ADVERTISEMENT

ವರದಿ ಪರಿಣಾಮ | ‘ನಮ್ಮ ಕ್ಲಿನಿಕ್’ಗೆ ಚಿಕಿತ್ಸೆ ನೀಡಿದ ವೈದ್ಯಾಧಿಕಾರಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 2:16 IST
Last Updated 3 ಸೆಪ್ಟೆಂಬರ್ 2025, 2:16 IST
   

ವಿಜಯಪುರ (ದೇವನಹಳ್ಳಿ): ಇಲ್ಲಿಯ ನಮ್ಮ ಕ್ಲಿನಿಕ್’ ಆಸ್ಪತ್ರೆಗಳಿಗೆ ಮಂಗಳವಾರ ತಾಲ್ಲೂಕು ಪ್ರಭಾರಿ ಆರೋಗ್ಯಾಧಿಕಾರಿ ಡಾ.ಹಫೀಜ್  ಭೇಟಿ ನೀಡಿ ಪರಿಶೀಲಿಸಿದರು. ಅವ್ಯವಸ್ಥೆ ಸರಿಪಡಿಸುವಂತೆ ಸಿಬ್ಬಂದಿ ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ತಿಂಗಳ ಹಿಂದೆ ಇಲ್ಲಿಯ ವಿವೇಕಾನಂದ ನಗರ ಮತ್ತು ಎ.ಕೆ ಕಾಲೊನಿ ಸಮುದಾಯ ಭವನಗಳ ‘ನಮ್ಮ ಕ್ಲಿನಿಕ್’ ಉದ್ಘಾಟಿಸಿದ್ದರು.

ಈ ಎರಡೂ ಆಸ್ಪತ್ರೆಗಳ ಅವ್ಯವಸ್ಥೆ ಕುರಿತು ‘ಹೆಸರಿಗಷ್ಟೇ ನಮ್ಮ ಕ್ಲಿನಿಕ್: ಸಾರ್ವಜನಿಕರಿಗೆ ಸಿಗದ ಆರೋಗ್ಯ ಸೇವೆ' ಎಂಬ ಶಿರ್ಷೀಕೆ ಅಡಿ ‘ಪ್ರಜಾವಾಣಿ’ ಮಂಗಳವಾರ ವರದಿ ಪ್ರಕಟಿಸಿತ್ತು.

ವರದಿ ಪ್ರಕಟವಾದ ಬೆನ್ನಲ್ಲೇ ತಾಲ್ಲೂಕು ಆರೋಗ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ವಿಜಯಪುರದ ಈ ಎರಡೂ ‘ನಮ್ಮ ಕ್ಲಿನಿಕ್’ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ವಿವೇಕಾನಂದ ನಗರದ ಕ್ಲಿನಿಕ್‌ನಲ್ಲಿ ಕುರ್ಚಿ, ವಿದ್ಯುತ್, ಶೌಚಾಲಯದಂತಹ ಮೂಲಸೌಲಭ್ಯ ಇಲ್ಲದಿರುವುದನ್ನು ಕಂಡ ಆರೋಗ್ಯಾಧಿಕಾರಿ ಡಾ.ಹಫೀಜ್, ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಅವ್ಯವಸ್ಥೆ ಸರಿಪಡಿಸುವಂತೆ ಸೂಚಿಸಿದರು. ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡುವಂತೆ ತಾಕೀತು ಮಾಡಿದರು.

ನಂತರ ಎ.ಕೆ ಕಾಲೊನಿಯ ಸಮುದಾಯ ಭವನದ ಆಸ್ಪತ್ರೆಗೆ ತೆರಳಿ ಬಾಗಿಲು ಮುಚ್ಚಿರುವುದನ್ನು ಕಂಡು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ಆದರು.

ಪ್ರಜಾವಾಣಿ ವರದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT