ವಿಜಯಪುರ(ದೇವನಹಳ್ಳಿ): ಶಿಥಿಲಗೊಂಡಿರುವ ಶಾಲಾ ಕಟ್ಟಡ, ಬಿರುಕು ಬಿಟ್ಟಿರುವ ಗೋಡೆಗಳು, ಮಳೆ ಬಂದರೆ ಸೋರುವ ಚಾವಣಿ. ಇದರ ಕೆಳಗಿ ಇಬ್ಬರೇ ಮಕ್ಕಳಿಗೆ ಪಾಠ ಹೇಳಿ ಕೊಡುತ್ತಿರುವ ಶಿಕ್ಷಕ...
–ಇದು ಹೋಬಳಿಯ ಮಂಡಿಬೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಚಿತ್ರಣ.
ಶಾಲೆಯ ಕಟ್ಟಡ ಶಿಥಿಲಗೊಂಡು ಹಲವು ವರ್ಷವೇ ಕಳದಿದೆ. ದುರಸ್ತಿ ಮಾಡಬೇಕೆಂದು ನಾಲ್ಕೈದು ವರ್ಷದಿಂದ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸುತ್ತಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಶಾಲೆ ದುಸ್ಥಿತಿ ತಲುಪಿದೆ.
ಮೂಲ ಸೌಕರ್ಯ ಕೊರತೆ, ಶಾಲೆ ಕಟ್ಟಡ ದುರಸ್ತಿಗೊಳಿಸದ ಹಿನ್ನೆಲೆ ಹಾಗೂ ಶಾಲೆಯ ಸ್ಥಿತಿ ಕಂಡು ಆತಂಕಕ್ಕೊಳಗಾದ ಪೋಷಕರು ಇಲ್ಲಿ ಕಲಿಯುತ್ತಿದ್ದ ತಮ್ಮ ಆರು ಮಕ್ಕಳ ಟಿ.ಸಿ ಪಡೆದುಕೊಂಡು ಬೇರೆ ಊರಿನ ಶಾಲೆ ದಾಖಲು ಮಾಡಿದ್ದಾರೆ.
ಸ್ವಂತ ಊರಿನಲ್ಲಿ ಶಾಲೆ ಇದ್ದರೂ ಒಂದು ಕಿ.ಮೀ ಅಂತರದಲ್ಲಿರುವ ಪಕ್ಕದ ಊರು ಚಿಕ್ಕತತ್ತಮಂಗಲ ಶಾಲೆಗೆ ನಡೆದು ಹೋಗಿ ಬರುವ ದರ್ದ್ ಮಕ್ಕಳದ್ದು.
ಇದರಿಂದ ತಿಮ್ಮನಹಳ್ಳಿಯ ಶಾಲೆಯ ದಾಖಲಾತಿ ಸಂಖ್ಯೆ 2ಕ್ಕೆ ಕುಸಿದೆ. ಒಂದು ಮತ್ತು ಎರಡನೇ ತರಗತಿಯ ಮಕ್ಕಳಿಗೆ ಏಕಮೇಯ ಶಿಕ್ಷಕ ಮುನಿರೆಡ್ಡಿ ಪಾಠ ಹೇಳಿ ಕೊಡುತ್ತಿದ್ದಾರೆ.
ಮಕ್ಕಳು ಕಲಿಯುತ್ತಿರುವ ಕೊಠಡಿಯಲ್ಲೆ ಸಾಮಗ್ರಿ ದಾಸ್ತಾನು ಮಾಡಿಕೊಳ್ಳಲಾಗಿದೆ. ಅದರ ಪಕ್ಕದಲ್ಲೆ ಕಪ್ಪು ಹಲಗೆಯ ಮೇಲೆ ಮಕ್ಕಳು ಅಕ್ಷರಾಭ್ಯಾಸ ಮಾಡಿಸಲಾಗುತ್ತಿದೆ. ನೆಲದಲ್ಲೇ ಕುಳಿತುಕೊಂಡು ಪಾಠ ಕೇಳಬೇಕಾಗಿದೆ. ಮೂಲ ಸೌಕರ್ಯ ಇಲ್ಲದೆ ಶಾಲೆಯಲ್ಲಿ ಕಲಿಕಾ ವಾತಾವರಣವೇ ಮಾಯವಾಗಿದೆ.
ಮಕ್ಕಳನ್ನು ಬೇರೆ ಕಡೆಗೆ ದಾಖಲಿಸಬೇಡಿ ಶಾಲೆ ದುರಸ್ತಿಗೆ ಎಲ್ಲಾ ಸಿದ್ಧತೆಗಳು ಮಾಡಿದ್ದೇವೆ ಎಂದು ಪೋಷಕರಿಗೆ ಮನವೊಲಿಸಿದರೂ ಅವರು ಕೇಳಲಿಲ್ಲ. ತಮ್ಮ ಮಕ್ಕಳ ಟಿ.ಸಿ ಪಡೆದುಕೊಂಡರು. ಈಗ ಇಬ್ಬರು ಮಕ್ಕಳು ಮಾತ್ರ ಇದ್ದಾರೆ.–ಮುನಿರೆಡ್ಡಿ, ಶಾಲೆಯ ಮುಖ್ಯಶಿಕ್ಷಕ
ಸುರಕ್ಷಿತ ಇಲ್ಲ; ಪೋಷಕರ ಆತಂಕ
‘ನಾವು ಮಕ್ಕಳನ್ನು ಶಾಲೆಗೆ ಕಳುಹಿಸಿ ಕೂಲಿ ಕೆಲಸಕ್ಕೆ ಹೋಗುತ್ತೇವೆ. ಆದರೆ ಮಕ್ಕಳಿಗೆ ಸುರಕ್ಷಿತ ಜಾಗ ಬೇಕಲ್ಲವೇ? ಶಾಲೆಯ ಕಟ್ಟಡ ಯಾವಾಗ ಬೀಳುತ್ತೋ ಎನ್ನುವ ಭಯ ಕಾಡುತ್ತದೆ. ಕೆಲಸದಲ್ಲಿದ್ದರೂ ನಮ್ಮ ಮನಸ್ಸು ಮಕ್ಕಳ ಕಡೆಗೆ ಇರುತ್ತದೆ. ಅದಕ್ಕೆ ಇಲ್ಲಿ ಸುರಕ್ಷಿತವಲ್ಲವೆಂದು ಚಿಕ್ಕತತ್ತಮಂಗಲಕ್ಕೆ ಸೇರಿಸಿದ್ದೇವೆ. ಪ್ರತಿದಿನ ನಡೆದುಕೊಂಡು ಹೋಗಿ ಬರುತ್ತಾರೆ. ಮಳೆಗಾಲದಲ್ಲಿ ಸ್ವಲ್ಪ ಕಷ್ಟವಾಗುತ್ತದೆ. ಆದರೆ ವಿಧಿಯಿಲ್ಲದೆ ಕಳುಹಿಸಬೇಕಾಗಿದೆ. ನಮ್ಮೂರಿನ ಶಾಲೆಯಲ್ಲಿ ಎಲ್ಲಾ ಸೌಕರ್ಯಗಳಿದ್ದರೆ ಮಕ್ಕಳನ್ನು ಇಲ್ಲಿಗೆ ಕಳುಹಿಸಬಹುದು’ ಎನ್ನುತ್ತಾರೆ ತಿಮ್ಮನಹಳ್ಳಿಯ ಜನ.
ಇರುವ ಕೊಠಡಿಯಲ್ಲಿ ಪಾಠ ಮಕ್ಕಳ ಶಾಲಾ ವರ್ಗಾವಣೆ ಪ್ರಮಾಣಪತ್ರ ಕೊಡುವ ಮೊದಲು ನಮ್ಮನ್ನು ಸಂಪರ್ಕಿಸಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿ ಜೊತೆ ಶಾಲೆಗೆ ಭೇಟಿ ನೀಡಿದ್ದೇವು. ಮುಖ್ಯಶಿಕ್ಷಕರಿಗೆ ನೊಟೀಸ್ ಜಾರಿಗೊಳಿಸಲಾಗಿದೆ. ಬೇರೆ ಶಾಲೆಗೆ ಹೋಗಿರುವ ಮಕ್ಕಳನ್ನು ಪುನಃ ದಾಖಲು ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಪೋಷಕರನ್ನೂ ಮನವೊಲಿಸುವ ಕಾರ್ಯಮಾಡುತ್ತಿದ್ದೇವೆ. ಇರುವ ಕೊಠಡಿಯಲ್ಲೆ ಪಾಠ ಪ್ರವಚನ ಮಾಡಬೇಕು ಬೇರೆ ದಾರಿಯಿಲ್ಲ.–ರಾಜಣ್ಣ ಕ್ಷೇತ್ರ ಸಂಪನ್ಮೂಲ ವ್ಯಕ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.