ADVERTISEMENT

ಬರಗಾಲದ ಕರಿನೆರಳಿನಲ್ಲಿ ಗಣೇಶನ ಸ್ವಾಗತಕ್ಕೆ ಸಜ್ಜು

ಗಣೇಶ ಚತುರ್ಥಿಗೆ ಖರೀದಿ ಭರಾಟೆ ಜೋರು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2023, 13:42 IST
Last Updated 17 ಸೆಪ್ಟೆಂಬರ್ 2023, 13:42 IST
ವಿಜಯಪುರ ಪಟ್ಟಣದ ನಾಡಕಚೇರಿಯ ರಸ್ತೆಯಲ್ಲಿ ಹಣ್ಣುಗಳು ಖರೀದಿಸಿದ ಗ್ರಾಹಕರು
ವಿಜಯಪುರ ಪಟ್ಟಣದ ನಾಡಕಚೇರಿಯ ರಸ್ತೆಯಲ್ಲಿ ಹಣ್ಣುಗಳು ಖರೀದಿಸಿದ ಗ್ರಾಹಕರು   

ವಿಜಯಪುರ(ದೇವನಹಳ್ಳಿ): ಬರಗಾಲದ ಕರಿನೆರಳಿನ ನಡುವೆ ಗಣೇಶ ಚತುರ್ಥಿ ಆಚರಣೆಗೆ ಪಟ್ಟಣ ಸೇರಿದಂತೆ ಹಳ್ಳಿಗಳಲ್ಲಿ ಭರದ ಸಿದ್ಧತೆ ನಡೆದಿದೆ.

ಮಾರುಕಟ್ಟೆಯಲ್ಲಿ ಭಾನುವಾರ ಗೌರಿ, ಗಣೇಶ ಮೂರ್ತಿ, ಹೂವು, ಹಣ್ಣುಗಳು, ಬಾಳೆಎಲೆ, ಬಾಳೆಕಂದು ಸೇರಿದಂತೆ ಹಬ್ಬಕ್ಕೆ ಅಗತ್ಯವಾದ ಸಾಮಗ್ರಿಗಳ ಖರೀದಿ ಜೋರಾಗಿ ನಡೆಯುತ್ತಿದೆ.

ಪಟ್ಟಣದ ಹಳೇ ಕೆನರಾ ಬ್ಯಾಂಕ್ ರಸ್ತೆ, ನಾಡಕಚೇರಿಯ ಮುಂಭಾಗ ರಸ್ತೆ, ಬಸ್ ನಿಲ್ದಾಣ, ಗಾಂಧಿಚೌಕ ಸೇರಿದಂತೆ ವಿವಿಧೆಡೆ ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು.

ADVERTISEMENT

ಎರಡು ವರ್ಷಗಳ ಹಿಂದೆ ಭಾರಿ ಮಳೆ ಸುರಿದಿತ್ತು. ಕೆರೆ-ಕುಂಟೆಗಳು ತುಂಬಿಕೊಂಡಿದ್ದವು. ಚುನಾವಣೆ ಇದ್ದ ಕಾರಣ ಗಣೇಶೋತ್ಸವಗಳಿಗೆ ಹಣವು ಹರಿದು ಬಂದಿತ್ತು. ಆದರೆ, ಈ ಬಾರಿ ಪರಿಸ್ಥಿತಿ ವಿಭಿನ್ನವಾಗಿದೆ. ಮುಂಗಾರಿನಲ್ಲಿ ಆರಂಭದಿಂದಲೇ ಸರಿಯಾಗಿ ಮಳೆಯಾಗದ ಕಾರಣ ಬಿತ್ತನೆಯಾಗಿದ್ದ ಶೇ.50 ರಷ್ಟು ಪ್ರದೇಶದಲ್ಲಿ ಬೆಳೆ ಕಮರಿಹೋಗಿದೆ. ರಾಜ್ಯ ಸರ್ಕಾರ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ. ಈ ಕಾರಣದಿಂದ ಗಣೇಶ ಚತುರ್ಥಿಯ ಮೇಲೆ ಬರದ ಕರಿನೆರಳು ಬಿದ್ದಿದೆ.

ಹಬ್ಬಕ್ಕೆ ಹಣ್ಣುಗಳ ಬೆಲೆ ಏರಿಕೆಯಾಗಿದ್ದು, ಸೇಬು ಮತ್ತು ದಾಳಿಂಬೆ ಕೆಜಿಗೆ ₹200, ಅನಾನಸ್ ₹120(ಎರಡಕ್ಕೆ), ಮೂಸಂಬಿ ₹100, ಕಿತ್ತಳೆ ₹140, ಬಾಳೇಹಣ್ಣು ₹100, ಪಚ್ಚೆಬಾಳೇಹಣ್ಣು ₹50, ಮರಸೇಬು ₹150, ದ್ರಾಕ್ಷಿ ₹160ಕ್ಕೆ ಮಾರಾಟ ಆಗುತ್ತಿವೆ.

ಪಟ್ಟಣದಲ್ಲಿ ಸಂಜೆ 5.30 ರ ಸುಮಾರು ವ್ಯಾಪಾರ ವಹಿವಾಟು ಜೋರಾಗಿದ್ದ ಸಮಯದಲ್ಲಿ ಬಂದ ಮಳೆಯಿಂದಾಗಿ ವ್ಯಾಪಾರ ವಹಿವಾಟು ಕೊಂಚ ಅಸ್ತವ್ಯಸ್ತವಾಯಿತು. ವ್ಯಾಪಾರಿಗಳು, ಗ್ರಾಹಕರು ಪರದಾಡಿದರು.

ಪಟ್ಟಣದ ಹಳೇ ಸರ್ಕಾರಿ ಆಸ್ಪತ್ರೆ ರಸ್ತೆ ಹಾಗೂ ಗಾಂಧಿಚೌಕದ ರಸ್ತೆಯಲ್ಲೆ ವ್ಯಾಪಾರ ವಹಿವಾಟು ನಡೆಯುತ್ತಿದ್ದ ಕಾರಣ ವಾಹನ ದಟ್ಟಣೆ ಉಂಟಾಗಿತ್ತು. ವಾಹನ ಸವಾರರು ಪರದಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.