ADVERTISEMENT

ವಿಜಯಪುರದಲ್ಲಿ ಮಿಶ್ರಪ್ರತಿಕ್ರಿಯೆ: ಎಂದಿನಂತೆ ತೆರೆದಿದ್ದ ಅಂಗಡಿ ಮುಂಗಟ್ಟು

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 7:20 IST
Last Updated 29 ಸೆಪ್ಟೆಂಬರ್ 2020, 7:20 IST
ವಿಜಯಪುರದ ಶಿವಗಣೇಶ ಸರ್ಕಲ್ ನಲ್ಲಿ ರೈತ, ಕರವೇ, ದಲಿತ ಸಂಘಟನೆಗಳ ಕರೆ ನೀಡಿದ್ದ ಕರ್ನಾಟಕ ಬಂದ್ ಅಂಗವಾಗಿ ಮುಖಂಡರುಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳು ಕೂಗಿದರು
ವಿಜಯಪುರದ ಶಿವಗಣೇಶ ಸರ್ಕಲ್ ನಲ್ಲಿ ರೈತ, ಕರವೇ, ದಲಿತ ಸಂಘಟನೆಗಳ ಕರೆ ನೀಡಿದ್ದ ಕರ್ನಾಟಕ ಬಂದ್ ಅಂಗವಾಗಿ ಮುಖಂಡರುಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳು ಕೂಗಿದರು   

ವಿಜಯಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಮತ್ತು ಎಪಿಎಂಸಿಗೆ ಹೊರಡಿಸಿರುವ ತಿದ್ದುಪಡಿ ಮಸೂದೆಗಳನ್ನು ಖಂಡಿಸಿ ರೈತ, ಕಾರ್ಮಿಕ, ಕನ್ನಡಪರ, ದಲಿತ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಇಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಯಿತು.

ಇಲ್ಲಿನ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿದ ಸಂಘಟನಾಕಾರರು ಗಾಯಕ ಎಸ್. ಪಿ.ಬಾಲಸುಬ್ರಹ್ಮಣ್ಯಂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.

ರೈತ ಮುಖಂಡ ನಾರಾಯಣಸ್ವಾಮಿ ಮಾತನಾಡಿ, ‘ಸರ್ಕಾರಗಳು, ರೈತರ ಬೆನ್ನೆಲುಬು ಮುರಿಯುವಂತಹ ಕೆಲಸ ಮಾಡುತ್ತಿವೆ. ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡಾ ಕೇಂದ್ರ ಸರ್ಕಾರದ ಕೈ ಗೊಂಬೆಯಾಗಿದ್ದಾರೆ. ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿಯ ಪರಿಣಾಮವಾಗಿ ರೈತರು ಬಂಡವಾಳಶಾಹಿ ಕೈಗಾರಿಕೋದ್ಯಮಿಗಳಿಗೆ ರೈತರು ತಮ್ಮ ಜಮೀನನ್ನು ಮಾರಿಕೊಳ್ಳುವ ವ್ಯವಸ್ಥೆ ನಿರ್ಮಾಣವಾಗುವ ಸಾಧ್ಯತೆಗಳಿವೆ. ರೈತರು ತಮ್ಮದೇ ಜಮೀನಿನಲ್ಲಿ ಜೀತದಾಳುಗಳಾಗಿ ದುಡಿಯುವ ಕಾಲ ಬಂದರೂ ಅಚ್ಚರಿಯಿಲ್ಲ. ಹೀಗಾಗಿ ಕೃಷಿ ಭೂಮಿಯನ್ನು ಉಳುವವನಿಗೆ ಕೊಡಬೇಕೇ ಹೊರತು ಉಳ್ಳವನಿಗಲ್ಲ’ ಎಂದರು.

ADVERTISEMENT

ಕರವೇ ಮುಖಂಡ ಮಹೇಶ್ ಕುಮಾರ್ ಮಾತನಾಡಿ, ‘ಭೂ ಸುಧಾರಣಾ ಕಾಯ್ದೆ 79ಎ ಹಾಗೂ ಬಿಗೆ ತಿದ್ದುಪಡಿ ತರುವ ಮೂಲಕ ಭೂಮಿ ಖರೀದಿ ಮಿತಿಯಲ್ಲಿ ಬದಲಾವಣೆ ತರಲಾಗಿದೆ. ವಿಧಾನಸಭೆಯಲ್ಲಿ ಈ ಮಸೂದೆ ಅಂಗೀಕಾರಗೊಂಡರೂ ವಿಧಾನ ಪರಿಷತ್‌ನಲ್ಲಿ ಅಂಗೀಕೃತಗೊಂಡಿಲ್ಲ. ಹೀಗಿದ್ದರೂ ಸುಗ್ರೀವಾಜ್ಞೆಯ ಮೂಲಕ ಮಸೂದೆಯನ್ನು ಜಾರಿಗೊಳಿಸಲಾಗುತ್ತಿರುವುದು ಖಂಡನೀಯ. ಕಾಯ್ದೆ ತಿದ್ದುಪಡಿಯ ಪ್ರಕಾರ ಇನ್ನು ಮುಂದೆ ಯಾರು ಬೇಕಾದರೂ ಕೃಷಿ ಜಮೀನು ಖರೀದಿ ಮಾಡಬಹುದು. ನೀರಾವರಿ ಪ್ರದೇಶದಲ್ಲಿ ಖರೀದಿ ಮಾಡುವ ಜಮೀನು ಕೃಷಿಗೆ ಮಾತ್ರ ಬಳಕೆಯಾಗಬೇಕು. ಜೊತೆಗೆ ಕೃಷಿ ಜಮೀನು ಖರೀದಿಸಲು ಈ ಹಿಂದೆ ಇದ್ದ ₹ 25 ಲಕ್ಷ ವಾರ್ಷಿಕ ಆದಾಯ ಮಿತಿ ರದ್ದು ಮಾಡಲಾಗಿದೆ. ಇದು ರೈತರ ಪಾಲಿಗೆ ಮರಣ ಶಾಸನವಾಗಲಿದೆ’ ಎಂದರು.

ಅಂಬೇಡ್ಕರ್ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ವೇಣು ಮಾತನಾಡಿ, ‘ಎಪಿಎಂಸಿ ಕಾಯ್ದೆಯ ಪ್ರಕಾರ ರೈತರು ತಾವು ಬೆಳೆದ ಬೆಳೆಗಳನ್ನು ಎಪಿಎಂಸಿಯಲ್ಲಿ ಮಾರಾಟ ಮಾಡಬೇಕಾಗಿತ್ತು. ಉತ್ಪನ್ನವನ್ನು ಖರೀದಿ ಮಾಡುವವರು ಅನುಮತಿ ಪಡೆಯಬೇಕಾಗಿತ್ತು. ಇದನ್ನು ಮೀರಿ ನಡೆದರೆ ಅಂತಹ ಖರೀದಿದಾರರ ವಿರುದ್ಧ ಪ್ರಕರಣ ದಾಖಲಿಸುವ ಅವಕಾಶವಿತ್ತು. ಆದರೆ ಇದಕ್ಕೆ ತಿದ್ದುಪಡಿ ತರಲಾಗಿದ್ದು ರೈತರು ತಾವು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಇದರ ಪರಿಣಾಮವಾಗಿ ಎಪಿಎಂಸಿಗಳು ಬಲಹೀನಗೊಳ್ಳಲಿವೆ. ಹಾಗೂ ಕೃಷಿ ಕ್ಷೇತ್ರದಲ್ಲೂ ಕಾರ್ಪೊರೇಟ್‌ ಕಂಪನಿಗಳ ನೇರ ಭಾಗಿದಾರಿಕೆಗೆ ಅವಕಾಶ ಕಲ್ಪಿಸಲು ಅವಕಾಶವಿದ್ದು, ಕೂಡಲೇ ಈ ಕಾಯ್ದೆಗಳನ್ನು ರದ್ದುಗೊಳಿಸಬೇಕು’ ಎಂದು ಒತ್ತಾಯಿಸಿದರು.

ಕರವೇ ಶಿವರಾಮೇಗೌಡರ ಬಣದ ಜಿಲ್ಲಾ ಘಟಕದ ಉಪಾಧ್ಯಕ್ಷ ಅಣ್ಣಮ್ಮ ತಾಯಿ ಸುರೇಶ್, ಕೇಶವ, ಸಮರಸೇನೆ ಅಧ್ಯಕ್ಷ ಛತ್ರಪತಿ ಮಹೇಶ್, ಪ್ರವೀಣ್ ಶೆಟ್ಟಿ ಬಣದ ಮುಖಂಡರಾದ ಮಂಜುನಾಥ್, ನಾರಾಯಣಸ್ವಾಮಿ, ರೈತ ಮುಖಂಡರಾದ ಗೋವಿಂದರಾಜು, ವಿಶ್ವನಾಥ್, ಪುರ ಕೃಷ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.