ADVERTISEMENT

ವೀರಾಂಜನೇಯ ಮೆರವಣಿಗೆ

ದೇಗುಲಗಳಲ್ಲಿ ವಿಶೇಷ ಅಲಂಕಾರ: ಭಕ್ತರಿಗೆ ಅನ್ನ ಸಂತರ್ಪಣೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 5:53 IST
Last Updated 6 ಡಿಸೆಂಬರ್ 2022, 5:53 IST
ಆನೇಕಲ್‌ನ ಥಳೀ ರಸ್ತೆಯ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಪ್ರಯುಕ್ತ ಸ್ವಾಮಿಯ ಮೆರವಣಿಗೆ ನಡೆಯಿತು (ಎಡಚಿತ್ರ). ಗಾಂಧಿ ವೃತ್ತದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ರಥೋತ್ಸವ ನಡೆಯಿತು
ಆನೇಕಲ್‌ನ ಥಳೀ ರಸ್ತೆಯ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಪ್ರಯುಕ್ತ ಸ್ವಾಮಿಯ ಮೆರವಣಿಗೆ ನಡೆಯಿತು (ಎಡಚಿತ್ರ). ಗಾಂಧಿ ವೃತ್ತದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ರಥೋತ್ಸವ ನಡೆಯಿತು   

ಆನೇಕಲ್:ತಾಲ್ಲೂಕಿನ ವಿವಿಧ ಹನುಮ ದೇವಾಲಯಗಳಲ್ಲಿ ಹನುಮ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಸೋಮವಾರ ಆಚರಿಸಲಾಯಿತು. ದೇಗುಲಗಳಲ್ಲಿ ವಿಶೇಷ ಅಲಂಕಾರ, ಪೂಜೆ, ಹೋಮ ಹವನ ನಡೆದವು.

ಪಟ್ಟಣದ ಥಳೀ ರಸ್ತೆಯ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಮಾರುತಿ ಯುವಕರ ಸಂಘದಿಂದ ವಿಜೃಂಭಣೆಯಿಂದ ಜಯಂತಿ ಆಚರಿಸಲಾಯಿತು. ಸ್ವಾಮಿಗೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ ಏರ್ಪಡಿಸಲಾಗಿತ್ತು. ವೀರಾಂಜನೇಯ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಭಕ್ತರಿಗೆ ಅನ್ನ ದಾಸೋಹ
ಏರ್ಪಡಿಸಲಾಗಿತ್ತು.

ವೀರಾಂಜನೇಯ ಸ್ವಾಮಿಗೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಪೂಜೆ ನೆರವೇರಿಸಿ ಮಾತನಾಡಿ, ಆಂಜನೇಯ ಸ್ವಾಮಿಗೆ ವಿಶೇಷ ಶಕ್ತಿಯಿದೆ. ದೇವರನ್ನು ನಂಬಿ ಧ್ಯಾನಿಸಿದರೆ ಕಷ್ಟಗಳು ದೂರವಾಗುತ್ತವೆ. ಹಾಗಾಗಿ, ದೇವರಲ್ಲಿ ಶ್ರದ್ಧೆ ಭಕ್ತಿಯ ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.

ADVERTISEMENT

ಹನುಮನ ಧ್ಯಾನ ಮಾಡಿದರೆ ಮನುಷ್ಯನಲ್ಲಿ ಶಕ್ತಿ ದೊರೆಯುತ್ತದೆ. ಏನನ್ನಾದರೂ ಸಾಧನೆ ಮಾಡಬಹುದೆಂಬ ಸಾಮರ್ಥ್ಯ ದೊರೆಯುತ್ತದೆ. ಹಾಗಾಗಿ, ಹನುಮ ಜಯಂತಿ ಅರ್ಥಪೂರ್ಣ ಆಚರಣೆಯಾಗಿದೆ ಎಂದರು.

ಶಾಸಕ ಬಿ. ಶಿವಣ್ಣ ಮಾತನಾಡಿ, ಪಟ್ಟಣದಲ್ಲಿ ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಹನುಮಂತ ಸ್ವಾಮಿ ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಹೆಸರುವಾಸಿ. ಹಾಗಾಗಿ, ಹನುಮಂತನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ
ನೀಡಿದರು.

ಪುರಸಭಾ ಅಧ್ಯಕ್ಷ ಎನ್.ಎಸ್. ಪದ್ಮನಾಭ, ಸದಸ್ಯರಾದ ಬಿ. ನಾಗರಾಜು, ಮಹಾಂತೇಶ್ ಮುಖಂಡರಾದ ಟಿ.ವಿ. ಬಾಬು, ನರಸಿಂಹರೆಡ್ಡಿ, ರಘು, ಭರತ್‌ ಇದ್ದರು.

ಪಟ್ಟಣದ ದಿಡ್ಡಿಬಾಗಿಲು ಆಂಜನೇಸ್ವಾಮಿ ಸ್ವಾಮಿ ಸಾರ್ವಜನಿಕ ಸೇವಾ ಚಾರಿಟಬಲ್‌ ಟ್ರಸ್ಟ್‌ನಿಂದ ಆಂಜನೇಯ ಮೂಲಮಂತ್ರ ಹೋಮ, ನವಗ್ರಹ ಶಾಂತಿ ಹೋಮ, ಶ್ರೀರಾಮ ತಾರಕ ಹೋಮ, ಪವಮಾನ ಹೋಮ, ನವಗ್ರಹ ಶಾಂತಿ ಹೋಮ, ಮೃತ್ಯುಂಜಯ ಹೋಮ ನಡೆಯಿತು. ಆಂಜನೇಯ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಪಟ್ಟಣದ ಕೆಎ ರ್‌ಟಿಸಿ ಕಾಲೊನಿಯ ವೀರಾಂಜನೇಯ ಸ್ವಾಮಿ ದೇವಾಲಯ, ತಿಮ್ಮರಾಯಸ್ವಾಮಿ ದೇವಾಲಯ ಸಮೀಪದ ಬಾಲಾಂಜನೇಯ ಸ್ವಾಮಿ, ಶ್ರೀರಾಮ ದೇವಾಲಯ, ಗಾಂಧೀ ವೃತ್ತದ ಆಂಜನೇಯ ಸ್ವಾಮಿ ದೇವಾಲಯ, ಪಸುವಲಪೇಟೆಯ ವೀರಾಂಜನೇಯ ಸ್ವಾಮಿ, ಶ್ರೀರಾಮ ದೇವಾಲಯ, ಹೊಸೂರು ಬಾಗಿಲು ಆಂಜನೇಯ ಸ್ವಾಮಿ ದೇವಾಲಯಗಳಲ್ಲಿ ಬೆಳಿಗ್ಗಿನಿಂದಲೂ ಭಕ್ತರು ದೇವರ ದರ್ಶನ ಪಡೆದರು. ಹನುಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ, ಅಲಂಕಾರ, ದಾಸೋಹ ಏರ್ಪಡಿಸಲಾಗಿತ್ತು.

ತಾಲ್ಲೂಕಿನ ಬಿದರಗುಪ್ಪೆ ಕೆರೆ ಏರಿಯ ಮೇಲಿನ ಗದಾಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಮಾಯಸಂದ್ರದ ಕೋಡಿ ಆಂಜನೇಯ ಸ್ವಾಮಿ ದೇವಾಲಯ ಮತ್ತು ಶೆಟ್ಟಹಳ್ಳಿ ಗ್ರಾಮದ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ, ದೀಪಾಲಂಕಾರ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.