ವಿಜಯಪುರ (ದೇವನಹಳ್ಳಿ): ಪಟ್ಟಣದ ಪುರಸಭೆ ಬಳಿ ಇತ್ತೀಚೆಗೆ ಆರಂಭಗೊಂಡ ಇಂದಿರಾ ಕ್ಯಾಂಟೀನ್‌ಗೆ ಪುರಸಭೆ ಸದಸ್ಯರು ಬುಧವಾರ ಭೇಟಿ ನೀಡಿ ಆಹಾರದ ಗುಣಮಟ್ಟ, ಸ್ವಚ್ಛತೆ ಹಾಗೂ ಸೌಕರ್ಯ ವ್ಯವಸ್ಥೆ ಪರಿಶೀಲಿಸಿದರು.
ಪುರಸಭೆ ಅಧ್ಯಕ್ಷೆ ಭವ್ಯ ಮಹೇಶ್ ಅವರು ಕ್ಯಾಂಟೀನ್‌ನಲ್ಲಿ ಊಟ ಮಾಡುತ್ತಿದ್ದವರ ಬಳಿ ಆಹಾರ ಗುಣಮಟ್ಟ, ಸ್ವಚ್ಛತೆ ಮತ್ತು ಅಗತ್ಯವಿರುವಷ್ಟು ಆಹಾರ ಪೂರೈಸಲಾಗುತ್ತಿದೆಯೇ ಎಂಬ ಕುರಿತು ಮಾಹಿತಿ ಪಡೆದರು. ಕ್ಯಾಂಟೀನ್‌ನಲ್ಲಿ ಉತ್ತಮ ಗುಣಮಟ್ಟದ ಆಹಾರ ಪೂರೈಸಲಾಗುತ್ತಿದೆ. ಯಾವುದೇ ಸಮಸ್ಯೆಗಳಿಲ್ಲ ಎಂದು ಗ್ರಾಹಕರು ತಿಳಿಸಿದರು.
ಮಧ್ಯಾಹ್ನದ ಊಟವನ್ನು ಇಂದಿರಾ ಕ್ಯಾಂಟೀನ್‌ನಲ್ಲಿ ಸವಿದ ಪುರಸಭೆ ಅಧ್ಯಕ್ಷೆ ಭವ್ಯ ಮಹೇಶ್, ಸಾರ್ವಜನಿಕರಿಗೆ ಗುಣಮಟ್ಟದ ಆಹಾರ ವಿತರಿಸಬೇಕು ಎಂದು ಕ್ಯಾಂಟೀನ್ ಸಿಬ್ಬಂದಿಗೆ ಸಲಹೆ ನೀಡಿದರು.
ಕ್ಯಾಂಟೀನ್‌ಗೆ ಸಂಬಂಧಿಸಿದಂತೆ ಏನಾದರೂ ಕುಂದುಕೊರತೆಗಳಿದ್ದಲ್ಲಿ, ತಿಳಿಸುವಂತೆ ಕ್ಯಾಂಟೀನ್ ವ್ಯವಸ್ಥಾಪಕರಿಗೆ ಸೂಚಿಸಿದರು.
ಪುರಸಭೆ ಸದಸ್ಯ ನಂದಕುಮಾರ್ ಮಾತನಾಡಿ, ಬಡವರು ಮತ್ತು ಮಧ್ಯಮ ವರ್ಗದವರೇ ಹೆಚ್ಚಾಗಿ ಆಹಾರ ಸೇವಿಸುವ ಇಂದಿರಾ ಕ್ಯಾಂಟೀನ್‌ನಲ್ಲಿ ಸ್ವಚ್ಛತೆ ಮತ್ತು ಗುಣಮಟ್ಟ ಕಾಪಾಡಬೇಕು. ಕುಡಿಯಲು ಬಿಸಿನೀರಿನ ವ್ಯವಸ್ಥೆ ಮಾಡಬೇಕು ಎಂದು ಕ್ಯಾಂಟೀನ್ ವ್ಯವಸ್ಥಾಪಕರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ್, ಆರೋಗ್ಯಾಧಿಕಾರಿ ಲಾವಣ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.