ADVERTISEMENT

ವಿಶ್ವೇಶ್ವರಯ್ಯ ಕೊಡುಗೆ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 4:23 IST
Last Updated 17 ಸೆಪ್ಟೆಂಬರ್ 2021, 4:23 IST
ದೇವನಹಳ್ಳಿ ಪಟ್ಟಣದ ಬಿ.ಬಿ. ರಸ್ತೆಯ ಜಿಲ್ಲಾ ಪಂಚಾಯಿತಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕಚೇರಿಯಲ್ಲಿ ಎಂಜಿನಿಯರ್ಸ್‌ ದಿನಾಚರಣೆ ನಡೆಯಿತು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಸೋಮಶೇಖರ್‌, ಅನ್ನಪೂರ್ಣಮ್ಮ, ಬೂದಿಗೆರೆ ಶಿವಣ್ಣ ಹಾಗೂ ಕಚೇರಿ ಸಿಬ್ಬಂದಿ ಹಾಜರಿದ್ದರು
ದೇವನಹಳ್ಳಿ ಪಟ್ಟಣದ ಬಿ.ಬಿ. ರಸ್ತೆಯ ಜಿಲ್ಲಾ ಪಂಚಾಯಿತಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕಚೇರಿಯಲ್ಲಿ ಎಂಜಿನಿಯರ್ಸ್‌ ದಿನಾಚರಣೆ ನಡೆಯಿತು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಸೋಮಶೇಖರ್‌, ಅನ್ನಪೂರ್ಣಮ್ಮ, ಬೂದಿಗೆರೆ ಶಿವಣ್ಣ ಹಾಗೂ ಕಚೇರಿ ಸಿಬ್ಬಂದಿ ಹಾಜರಿದ್ದರು   

ದೇವನಹಳ್ಳಿ:ನಾಡಿನಲ್ಲಿ ಕೈಗಾರಿಕೆಗಳ ಉದಯ ಹಾಗೂ ಸಾಕಷ್ಟು ಮಂದಿ ಯುವಕರಿಗೆ ಉದ್ಯೋಗದ ಅವಕಾಶ ಕಲ್ಪಿಸಲು ವಿಶ್ವೇಶ್ವರಯ್ಯ ಕೊಡುಗೆ ಅಪಾರ. ಅವರ ಆದರ್ಶವನ್ನು ಮುಂದಿನ ಪೀಳಿಗೆ ಪಾಲಿಸಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಸೋಮಶೇಖರ್ ಹೇಳಿದರು.

ಪಟ್ಟಣದ ಬಿ.ಬಿ. ರಸ್ತೆಯಲ್ಲಿರುವ ಜಿಲ್ಲಾ ಪಂಚಾಯಿತಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಎಂಜಿನಿಯರ್ಸ್‌ ದಿನಾಚರಣೆ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶ್ವೇಶ್ವರಯ್ಯ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಅವರು ಎಂಜಿನಿಯರ್ ಕ್ಷೇತ್ರಕ್ಕೆ ನೀಡಿದ ಕೊಡುಗೆ ಇಂದಿಗೂ ಪ್ರಸ್ತುತವಾಗಿವೆ. ಭಾರತ ಕಂಡ ಅಪ್ರತಿಮ ಸಾಧಕ ಹಾಗೂ ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ಜಾಗತಿಕ ಮಟ್ಟಕ್ಕೆ ಎತ್ತರಿಸಿದ ಅಗ್ರಗಣ್ಯರಾಗಿದ್ದಾರೆ ಎಂದರು.

ADVERTISEMENT

ಈ ನೆಲದ ಸಾಕ್ಷಿಪ್ರಜ್ಞೆಯಾದ ವಿಶ್ವೇಶ್ವರಯ್ಯ ಅವರ ತತ್ವಾದರ್ಶ ಹಾಗೂ ಸಂದೇಶಗಳು ಎಲ್ಲರಿಗೂ ದಾರಿದೀಪವಾಗಿವೆ. ಅವರ ಕೊಡುಗೆಯಿಂದ ವಿದೇಶದಲ್ಲೂ ಡ್ಯಾಂಗಳು ನಿರ್ಮಾಣಗೊಂಡಿವೆ. ಅವರು ಮುಂಬೈ ನಗರ ನಿರ್ಮಾಣಕ್ಕೆ ಮೂರು ಯೋಜನೆ ರೂಪಿಸಿದ್ದರು. ಕೆಆರ್‌ಎಸ್ ಜಲಾಶಯಕ್ಕೆ ಸ್ವಯಂಚಾಲಿತ ಗೇಟ್ ಅಳವಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಒಬ್ಬ ವ್ಯಕ್ತಿ ಮತ್ತೊಬ್ಬರ ಜೀವನ ರೂಪಿಸಲು ಸಾಧ್ಯವಿಲ್ಲ. ನಮ್ಮ ಮನಸ್ಸು ಮತ್ತು ಸಂತೋಷ ನಮ್ಮ ಮೇಲೆ ಅವಲಂಬಿತವಾಗಿರುತ್ತದೆ. ತಾವೇ ಯೋಚಿಸಿ ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದ ವಿಶ್ವೇಶ್ವರಯ್ಯ ಅವರ ಆದರ್ಶಗಳು ವಿದ್ಯಾರ್ಥಿಗಳ ಮೇಲೆ ಗಾಢ ಪರಿಣಾಮ ಬೀರುತ್ತಿವೆ ಎಂದರು.

ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದರು. ಸಹಾಯಕ ಗುಮಾಸ್ತೆ ಅನ್ನಪೂರ್ಣಮ್ಮ, ಗುತ್ತಿಗೆದಾರ ಬೂದಿಗೆರೆ ಶಿವಣ್ಣ, ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.