ADVERTISEMENT

10 ರಂದು ರಾಜ್ಯ ರೈತ ಸಂಘದಿಂದ ವಿಧಾನಸೌಧಕ್ಕೆ ಮುತ್ತಿಗೆ

ನೆರವಿಗೆ ಮುಂದಾಗದೆ ಮಲತಾಯಿ ಧೋರಣೆ ಅನುಸರಿಸುವ ಕೇಂದ್ರ ಸರ್ಕಾರ –ಟೀಕೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2019, 13:59 IST
Last Updated 6 ಅಕ್ಟೋಬರ್ 2019, 13:59 IST
ಸಂಘದ ಗೌರವ ಅಧ್ಯಕ್ಷೆ ಕೆ.ಸುಲೋಚನಮ್ಮ ವೆಂಕಟರೆಡ್ಡಿ ಮಾತನಾಡಿದರು
ಸಂಘದ ಗೌರವ ಅಧ್ಯಕ್ಷೆ ಕೆ.ಸುಲೋಚನಮ್ಮ ವೆಂಕಟರೆಡ್ಡಿ ಮಾತನಾಡಿದರು   

ದೊಡ್ಡಬಳ್ಳಾಪುರ: ರಾಜ್ಯದಲ್ಲಿ ನಿರಂತರವಾಗಿ ಕಾಡುತ್ತಿರುವ ಬರಗಾಲ ಹಾಗೂ ಉತ್ತರ ಕರ್ನಾಟಕದಲ್ಲಿ ನೆರೆಯಿಂದ ಸಂಕಷ್ಟಕೀಡಾದ ರೈತರಿಗೆ ಸ್ಪಂದಿಸದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಧೋರಣೆ ವಿರೋಧಿಸಿ ಅ. 10ರಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ವಿಧಾನಸೌಧ ಮುತ್ತಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ತಾಲ್ಲೂಕು ಅಧ್ಯಕ್ಷ ಕಾಡನೂರು ಮೂರ್ತಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬರ ಹಾಗೂ ನೆರೆಯಿಂದ ರಾಜ್ಯದ ಜನತೆ ಬಸವಳಿದಿದ್ದಾರೆ. ಕೇಂದ್ರ ಸರ್ಕಾರ ನೆರವಿಗೆ ಮುಂದಾಗದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ರೈತ ಪರ ಹೋರಾಟಗಾರ ಎನ್ನುವ ಮುಖ್ಯಮಂತ್ರಿ ಯಡಿಯೂರಪ್ಪ ಕೇಂದ್ರದ ತಾತ್ಸಾರ ತಿಳಿದಿದ್ದರೂ ರಾಜೀನಾಮೆ ನೀಡುವ ಒತ್ತಾಯ ಹೇರುತ್ತಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ಅಭಿವೃದ್ಧಿಗೆ ಅನುಕೂಲವಾಗಬಹುದು ಎಂಬ ಆಶಾಭಾವನೆ ಹೊಂದಿದ್ದ ಜನರಿಗೆ ನಿರಾಸೆಯಾಗಿದೆ. ರಾಜ್ಯದಿಂದ ಆಯ್ಕೆಯಾಗಿರುವ 28 ಮಂದಿ ಸಂಸದರಿಗೆ ಪ್ರಧಾನಿ ಮೋದಿ ಎದುರು ಮಾತನಾಡುವ ಧೈರ್ಯವಿಲ್ಲದಿರುವುದು ಈ ಸ್ಥಿತಿಗೆ ಕಾರಣವಾಗಿದೆ’ ಎಂದರು.

ರಾಜ್ಯ ಸಂಚಾಲಕ ಹೊಸಕೋಟೆ ಕೆಂಚೇಗೌಡ ಮಾತನಾಡಿ, ‘ನೆರೆಯಿದ ಹಾನಿಗೊಳಗಾದವರಿಗೆ ಪರಿಹಾರಕ್ಕಾಗಿ ಹೋರಾಟ ನಡೆದು ಕೇವಲ ಮಧ್ಯಂತರ ಪರಿಹಾರದ ಘೋಷಣೆಯಾಗಿದೆ. ಇನ್ನು ಆ ಹಣ ಬಿಡುಗಡೆಗೆ ಮತ್ತೆಷ್ಟು ಹೋರಾಟ ನಡೆಸಬೇಕೋ ತಿಳಿಯದು. ರಾಜ್ಯದ ಜನತೆಯೆಡೆಗೆ ಕೇಂದ್ರ ಸರ್ಕಾರದ ತಾತ್ಸರ ಸಲ್ಲದು, ಬೆಳಗಾವಿಯಲಿ ನಡೆಯಬೇಕಿದ್ದ ವಿಧಾನಸಭಾ ಅಧಿವೇಶನವನ್ನು ಅಲ್ಲಿನ ಜನರ ಆಕ್ರೋಶಕ್ಕೆ ಒಳಗಾಗಬೇಕಾಗುವ ಆತಂಕದಿಂದ ಬೆಂಗಳೂರಿನಲ್ಲಿ ನಡೆಸುತ್ತಿರುವುದು ಪಲಾಯನವಾದವಾಗಿದೆ’ ಎಂದರು.

ADVERTISEMENT

ರೈತ ಸಂಘದ ಉಪಾಧ್ಯಕ್ಷ ದೇವನಹಳ್ಳಿಯ ವೆಂಕಟನಾರಯಣಪ್ಪ ಮಾತನಾಡಿ, 13 ಜಿಲ್ಲೆಗಳಲ್ಲಿ ನೆರೆಯಿಂದಾದ ತೊಂದರೆಯನ್ನು ಸರಿಪಡಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರ ವಿಫಲವಾಗಿವೆ. ಸಾರ್ವಜನಿಕರಿಗೆ ಇರುವಷ್ಟು ಮಾನವೀಯತೆಯು ಆಳುವವರಿಗೆ ಇಲ್ಲವಾಗಿದೆ. ನೆರೆಯಿಂದ ₹48 ಸಾವಿರ ಕೋಟಿ ನಷ್ಟ ಉಂಟಾಗಿದ್ದರೆ ರಾಜ್ಯ ಸರ್ಕಾರ ₹3,200 ಕೋಟಿ ಕೇಳುವುದಂತೆ, ಕೇಂದ್ರ ₹1,200 ಕೋಟಿ ನೀಡುವುದಂತೆ. ನೆರೆಯಿಂದ ಜನತೆ ಬಸವಳಿದು 60 ದಿನಗಳಾಗಿವೆ. ಇದುವರೆಗೂ ಜನರ ನೆರವಿಗೆ ಸಮರ್ಪಕ ಪರಿಹಾರ ಬಿಡುಗಡೆ ಅಗದಿರುವುದು ಖಂಡನೀಯ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಅಧ್ಯಕ್ಷ ಪ್ರಸನ್ನ, ಗೌರವ ಅಧ್ಯಕ್ಷೆ ಕೆ.ಸುಲೋಚನಮ್ಮ ವೆಂಕಟರೆಡ್ಡಿ, ಕಾರ್ಯದರ್ಶಿ ಸತೀಶ್, ಉಪಾಧ್ಯಕ್ಷ ರಾಮಾಂಜಿನಪ್ಪ,ಕಾರ್ಯದರ್ಶಿ ನರಸಿಂಹಮೂರ್ತಿ,ದೇವನಹಳ್ಳಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಮೇಶ್, ಮುಖಂಡರಾದ ಮಹದೇವಯ್ಯ, ಸಿದ್ದಾರ್ಥ, ಕಾಂತರಾಜ್, ಉಮಾದೇವಿ, ನಾರಾಯಣಸ್ವಾಮಿ, ರಾಮು, ಮರಿಯಣ್ಣ, ಕುಮಾರ್, ಸತೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.