್ಲಿ ವೀಣೆ ತಯಾರಿಕೆ ಹೆಳಿ ಕೊಡುತ್ತಿರುವ ಪೆನ್ನ ಓಬಳಯ್ಯ (ಸಂಗ್ರಹ ಚಿತ್ರ)
ಸ್ನಾತಕೋತ್ತರ ಪದವಿ ಓದಿ ಉದ್ಯೋಗ ಹುಡುಕುತ್ತ ನಗರದ ಕಡೆಗೆ ಹೋಗದೆ ವೀಣೆ ತಯಾರಿಕೆಯನ್ನೇ ಸ್ವಉದ್ಯೋಗವಾಗಿ ಮಾಡಿಕೊಂಡು ಬದುಕು ರೂಪಿಸಿಕೊಂಡಿದ್ದೇವೆ. ಪೆನ್ನ ಓಬಳಯ್ಯ ಅವರು ಇಡೀ ಊರಿಗೆ ಸ್ವ ಉದ್ಯೋಗ ಸೃಷ್ಟಿಸಿಕೊಟ್ಟ ಉದ್ಯೋಗದಾತ.
ಅರುಣ್‌ಕುಮಾರ್‌ ವೀಣೆ ತಯಾರಿಕ ಸಿಂಪಾಡಿಪುರ.

ಮುಖ್ಯಮಂತ್ರಿ ಸಂತಾಪ

ಓಬಳಯ್ಯ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ವೀಣೆ ತಯಾರಕ ಪೆನ್ನ ಓಬಳಯ್ಯ ಅವರ ನಿಧನ ಅತೀವ ದುಃಖ ತಂದಿದೆ ಎಂದು ಎಕ್ಸ್ ಖಾತೆಯಲ್ಲಿ ಹೇಳಿದ್ದಾರೆ. 

ಹಿರಿಯ ಜೀವ ಓಬಳಯ್ಯನವರ ಅಗಲಿಕೆಯಿಂದ ನಾಡು ಬಡವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಅವರ ಕುಟುಂಬವರ್ಗಕ್ಕೆ ದುಃಖ ಭರಿಸುವ ಶಕ್ತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ. ಓಬಳಯ್ಯ ನಿಧನಕ್ಕೆ ಶಾಸಕ ಧೀರಜ್‌ ಮುನಿರಾಜು ಮಾಜಿ ಶಾಸಕ ಟಿ.ವೆಂಕಟರಮಣಯ್ಯದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಿ.ಚುಂಚೇಗೌಡ ಸೇರಿದಂತೆ ತಾಲ್ಲೂಕಿನ ಗಣ್ಯರು ಸಂತಾಪ ಸೂಚಿಸಿದ್ದಾರೆ. ಸರ್ಕಾರದ ಪರವಾಗಿ ತಹಶೀಲ್ದಾರ್‌ ವಿಭಾ ವಿದ್ಯಾ ರಾಥೋಡ್‌ ಅಂತಿಮ ಗೌರವ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.