ADVERTISEMENT

ಅನರ್ಹರಿಗೆ ಮತದಾರರಿಂದ ನೇರ ಉತ್ತರ

ವಿಜಯಪುರದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 20:00 IST
Last Updated 2 ಡಿಸೆಂಬರ್ 2019, 20:00 IST
ವಿಜಯಪುರದ ಜೆಡಿಎಸ್ ಮುಖಂಡ ಬಿ.ಮುನಿಕೃಷ್ಣಪ್ಪ ಅವರ ಮನೆಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಬೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು
ವಿಜಯಪುರದ ಜೆಡಿಎಸ್ ಮುಖಂಡ ಬಿ.ಮುನಿಕೃಷ್ಣಪ್ಪ ಅವರ ಮನೆಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಬೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು   

ವಿಜಯಪುರ (ಬೆಂಗಳೂರು ಗ್ರಾಮಾಂತರ): ಉಪ ಚುನಾವಣೆಯಲ್ಲಿ ಬಿಜೆಪಿ 15 ಕ್ಷೇತ್ರಗಳಲ್ಲೂ ಗೆಲವು ಸಾಧಿಸುತ್ತೇವೆ ಎನ್ನುವ ವಿಶ್ವಾಸದಲ್ಲಿ ಬೀಗುತ್ತಿದೆ. ಮೈತ್ರಿ ಸರ್ಕಾರವನ್ನು ಬೀಳಿಸಿ, ಸ್ವಾರ್ಥಕ್ಕಾಗಿ ಜನರ ತೀರ್ಪಿಗೆ ತಿಲಾಂಜಲಿ ಇಟ್ಟ ಅನರ್ಹರಿಗೆ ಜನರೇ ನೇರವಾಗಿ ಉತ್ತರ ನೀಡ್ತಾರೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ಇಲ್ಲಿನ ಜೆಡಿಎಸ್ ಮುಖಂಡ ಬಿ.ಮುನಿಕೃಷ್ಣಪ್ಪ ಅವರ ನಿಧನದ ಹಿನ್ನೆಲೆಯಲ್ಲಿ ಕುಟುಂಬದವರನ್ನು ಭೇಟಿ ಮಾಡಿದ ಅವರು, ಮುಖಂಡ ರವೀಶ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ ನಂತರ ಮಾತನಾಡಿದರು.

ಕಳೆದ ವಿಧಾನಸಭಾ ಚುನಾವಣೆಯ ಬಳಿಕ ಕಾಂಗ್ರೆಸ್‌ನವರು ಮನೆ ಬಾಗಿಲಿಗೆ ಬಂದು ಸಿ.ಎಂ.ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದರು. ಆದರೂ ಜನಪರವಾದ ಆಡಳಿತವನ್ನು ಸಹಿಸದ ಬಿಜೆಪಿ ಶಾಸಕರಿಂದ ರಾಜೀನಾಮೆ ಕೊಡಿಸಿ, ಮತ್ತೊಂದು ಉಪಚುನಾವಣೆಗೆ ಕಾರಣವಾಗಿದೆ ಎಂದು ಟೀಕಿಸಿದರು.

ADVERTISEMENT

ಕ್ಷೇತ್ರಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ನೀಡಿದ್ದರೂ ಸ್ವಾರ್ಥ ಚಿಂತನೆಯಿಂದಾಗಿ ಜನರ ನಂಬಿಕೆಯಿಂದ ಐದು ವರ್ಷ ಶಾಸಕರಾಗಿ ಕೆಲಸ ಮಾಡಿ ಎಂದು ನೀಡಿದ್ದ ಅವಕಾಶವನ್ನು ಬಳಕೆ ಮಾಡಿಕೊಂಡು ಜನರ ನಂಬಿಕೆ ಉಳಿಸುವುದನ್ನು ಬಿಟ್ಟು, ರಾಜೀನಾಮೆ ನೀಡಿದ್ದಾರೆ. ಬಳಿಕ ಮುಂಬೈ ಸೇರಿಕೊಂಡು ಪುನಃ ಜನರ ಮುಂದೆ ಮತ ನೀಡುವಂತೆ ಕೇಳುತ್ತಿದ್ದಾರೆ ಎಂದು ದೂರಿದರು.

ಬಿಜೆಪಿಯಿಂದ ಭರವಸೆಗಳ ಮಹಾಪೂರವೇ ಹರಿಯುತ್ತಿದೆ. ಈ ಎಲ್ಲ ಭರವಸೆಗಳನ್ನು ಈಡೇರಿಸುವುದಿಲ್ಲ. ಚುನಾವಣೆ ಮುಗಿದ ನಂತರ ಮರೆತು ಹೋಗುತ್ತಾರೆ. ಅನರ್ಹರಾಗಿ ಚುನಾವಣೆಯಲ್ಲಿ ಸ್ಪರ್ಧಿಸಿರುವವರಲ್ಲಿ ಸ್ವಾರ್ಥವಿದೆಯೇ ಹೊರತು ಕ್ಷೇತ್ರಗಳ ಅಭಿವೃದ್ಧಿಯಲ್ಲ ಎಂದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಉಪಚುನಾವಣೆಗಳು ಜನರಿಗೆ ಬೇಕಾಗಿರಲಿಲ್ಲ, ರಾಜ್ಯದ ಅರ್ಧ ಭಾಗ ಜಲಪ್ರಳಯಕ್ಕೆ ತುತ್ತಾಗಿದ್ದರೂ ಅಲ್ಲಿನ ಜನರ ಬಗ್ಗೆ ಕಾಳಜಿಯಿಲ್ಲದ ಸರ್ಕಾರ ಈಗಿನದು. ಶಾಸಕರನ್ನು ಖರೀದಿ ಮಾಡಿಕೊಂಡು, ಉಪಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಮತದಾರರ ಮುಂದೆ ಸುಳ್ಳಿನ ಕಂತೆಗಳನ್ನು ತೆರೆದಿಡುತ್ತಿದ್ದಾರೆ ಎಂದು ಟೀಕಿಸಿದರು.

ಸರ್ಕಾರ ಉಳಿಸಿಕೊಳ್ಳಬೇಕೆಂಬ ಉದ್ದೇಶ ಬಿಟ್ಟರೆ ರಾಜ್ಯದ ಅಭಿವೃದ್ಧಿ ಅವರಿಗಿಲ್ಲ. ಚಿಕ್ಕಬಳ್ಳಾಪುರದಲ್ಲಿ ರಾಧಾಕೃಷ್ಣ ಅವರು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಚೌಡರೆಡ್ಡಿ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಇರಿಗೇನಹಳ್ಳಿ ಶ್ರೀನಿವಾಸ್, ನಗರ ಘಟಕದ ಅದ್ಯಕ್ಷ ಎಸ್.ಭಾಸ್ಕರ್, ಎಂ.ರವೀಶ್, ಜೆ.ಆರ್.ಮುನಿವೀರಣ್ಣ, ಭೈರೇಗೌಡ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.