ದೊಡ್ಡಬಳ್ಳಾಪುರ: ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ನಟ ದಿವಂಗತ ಡಾ.ವಿಷ್ಣುವರ್ಧನ್ ಅವರ ಸಮಾಧಿಯನ್ನು ರಾತ್ರೋರಾತ್ರಿ ನೆಲಸಮಗೊಳಿಸಿರುವುದನ್ನು ಖಂಡಿಸಿ ಅವರ ಅಭಿಮಾನಿಗಳು ಶನಿವಾರ ನಗರದ ವಿಷ್ಣುವರ್ಧನ್ ಅವರ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು.
ರಾಜ್ಯದ ಚಿತ್ರ ರಂಗದ ಇತಿಹಾಸದಲ್ಲಿ ರಾಜಕುಮಾರ್, ವಿಷ್ಣುವರ್ಧನ್ ಅವರು ಜನಮಾನಸದಲ್ಲಿ ಸದಾ ಕಾಲಕ್ಕೂ ಉಳಿದಿರುವ ಮೇರು ನಟರು. ಇವರ ಆದರ್ಶಮಯ ಚಿತ್ರಗಳು ಎಲ್ಲಾ ಕಾಲಕ್ಕೂ ಮಾರ್ಗದರ್ಶಿಯಾಗಿವೆ. ಇಂತಹ ಮೇರು ನಟನ ಸಮಾಧಿಯನ್ನು ರಾತ್ರೋ ರಾತ್ರಿ ನೆಲಸಮ ಮಾಡಿರುವುದು ನಾಡಿನ ಜನರ ಭಾವನೆಯನ್ನು ಘಾಸಿಗೊಳಿಸಿದೆ. ರಾಜ್ಯ ಸರ್ಕಾರ ಸಮಾಧಿ ಸಮಸ್ಯೆಯನ್ನು ಇತ್ಯರ್ಥ ಪಡಿಸಬೇಕು ಎಂದು ಕನ್ನಡ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಎಂ.ನಾಗರಾಜು ಆಗ್ರಹಿಸಿದರು.
ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಅಗ್ನಿವೆಂಕಟೇಶ್, ತಾಲ್ಲೂಕು ಅಧ್ಯಕ್ಷ ಸಿ.ಶಶಿಧರ್, ಕನ್ನಡ ಹೋರಾಟಗಾರ ಟಿ.ಜಿ.ಮಂಜುನಾಥ್, ತಾಲ್ಲೂಕು ವಿಷ್ಣುಸೇನಾ ಸಮಿತಿಯ ಅಧ್ಯಕ್ಷ ಗಂಗರಾಜ್, ಕಾರ್ಯದರ್ಶಿ ಶಿವಕುಮಾರ್, ವಿಷ್ಣು ಅಭಿಮಾನಿ ನಾರಾಯಣಪ್ಪ, ರಾಜು, ವೈರ್ ಶಿವು ಇದ್ದರು.
ಇಂದು ಪ್ರತಿಭಟನೆ
ಆಗಸ್ಟ್ 11 ರಂದು ಬೆಳಗ್ಗೆ 10 ಗಂಟೆಗೆ ಸಿದ್ದಲಿಂಗಯ್ಯ ವೃತ್ತದಲ್ಲಿ ಡಾ.ವಿಷ್ಣುವರ್ಧನ್ ಸೇನಾ ಸಮಿತಿ ಮತ್ತು ವಿಷ್ಣುವರ್ಧನ್ ಅಭಿಮಾನಿಗಳ ಒಕ್ಕೂಟದಿಂದ ನಗರದಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿದೆ ಸಮಿತಿಯ ಸಹ ಕಾರ್ಯದರ್ಶಿ ರಾಮಾಂಜಿನಪ್ಪ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.