ADVERTISEMENT

ದೇವನಹಳ್ಳಿ: ರೈತ ಪಾಲಿನ ಫಸಲು ಹಂದಿ ಬಾಯಿಗೆ– ಹಂದಿಗಳ ಉಪಟಳಕ್ಕೆ ರೈತರು ತತ್ತರ

ವಿಜಯಪುರ: ಹಂದಿಗಳ ಉಪಟಳಕ್ಕೆ ರೈತರು ತತ್ತರ

ಕೆಂಪೇಗೌಡ ಎನ್.ವೆಂಕಟೇನಹಳ್ಳಿ
Published 12 ಆಗಸ್ಟ್ 2025, 2:24 IST
Last Updated 12 ಆಗಸ್ಟ್ 2025, 2:24 IST
ವಿಜಯಪುರ ಹೋಬಳಿಯ ಭಟ್ರೇನಹಳ್ಳಿ ಸಮೀಪ ಹಂದಿಗಳ ಹಾವಳಿಯಿಂದ ನಾಶವಾಗಿರುವ ಜೋಳ ತೋಟ
ವಿಜಯಪುರ ಹೋಬಳಿಯ ಭಟ್ರೇನಹಳ್ಳಿ ಸಮೀಪ ಹಂದಿಗಳ ಹಾವಳಿಯಿಂದ ನಾಶವಾಗಿರುವ ಜೋಳ ತೋಟ   

ವಿಜಯಪುರ (ದೇವನಹಳ್ಳಿ): ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಹಂದಿಗಳು ಉಪಟಳ ಹೆಚ್ಚಾಗಿದ್ದು, ರೈತರನ್ನು ಕೃಷಿಯಿಂದ ವಿಮುಖರಾಗುವಂತೆ ಮಾಡಿದೆ.

ವಿಜಯಪುರ ಅಮಾನಿಕೆರೆ, ಯಲುವಹಳ್ಳಿ, ಮಿತ್ತನಹಳ್ಳಿ, ಅಂಕತಟ್ಟಿ, ಶೆಟ್ಟಿಹಳ್ಳಿ, ವೆಂಕಟೇನಹಳ್ಳಿ, ಕೊಮ್ಮಸಂದ್ರ, ಭಟ್ರೇನಹಳ್ಳಿ, ಪುರ, ಚಿಕ್ಕನಹಳ್ಳಿ, ಕಾಕಚೊಕ್ಕಂಡಹಳ್ಳಿ, ಭಕ್ತರಹಳ್ಳಿ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ರೈತರು ಶ್ರಮ ಪಟ್ಟು ಬೆಳೆದ ಬೆಳೆ ಹಂದಿಗಳ ಪಾಲಾಗುತ್ತಿದೆ. ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ವಿಜಯಪುರ ಸಮೀಪವೇ ಸಾವಿರಾರು ಎಕರೆ ವಿಸ್ತಿರ್ಣದಲ್ಲಿರುವ ಭದ್ರನ ಕೆರೆಯಲ್ಲಿ ಹಂದಿಗಳ ದಂಡೇ ಅಡಗಿ ಕುಳಿತಿದೆ. ರಾತ್ರಿ ಆಗುತ್ತಿದ್ದಂತೆ ತೋಟಗಳ ಮೇಲೆ ದಾಳಿ ನಡೆಸಿ, ಬೆಳೆಗಳನ್ನು ತಿಂದು ಹಾಕುತ್ತಿವೆ. ಇದರಿಂದ ಕೆರೆಯ ಸುತ್ತಮುತ್ತ ಜಮೀನು ಹೊಂದಿರುವ ರೈತರು ಲಕ್ಷಾಂತರ ಹಣ ಖರ್ಚು ಮಾಡಿ ಬೆಳೆದ ಬೆಳೆ ನಾಶ ಆಗುತ್ತಿವೆ.

ADVERTISEMENT

ಈ ಭಾಗದ ರೈತರು ಅತಿಯಾಗಿ ಸ್ವೀಟ್‌ಕಾರ್ನ್‌, ಮುಸಕಿನ ಜೋಳ, ಕ್ಯಾರೆಟ್, ಆಲೂಗಡ್ಡೆ, ಟೊಮೆಟೊ, ಬೀನ್ಸ್, ಇತರೆ ತರಕಾರಿ ಬೆಳೆ ಬೆಳೆಯುತ್ತಿದ್ದಾರೆ. ಬೆಳೆ ಫಸಲು ಬರುವ ಸಮಯಕ್ಕೆ ಹಂದಿಗಳು ನಾಶ ಪಡಿಸುತ್ತಿದ್ದು, ರೈತರು ಅಪಾರ ಪ್ರಮಾಣದಲ್ಲಿ ನಷ್ಟ ಅನುಭವಿಸುತ್ತಿದ್ದಾರೆ.

ಹಾನಿಗೊಳಗಾದ ಜೋಳದ ತೋಟವನ್ನು ವೀಕ್ಷಿಸುತ್ತಿರುವ ರೈತರು

ಎರಡು ಎಕರೆಯಲ್ಲಿ ನಾರು ಜೋಳ ಹಾಕಿದ್ದೇವೆ. ಸೋಮವಾರ ಮುಂಜಾನೆ ಹಂದಿಗಳು ತೋಟಕ್ಕೆ ನುಗ್ಗಿ ಬೆಳೆ ಹಾಳು ಮಾಡಿವೆ. ಬೇಸಾಯ ನಾರು ಗೊಬ್ಬರಕ್ಕೆ ₹2 ಲಕ್ಷ ಹಣ ಖರ್ಚು ಆಗಿದೆ. ಈಗ ಒಳ್ಳೆಯ ಬೆಲೆ ಇದೆ. ಆದರೆ ಬೆಳೆ ನಷ್ಟವಾಗಿದೆ. ಅರಣ್ಯ ಇಲಾಖೆ ಪರಿಹಾರ ನೀಡಬೇಕು. ಕಿರಣ್ ರೈತ

ಮಾರಾಟಕ್ಕೆ ಸಿದ್ಧವಾದ ಬೆಳೆ ನಾಶ

ವಿಜಯಪುರ ಸಮೀಪದ ಭಟ್ರೇನಹಳ್ಳಿ ಅಕ್ಕಯ್ಯಮ್ಮ ದೇವಾಲಯದ ಮುಂಭಾಗ ರೈತ ಮಹಿಳೆ ರಾಧಮ್ಮ ಎಂಬುವರು ಸುಮಾರು ₹2 ಲಕ್ಷ ಖರ್ಚು ಮಾಡಿ ಎರಡು ಎಕರೆಯಲ್ಲಿ 35 ಸಾವಿರ ಸ್ವೀಟ್ ಕಾರ್ನ್‌ ಜೋಳ ಬೆಳೆದ್ದರು. ಇನ್ನೆನ್ನೂ ವಾರದೊಳಗೆ ಮಾರಾಟ ಮಾಡಲು ಸಿದ್ಧತೆ ನಡೆಸಿದ್ದರು. ಅಷ್ಟರೊಳಗೆ ಹಂದಿಗಳು ತೋಟಕ್ಕೆ ನುಗ್ಗಿ ಸಂಪೂರ್ಣ ಹಾಳು ಮಾಡಿವೆ.  ಫಲ ನೀಡಿದ ಹಂದಿಗಳ ತಡೆ ಪ್ರಯೋಗ ಹಂದಿಗಳ ಕಾಟದಿಂದ ಬಹುತೇಕ ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೂ ತಂದರೂ ಪ್ರಯೋಜನ ಆಗುತ್ತಿಲ್ಲ. ಹಂದಿಗಳ ತಡೆಗೆ ಇಲ್ಲಿನ ರೈತರು ಏನೇ ಪ್ರಯೋಗ ಮಾಡಿದರೂ ಅವುಗಳನ್ನು ತಡೆಯುವುದಕ್ಕೆ ಆಗುತ್ತಿಲ್ಲ ಎಂದು ಸ್ಥಳೀಯ ರೈತರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಅರಣ್ಯ ಇಲಾಖೆ ನಿರ್ಲಕ್ಷ್ಯ

ವಿಜಯಪುರ ಪಟ್ಟಣದ ಸುತ್ತಲಿನ ಬಹುತೇಕ ಗ್ರಾಮಗಳಲ್ಲಿ ಜಿಂಕೆ ಹಂದಿ ಮತ್ತು ನವಿಲುಗಳಂತಹ ಪ್ರಾಣಿಗಳ ಕಾಟದಿಂದ ರೈತರು ಕೃಷಿಯಿಂದ ವಿಮುಖರಾಗುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.  ತಿಂಗಳಲ್ಲಿ ಹತ್ತಾರು ತೋಟಗಳು ಹಂದಿಗಳು ನಾಶಪಡಿಸುತ್ತಿವೆ. ರೈತರು ಬೆಳೆಗಳನ್ನು ರಕ್ಷಿಸಿಕೊಳ್ಳಲು ಪರಿದಾಡುವ ಸ್ಥಿತಿ ಇದ್ದರೂ ಅರಣ್ಯ ಇಲಾಖೆ ರೈತರ ನೆರವಿಗೆ ಧಾವಿಸುತ್ತಿಲ್ಲ ಎಂಬುದು ರೈತರ ಆರೋಪ. ಬೆಳೆ ಹಾನಿ ತೋಟಗಳ ಪರಿಶೀಲನೆಗೆ ಅರಣ್ಯ ಇಲಾಖೆ ಸಿಬ್ಬಂದಿ ಬರುತ್ತಿಲ್ಲ. ರೈತರಿಗೆ ಆದ ನಷ್ಟ ಪರಿಹಾರದ ಬಗ್ಗೆಯೂ ಮಾಹಿತಿ ನೀಡುತ್ತಿಲ್ಲ ಎಂದು ಸ್ಥಳೀಯ ರೈತರು ದೂರಿದ್ದಾರೆ. ರೈತರಿಂದ ದೂರು ಬಂದಿಲ್ಲ ವಿಜಯಪುರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳು ಬೆಳೆ ಹಾನಿ ಮಾಡುತ್ತಿರುವ ಬಗ್ಗೆ ಯಾವುದೇ ದೂರು ಬಂದಿಲ್ಲ. ಇಲಾಖೆಗೆ ದೂರು ನೀಡಿದರೆ ರೈತರ ತೋಟಗಳನ್ನು ಪರಿಶೀಲಿಸುತ್ತೇವೆ. ಕಾಡುಪ್ರಾಣಿಗಳಿಂದ ಬೆಳೆ ಹಾನಿಯಾಗಿದ್ದರೆ ಸರ್ಕಾರದಿಂದ ಸಿಗುವ ಪರಿಹಾರವನ್ನು ರೈತರಿಗೆ ನೀಡಲಾಗುವುದು. ನಾಗರ್ಜುನಯ್ಯ ಆರ್‌ಎಫ್‌ಓ ದೇವನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.