ADVERTISEMENT

ವಿಜಯಪುರ: ₹2.57 ಕೋಟಿ ವೆಚ್ಚದ ವಿವಿಧ ಕಾಮಗಾರಿಗೆ ಸಚಿವ ಮುನಿಯಪ್ಪ ಚಾಲನೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 2:30 IST
Last Updated 3 ಆಗಸ್ಟ್ 2025, 2:30 IST
ವಿಜಯಪುರ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ ಸಚಿವ ಕೆ.ಎಚ್.ಮುನಿಯಪ್ಪ.
ವಿಜಯಪುರ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ ಸಚಿವ ಕೆ.ಎಚ್.ಮುನಿಯಪ್ಪ.   

ವಿಜಯಪುರ (ದೇವನಹಳ್ಳಿ): ‘ನಗರೋತ್ಥಾನ ಹಂತ-4ರ ಅಡಿಯಲ್ಲಿ ಅಂದಾಜು ₹2.57 ಕೋಟಿ ವೆಚ್ಚದ ವಿವಿಧ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದರೊಂದಿಗೆ ಜಿಲ್ಲೆಯ ಸರ್ವೋತೋಮುಖ ಅಭಿವೃದ್ಧಿಗೆ ನಾನು ಬದ್ಧ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿದರು.

ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿದ ಇಂದಿರಾ ಕ್ಯಾಟೀನ್, ‘ನಮ್ಮ ಕ್ಲಿನಿಕ್’ ಉದ್ಘಾಟನೆ, ಪುರಸಭೆ ನಗರೋತ್ಥಾನ ಹಂತ-4ರ ಕಾಮಗಾರಿಗೆ ಶಂಕುಸ್ಥಾಪನೆ, ಸಿಎಸ್ ಆರ್ ಅನುದಾನದಡಿ ನಿರ್ಮಿಸಿರುವ ಶಾಲಾ ಕಟ್ಟಡ, ಸರ್ಕಾರಿ ಮಾಧ್ಯಮಿಕ ಶಾಲೆಯ 10 ಶಾಲಾ ಕೊಠಡಿ ಹಾಗೂ ಐಒಸಿಎಲ್ ಕಂಪನಿಯಿಂದ ನಿರ್ಮಿಸಿರುವ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಚಿಕ್ಕನಹಳ್ಳಿಯಿಂದ ವೆಂಕಟಾಪುರ ವರೆಗೂ ಚತುಷ್ಪಥ ನಿರ್ಮಾಣ ಕಾಮಗಾರಿ ₹50 ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ. ಆದಷ್ಟು ಬೇಗನೇ ಒಳಚರಂಡಿ ಹಾಗೂ ಭೂಗತ ವಿದ್ಯುತ್ ಕೇಬಲ್ ಅಳವಡಿಕೆ, ಎಸ್.ಟಿ.ಪಿ ಕಾಮಗಾರಿ ಕೈಗೊಳ್ಳಲು ಅಗತ್ಯ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ವಿಜಯಪುರದಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪನೆ ಜೊತೆಗೆ ಎರಡು ನಮ್ಮ ಕ್ಲಿನಿಕ್ ಹಾಗೂ ಸಿಎಸ್‌ಆರ್ ಅನುದಾನದಡಿ ಎಂಬಸ್ಸಿ ಕಂಪನಿಯಿಂದ ಸರ್ಕಾರಿ ಶಾಲೆಯ 10 ಕೊಠಡಿ  ನಿರ್ಮಿಸಲಾಗಿದ್ದು, ಇಂದು ಉದ್ಘಾಟಿಸಲಾಗಿದೆ. ದಂಡಿಗಾನಹಳ್ಳಿಯಲ್ಲಿ ಸರ್ಕಾರಿ ಎಚ್‌ಪಿಎಸ್ ಶಾಲೆ ಕಟ್ಟಡವನ್ನು ಸಿಎಸ್‍ಆರ್ ಅನುದಾನದಡಿ ಪ್ರೆಸ್ಟೀಜ್ ಕಂಪನಿ ನಿರ್ಮಿಸಲಿರುವ ಕಾಮಗಾರಿ ಶಂಕುಸ್ಥಾಪನೆ ಮಾಡಲಾಗಿದೆ. ಇದರಿಂದ ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆ ಮತ್ತು ಎಲ್ಲ ವರ್ಗದ ಮಕ್ಕಳಿಗೂ ಸುಸಜ್ಜಿತ ಕಲಿಕಾ ವಾತಾವರಣದೊಂದಿಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಅನುಕೂಲವಾಗುತ್ತದೆ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎನ್ ಅನುರಾಧ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜಣ್ಣ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧ್ಯಕ್ಷ ಶಾಂತಕುಮಾರ್, ಪುರಸಭೆ ಅಧ್ಯಕ್ಷೆ ಭವ್ಯ ಮಹೇಶ್, ಗೊಡ್ಲುಮುದ್ದೇನಹಳ್ಳಿ ಗ್ರಾ.ಪಂ ಉಪಾಧ್ಯಕ್ಷೆ ರತ್ನಮ್ಮ ಮರಿತಮ್ಮಣ್ಣ, ಬಮುಲ್ ಅಧ್ಯಕ್ಷ ಎಸ್.ಪಿ ಮುನಿರಾಜು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಎಸ್ ರಮೇಶ್, ದೇವನಹಳ್ಳಿ ತಾಲ್ಲೂಕು ಪಂಚಾಯಿತಿ ಇಒ ಶ್ರೀನಾಥಗೌಡ, ದೇವನಹಳ್ಳಿ ತಾಲ್ಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಸಂಜಯ, ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ ಇದ್ದರು.

ವಿಜಯಪುರ ಸಮೀಪದ ಪುರ ಗ್ರಾಮದಲ್ಲಿ 28 ಫಲಾನುಭವಿಗಳಿಗೆ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರು ಹಕ್ಕು ಪತ್ರವನ್ನು ವಿತರಿಸಿದರು.

2500 ಕುಟುಂಬಕ್ಕೆ ಶೀಘ್ರ ನಿವೇಶನ:

ರಾಜ್ಯ ಸರ್ಕಾವು ಎಲ್ಲ ವರ್ಗದ ನಿವೇಶನ ರಹಿತ ಬಡವರಿಗೆ ನಿವೇಶನ ಕಲ್ಪಿಸುವ ಜತೆಗೆ ಸೂರು ಕಟ್ಟಿಸಿಕೊಡುತ್ತಿದೆ. ತಾಲೂಕಿನಲ್ಲಿ ನಿವೇಶನ ರಹಿತ 2500 ಕುಟುಂಬಗಳಿಗೆ ಮೂರು ತಿಂಗಳಲ್ಲಿ ನಿವೇಶನ ವಿತರಿಸುತ್ತೇವೆ ಎಂದು ಸಚಿವ ಕೆ.ಎಚ್‌. ಮುನಿತಪ್ಪ ಭರವಸೆ ನೀಡಿದರು. ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುರ ಗ್ರಾಮದಲ್ಲಿ 28 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದ ಸಚಿವರು ಈ ವಿಚಾರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.