ವಿಜಯಪುರ (ದೇವನಹಳ್ಳಿ): ಹೋಬಳಿಯಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ಪಟ್ಟಣದ ಮಾರುಕಟ್ಟೆಯಲ್ಲಿ ಭಾನುವಾರ ಜನರು ಜಮಾಯಿಸಿದ್ದರು.
ಹಬ್ಬದ ಒಂದು ದಿನ ಮುಂಚೆಯೇ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹೂ, ಹಣ್ಣು ಹಂಪಲು, ಕಬ್ಬು, ಬಾಳೆ ಕಂಬ, ಸಿಹಿ ತಿಂಡಿಗಳು ಹಾಗೂ ಮಣ್ಣಿನಿಂದ ತಯಾರಿಸಿದ ಹಣತೆಗಳು ಖರೀದಿಯಲ್ಲಿ ಜನರು ಕಾರ್ಯನಿರತರಾಗಿದ್ದರು.
ಮಣ್ಣಿನ ಹಣತೆಗಳಿಗೆ ಬೇಡಿಕೆ: ದೀಪಾವಳಿ ಹಬ್ಬಕ್ಕೆ ಬಗೆ ಬಗೆಯ ಹಣತೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅದರಲ್ಲಿಯೂ ಮಣ್ಣಿನ ಹಾಗೂ ಪ್ಲಾಸ್ಟಿಕ್ ಹಣತೆಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಹೆಚ್ಚಿನ ಜನರು ಈ ಬಾರಿ ಮಣ್ಣಿನ ದೀಪಗಳನ್ನು ಜನ ಖರೀದಿಸುತ್ತಿದ್ದಾರೆ.
ದೀಪದ ಮಾದರಿಯಲ್ಲಿರುವ ಡಜನ್ ಹಣತೆಗೆ ₹100 ರಿಂದ ₹250 ವರೆಗೆ ದರವನ್ನು ನಿಗದಿ ಪಡಿಸಿದ್ದರು. ಅಲಂಕಾರಿ ವಸ್ತುಗಳಿಗೆ ಗೃಹಿಣಿಯರು ಖರೀದಿಸಲು ಆಸಕ್ತಿ ತೋರಿದರು.
ಪೂಜಾ ಸಾಮಗ್ರಿ ಖರೀದಿ: ದೀಪಾವಳಿಯನ್ನು ವಿವಿಧ ಸಮುದಾಯಗಳಲ್ಲಿ ತಮ್ಮದೇ ವಿಶೇಷ ಶೈಲಿಗಳಲ್ಲಿ ಆಚರಿಸಲಾಗುತ್ತದೆ. ಬಹುತೇಕರು ಹಿಂದಿನಿಂದಲೂ ಈ ಹಬ್ಬಕ್ಕೆ ನೋಮುವ ಸಂಪ್ರದಾಯ ಉಳಿಸಿಕೊಂಡಿದ್ದಾರೆ. ಇದಕ್ಕೆಂದು ಕೈಗೆ ನೋಮುದಾರ ಕಟ್ಟಿಕೊಂಡು ಆಚರಣೆಯಲ್ಲಿ ತೊಡಗುತ್ತಾರೆ. ಪೂಜೆಯ ವೇಳೆ ನೋಮುದಾರ, ಅರಿಶಿನ-ಕುಂಕುಮ, ಅಡಿಕೆ, ವೀಳ್ಯದ ಎಲೆಗಳನ್ನು ಬಾಗಿನ ರೂಪದಲ್ಲಿ ಪ್ರಧಾನವಾಗಿ ಇಡುತ್ತಾರೆ. ಹಾಗಾಗಿ ಪೂಜಾ ಸಾಮಾಗ್ರಿಗಳ ಬಳಿಯೂ ಜನರು ಖರೀದಿಸಲು ಮುಂದಾಗಿದ್ದರು.
ಪಟಾಕಿ ಮಾರಾಟ ಜೋರು: ಪರಿಸರ ಸ್ನೇಹಿ ದೀಪಾವಳಿ ಆಚರಿಸುವಂತೆ ಹಲವು ಸಂಘ ಸಂಸ್ಥೆಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರೂ ಪಟ್ಟಣದಲ್ಲಿ ಪಟಾಕಿ ಎಂದಿನಂತೆ ಮಾರಾಟವಾಗುತ್ತಿದ್ದವು. ಪಟ್ಟಣದ ಜೂನಿಯರ್ ಕಾಲೇಜು ಆಟದ ಮೈದಾನದ ಎದುರು ಪಟಾಕಿ ಮಾರಾಟವಾಗುತ್ತಿದ್ದವು.
ತಗ್ಗಿದ ಬೆಲೆ
ಹಿಂದಿನ ವರ್ಷದ ದೀಪಾವಳಿ ಹಬ್ಬಕ್ಕೆ ಹೋಲಿಸಿದರೆ ಈ ವರ್ಷ ಮಳೆಯಿಂದಾಗಿ ಹಬ್ಬದಲ್ಲಿ ಹೂವಿನ ಬೆಲೆ ಕಡಿಮೆ ಇದೆ. ತರಕಾರಿಗಳ ಬೆಲೆಯಲ್ಲೂ ಕಡಿಮೆ ಕಂಡು ಬಂದಿದೆ ಎಂದು ಪಟ್ಟಣದ ಹೂವಿನ ವ್ಯಾಪಾರಿ ವೇಣುಗೋಪಾಲ್ ತಿಳಿಸಿದರು. ಮಾರುಕಟ್ಟೆಯಲ್ಲಿ ಸೇವಂತಿಗೆ ₹120 ರಿಂದ ₹150 ಗುಲಾಬಿ ₹150 ರಿಂದ ₹200 ಚೆಂಡು ಹೂ ₹50 ರಿಂದ ₹60ಗೆ ಮಾರಾಟವಾದರೆ. ಒಂದು ಜೊತೆ ನಾನಾ ಹೂವಿನ ಹಾರಗಳು ₹100-₹1500 ಬಾಳೆಕಂಬ ಜೋಡಿಗೆ ₹60 ಬೂದುಗುಂಬಳಕಾಯಿ ಕೆ.ಜಿಗೆ ₹30 ಮಾರಾಟವಾಗುತ್ತಿದ್ದವು. ಸೇಬು ₹200 ದಾಳಿಂಬೆ ₹160 ಬಾಳೆಹಣ್ಣು ₹120 ಕಿತ್ತಲೆ ₹150 ಮಾರಾಟವಾಗುತ್ತಿದ್ದವು.