
ವಿಜಯಪುರ (ದೇವನಹಳ್ಳಿ): ಸಮೀಪ ಬೇರೆ ಬೆಳೆಗಳಿಗೆ ಸಿಂಪಡಿಸಲಾಗುತ್ತಿದ್ದ ರಾಸಾಯನಿಕ ಹಿಪ್ಪು ನೇರಳೆ ಸೊಪ್ಪಿಗೂ ತಗುಲಿ ರೇಷ್ಮೆ ಕೃಷಿ ನಷ್ಟವಾಗುತ್ತಿತ್ತು. ಇದರಿಂದ ಪಾರಾಗಲು ರೇಷ್ಮೆ ಕೃಷಿಕರು ತುಂತುರು ನೀರಾವರಿ ಮೊರೆ ಹೋಗಿದ್ದಾರೆ.
ಜಿಲ್ಲೆಯ ದೇವನಹಳ್ಳಿ, ಹೋಸಕೋಟೆ ತಾಲ್ಲೂಕಿನಲ್ಲಿ ಆರು ಸಾವಿರಕ್ಕೂ ಹೆಚ್ಚು ರೇಷ್ಮೆ ಕೃಷಿಕರು ಇದ್ದಾರೆ. ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಮಾತ್ರ ಅಳವಡಿಸುತ್ತಿದ್ದ ತುಂತುರ ನೀರಾವರಿ ಪದ್ಧತಿಯನ್ನು ಈಗ ರೇಷ್ಮೆ ಕೃಷಿಗೂ ಬಳಸಲು ರೈತರು ಮುಂದಾಗಿದ್ದಾರೆ. ಇದರಿಂದ ಅಕ್ಕ-ಪಕ್ಕದಲ್ಲಿನ ಬೆಳೆಗಳಿಗೆ ಸಿಂಪಡಿಸುವ ಔಷಧಿಯಿಂದ ಪಾರಾಗಿ ಹಿಪ್ಪುನೇರಳೆ ಸೊಪ್ಪಿನ ಸುರಕ್ಷತೆ, ಗುಣಮಟ್ಟ ಕಾಪಾಡಬಹುದಾಗಿದೆ.
ಇತರೆ ಬೆಳೆಗೆ ರಾಸಾಯನಿಕ ಸಿಂಪಡಿಸಿದಾಗ ಅದು ಗಾಳಿ ಜೊತೆ ಬೆರತು ಹಿಪ್ಪು ನೇರಳೆ ಸೋಪ್ಪಿಗೂ ತಗಲುತ್ತಿತು. ಇದೇ ಸೊಪ್ಪು ಮೇದ ರೇಷ್ಮೆ ಹುಳುಗಳು ಸಾಯುತ್ತಿದ್ದವು, ಇಲ್ಲವೇ ರೋಗ ಪೀಡಿತವಾಗುತ್ತಿದ್ದವು. ಇದರಿಂದ ರೇಷ್ಮೆ ಕೃಷಿಕರಿಗೆ ಬೆಳೆನಷ್ಟ ಉಂಟಾಗುತ್ತಿತು. ಇದನ್ನು ತಪ್ಪಿಸಲು ಹಿಪ್ಪು ನೇರಳೆ ಸೊಪ್ಪಿಗೂ ತುಂತುರು ನೀರಾವರಿ ಪದ್ಧತಿಯನ್ನು ಹೋಬಳಿ ರೈತರೊಬ್ಬರು ಅಳವಡಿಸಿಕೊಂಡಿದ್ದಾರೆ.
ವಿಜಯಪುರ ಸಮೀಪದ ಸೂಲಿಬೆಲೆ ಹೋಬಳಿಯ ತಿಮ್ಮಪ್ಪನಹಳ್ಳಿ ಗ್ರಾಮದ ರೇಷ್ಮೆ ಬೆಳೆಗಾರ ಅವಿನಾಶ್ ಅವರು ತಮ್ಮ ಹಿಪ್ಪುನೇರಳೆ ಸೊಪ್ಪಿನ ತೋಟಕ್ಕೆ ಹನಿ ನೀರಾವರಿ ಜೊತೆಗೆ ಹಿಪ್ಪುನೇರಳೆ ಸೊಪ್ಪಿನ ಗುಣಮಟ್ಟ, ಸುರಕ್ಷತೆಗಾಗಿ ಆರಂಭಿಕ ಹಂತವಾಗಿ ಒಂದೂವರೆ ಎಕರೆಗೆ ಸ್ಪ್ರಿಂಕ್ಲರ್ ಪದ್ಧತಿ ಅಳವಡಿಸಿದ್ದಾರೆ.
7 ಅಡಿ ಅಂತರದ ಸಾಲು ಕಡ್ಡಿ ಹಿಪ್ಪುನೇರಳೆ ಸೊಪ್ಪಿನ ಗಿಡದ ಬುಡಕ್ಕೆ ಹನಿ ನೀರಾವರಿ ಪದ್ಧತಿ ಮೊದಲಿಗೆ ಅಳವಡಿಸಿದ್ದು, ನಂತರ ಪೈಪ್‍ಲೈನ್ ಮೂಲಕ 15 ಅಡಿ ಅಂತರವಾಗಿ 7 ಅಡಿ ಎತ್ತರವಾಗಿ ದೊಡ್ಡ ಸ್ಪ್ರಿಂಕ್ಲರ್ ಅನ್ನು ಅಳವಡಿಸಿದ್ದೇವೆ. ಇದಕ್ಕಾಗಿ ಒಂದು ಎಕರೆಗೆ ಕನಿಷ್ಠ ₹30 ರಿಂದ ₹35 ಸಾವಿರ ಖರ್ಚು ತಗಲಿದೆ ಎನ್ನುತ್ತಾರೆ.
ಹಿಪ್ಪು ನೇರಳೆ ಸೊಪ್ಪಿನ ತೋಟಗಳಿಗೆ ಸ್ಪ್ರಿಂಕ್ಲರ್ ಅಳವಡಿಸುವುದರಿಂದ ಸೊಪ್ಪಿನ ಗುಣಮಟ್ಟ ಉತ್ತಮವಾಗಿರಲಿದೆ. ಸೊಪ್ಪಿನಲ್ಲಿ ಕಾಣಿಸಿಕೊಳ್ಳುವ ನುಸಿ ರೋಗ, ಕ್ರೀಮಿ ಕೀಟ ಬಾಧೆ ನಿಯಂತ್ರಿಸಬಹುದು. ಮುಖ್ಯವಾಗಿ ಅಕ್ಕ-ಪಕ್ಕದಲ್ಲಿನ ಬೆಳೆಗಳಿಗೆ ಸಿಂಪಡಿಸುವ ಔಷಧಿಗಳನ್ನು ನಿಯಂತ್ರಿಸಲು, ಧೂಳಿನಿಂದ ಸೊಪ್ಪನ್ನು ಸುರಕ್ಷಿತವಾಗಿ ಕಾಪಾಡಬಹುದು. ಭೂಮಿಯು ಸದಾ ತೇವಾಂಶದಿಂದ ಕೂಡಿರಲಿದೆ. ಸೊಪ್ಪಿನಲ್ಲಿ ನೀರಿನಾಂಶ ಇದ್ದರೆ ಕಟಾವು, ಭೂಮಿಯ ಉಳುಮೆ ಸುಲಭವಾಗಲಿದೆ ಎಂದು ಹೇಳುತ್ತಾರೆ.
ಪ್ರಸ್ತುತ ರೇಷ್ಮೆ ಗೂಡಿಗೆ ಉತ್ತಮ ಬೆಲೆ ಇದೆ. ಆದರೆ ರೇಷ್ಮೆ ಸಾಕಾಣಿಕೆಯಲ್ಲಿ ಬೆಳೆಗಾರರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರೇಷ್ಮೆ ಇಲಾಖೆ ಬೆಳೆಗಾರರಿಗೆ ಸರ್ಕಾರದಿಂದ ಸಿಗುವಂತಹ ಸವಲತ್ತುಗಳನ್ನು ಒದಗಿಸಿಕೊಡಬೇಕು.ಮಂಜುನಾಥ್, ರೇಷ್ಮೆ ಕೃಷಿಕ
ದಾಳಿಂಬೆ ಗುಲಾಬಿ ಪರಿಣಾಮ
ಕೃಷಿ ತೋಟಗಾರಿಕೆ ಬೆಳೆಗಳಿಗೆ ಕೀಟ ಇತರೆ ಔಷಧಿಗಳ ಸಿಂಪಡಣೆಗೆ ಅತಿಯಾಗಿ ಬೂಮ್ ಸ್ಪ್ರೇಯರ್ ಯಂತ್ರಗಳ ಬಳಕೆಯ ಪರಿಣಾಮ ಸಮೀಪದ ಹಿಪ್ಪುನೇರಳೆ ಸೊಪ್ಪಿನ ತೋಟಗಳನ್ನು ತೆರವುಗೊಳಿಸಿರುವ ಅನೇಕ ಉದಾಹರಣೆಗಳಿವೆ. ಅದರಲ್ಲೂ ದಾಳಿಂಬೆ ದ್ರಾಕ್ಷಿ ಗುಲಾಬಿ ಬೆಳೆಗಳು ಇರುವ ಕಡೆ ಹಿಪ್ಪುನೇರಳೆ ಸೊಪ್ಪಿನ ತೋಟಗಳನ್ನು ರೈತರು ತೆರವುಗೊಳಿಸಿದ್ದಾರೆ. ಇಂತಹ ಜಾಗದಲ್ಲಿ ಸರ್ಕಾರ ಬೆಳೆಗಾರರಿಗೆ ಶೆಡ್ ನೆಟ್ ಹಾಗೂ ಸ್ಪ್ರಿಂಕ್ಲರ್ ಅಳವಡಿಕೆಗೆ ಸಹಾಯಧನ ನೀಡಬೇಕು ಎಂದು ರೇಷ್ಮೆ ಕೃಷಿಕರು ಆಗ್ರಹಿಸಿದ್ದಾರೆ. ಹುಳವಿಗೆ ಶುದ್ಧವಾದ ಸೊಪ್ಪು ರೇಷ್ಮೆ ಹುಳ ಆರೈಕೆ ಮಾಡುವಷ್ಟೇ ಹಿಪ್ಪುನೇರಳೆ ಸೊಪ್ಪು ಬೆಳೆಯುವುದು ಸೂಕ್ಷ್ಮವಾದ ಕೆಲಸ. ಈ ಸೊಪ್ಪಿನ ತೋಟಗಳ ಅಕ್ಕ ಪಕ್ಕ ಕೃಷಿ ತೋಟಗಾರಿಕೆ ಬೆಳೆಗಳಿದ್ದರೆ ರೇಷ್ಮೆ ಕೃಷಿ ಅಸಾಧ್ಯ. ಹಿಪ್ಪುನೇರಳೆ ಸೊಪ್ಪಿನ ಮೇಲೆ ದೂಳು ಅಕ್ಕಪಕ್ಕದ ತೋಟದವರು ಔಷಧಿ ಸಿಂಪಡಿಸಿದಾಗ ತೋಟ ಹಾಳಾಗುತ್ತಿದ್ದು ಇದರಿಂದ ಸೊಪ್ಪಿನ ತೋಟ ತೆರವುಗೊಳಿಸಬೇಕೆಂದು ಕಂಡಿದ್ದೇವು. ಈಗ ತೋಟಕ್ಕೆ ಸ್ಪ್ರಿಂಕ್ಲರ್ ಅಳವಡಿಸಿರುವುದರಿಂದ ರೇಷ್ಮೆ ಹುಳಕ್ಕೆ ಯಾವುದೇ ತೊಂದರೆಯಾಗಿಲ್ಲ. ಹುಳವಿಗೆ ಶುದ್ಧವಾದ ಸೊಪ್ಪು ಹಾಕಬಹುದು. ಅವಿನಾಶ್ ತಿಮ್ಮಪ್ಪನಹಳ್ಳಿ ರೇಷ್ಮೆ ಕೃಷಿಕ
ಸಹಾಯ ಧನಕ್ಕೆ ಮನವಿ
ಹಿಪ್ಪು ನೇರಳೆ ಸೊಪ್ಪಿಗೆ ಹನಿ ನೀರಾವರಿ ಜೊತೆಗೆ ದೊಡ್ಡ ಸ್ಪ್ರಿಂಕ್ಲರ್ ಅಳವಡಿಸುವುದರಿಂದ ಬೇಸಿಗೆಯಲ್ಲಿ ಸೊಪ್ಪು ನೀರಿನಾಂಶದಿಂದ ತಂಪಾಗಿರಲಿದೆ. ಸೊಪ್ಪಿನ ತೋಟಗಳಲ್ಲಿ ವಿಫರೀತ ಧೂಳು ಆವರಿಸಿದ ಸೊಪ್ಪನ್ನು ರೇಷ್ಮೆ ಹುಳಗಳಿಗೆ ತಿನ್ನಲು ಹಾಕಿದರೆ ರೇಷ್ಮೆ ಗುಣಮಟ್ಟವು ಕುಸಿಯಲಿದೆ. ಬೇಸಿಗೆಯಲ್ಲಿ ತೋಟವನ್ನು ತೇವಾಂಶದೊಂದಿಗೆ ಉತ್ಕೃಷ್ಟ ಸೊಪ್ಪನ್ನು ಬೆಳೆದು ರೇಷ್ಮೆ ಹುಳಗಳಿಗೆ ಹಾಕಿದರೆ ರೇಷ್ಮೆ ಗೂಡಿನ ಗುಣಮಟ್ಟ ಉತ್ತಮವಾಗಿರಲಿದೆ. ರೇಷ್ಮೆ ಬೆಳೆಗೆ ಸ್ಪ್ರಿಂಕ್ಲರ್ ಡ್ರಿಪ್ ಅಳವಡಿಕೆಗೆ ಸರ್ಕಾರ ರೈತರಿಗೆ ಸಹಾಯಧನವನ್ನು ನೀಡಬೇಕು ಎಂದು ರೇಷ್ಮೆ ಕೃಷಿಕರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.