ADVERTISEMENT

ಕೆರೆ ಅಂಗಳಗಳನ್ನು ಕಸ ಸುರಿಯುವ ತಿಪ್ಪೆ ಗುಂಡಿಯನ್ನಾಗಿ ಮಾಡಿದ ಗ್ರಾಮ ಪಂಚಾಯಿತಿ

ಸೂಲಿಬೆಲೆ: ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 19 ಜನವರಿ 2020, 2:22 IST
Last Updated 19 ಜನವರಿ 2020, 2:22 IST
ಸೂಲಿಬೆಲೆ ಸಮೀಪದ ಕೆರೆ ಅಂಗಳದಲ್ಲಿ ಕಸ ವಿಲೇವಾರಿ ಮಾಡಲು ನಿಂತಿರುವ ಸ್ವಚ್ಛತಾ ವಾಹಿನಿ
ಸೂಲಿಬೆಲೆ ಸಮೀಪದ ಕೆರೆ ಅಂಗಳದಲ್ಲಿ ಕಸ ವಿಲೇವಾರಿ ಮಾಡಲು ನಿಂತಿರುವ ಸ್ವಚ್ಛತಾ ವಾಹಿನಿ   

ಸೂಲಿಬೆಲೆ: ಸೂಲಿಬೆಲೆ ಪಟ್ಟಣದ ಸುತ್ತ ಮುತ್ತಲಿನ ಕೆರೆ ಅಂಗಳಗಳನ್ನು ಕಸ ಸುರಿಯುವ ತಿಪ್ಪೆ ಗುಂಡಿಯನ್ನಾಗಿ ಗ್ರಾಮ ಪಂಚಾಯಿತಿಯೇ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹೋಬಳಿ ಕೇಂದ್ರವಾದ ಸೂಲಿಬೆಲೆಯಲ್ಲಿ 10 ಸಾವಿರಕ್ಕೂ ಮೀರಿದ ಜನಸಂಖ್ಯೆಯಿದೆ. ದಿನ ನಿತ್ಯ ಹಾಗೂ ಭಾನುವಾರ ಸಂತೆಯಿಂದ ಹೆಚ್ಚು ಕಸ ಉತ್ಪತ್ತಿಯಾಗುತ್ತದೆ. ಆದರೆ ಗ್ರಾಮ ಪಂಚಾಯಿತಿ ದಿನ ನಿತ್ಯ ಉತ್ಪತ್ತಿಯಾಗುವಂತಹ ಕಸವನ್ನು ಕೆರೆ ಅಂಗಳಗಳಲ್ಲಿ ವಿಲೇವಾರಿ ಮಾಡಿ ಕೈತೊಳೆದುಕೊಳ್ಳುತ್ತಿದೆ.

ಘನ ತ್ಯಾಜ್ಯ ಘಟಕ: ಗ್ರಾಮ ಪಂಚಾಯಿತಿಯೂ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಾಣ ಮಾಡಿದೆ. ಆದರೆ ಘನ ತ್ಯಾಜ್ಯ ಘಟಕವನ್ನು ಕಸ ವಿಲೇವಾರಿಗೆ ಬಳಸದೇ ಸ್ಥಗಿತ ಮಾಡಿರುವುದರಿಂದ, ಘನ ತ್ಯಾಜ್ಯ ಘಟಕಕ್ಕೆ ಹಾಕಿರುವ ಪಂಚಾಯಿತಿಯ ಸಾರ್ವಜನಿಕರ ತೆರಿಗೆ ಹಣ ದುರ್ಬಳಕೆ ಮಾಡಿದಂತಾಗಿದೆ.

ADVERTISEMENT

ಕೆರೆಗಳ ಮಾಲಿನ್ಯ: ಕೆರೆಗಳ ಪುನಶ್ಚೇತನ ಯೋಜನೆಗಳನ್ನು ಹಮ್ಮಿಕೊಂಡು, ಕೆರೆಗಳನ್ನು ಅಭಿವೃದ್ಧಿಪಡಿಸಬೇಕಾಗಿದ್ದ ಸ್ಥಳೀಯ ಸರ್ಕಾರವೇ, ಪಟ್ಟಣದ ಕಸ ಮತ್ತು ಇನ್ನಿತರ ತ್ಯಾಜ್ಯವನ್ನು ಕೆರೆಗಳ ಅಂಗಳಕ್ಕೆ ಸುರಿಯುತ್ತಿರುವುದರಿಂದ ಕೆರೆಯ ಪರಿಸರ ಮಾಲಿನ್ಯವಾಗುತ್ತಿದೆ ಎಂಬುದು ಸ್ಥಳೀಯರ ಆರೋಪ.

ಈಚೆಗೆ ಪ್ರಜಾವಾಣಿ ಪತ್ರಿಕೆಯಲ್ಲಿ ‘ಕೆರೆ ಅಂಗಳದಲ್ಲಿ ಕಸ:ಆಕ್ರೋಶ’ ಹಾಗೂ ‘ಪರಿಹಾರ ಕಾಣದ ಕಸದ ತ್ಯಾಜ್ಯ ಸಮಸ್ಯೆ’ ಎಂದು ಸರಣಿಯಲ್ಲಿ ಸುದ್ದಿ ಮಾಡಿ ಕಸದ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಿ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಅವರು ಖುದ್ದು ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಹೇಳಿದ್ದರಾದರೂ ಅದು ಈಡೇರಿಲ್ಲ.

ಸೂಲಿಬೆಲೆ ಗ್ರಾ.ಪಂ. ಪ್ರಭಾರ ಪಿಡಿಒ ಸುಂದರ್ ಅವರು ಪ್ರತಿಕ್ರಿಯಿಸಿ, ‘ಕಸ ಮುಕ್ತ ಮತ್ತು ಸ್ವಚ್ಛ ಗ್ರಾಮವನ್ನಾಗಿ ಮಾಡಲು, ಸಹಕಾರ ಸಿಗುತ್ತಿಲ್ಲ ಎಂದ ಅವರು, ನಾನು 3 ದಿನ ಸೂಲಿಬೆಲೆ ಗ್ರಾಮ ಪಂಚಾಯಿತಿ ಮತ್ತು 3 ದಿನ ತಾವರೆಕೆರೆ ಗ್ರಾ.ಪಂ ಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನಾನು ಇಲ್ಲದ ಸಂದರ್ಭದಲ್ಲಿ ಕೆರೆ ಅಂಗಳಕ್ಕೆ ಕಸ ಹಾಕುತ್ತಿರಬಹುದು, ಕಸ ವಿಲೇವಾರಿ ಮಾಡುವವರನ್ನು ವಿಚಾರಿಸಿ ಕ್ರಮ ತೆಗೆದುಕೊಳ್ಳುತ್ತೇನೆ’ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಾಗರಾಜ್ ಅವರು ಪ್ರತಿಕ್ರಿಯೆ ನೀಡಿ, ‘ಕಸದ ಸಮಸ್ಯೆಯನ್ನು ಬಗೆಹರಿಸಲು ಜನರ ಸಹಕಾರ ಬಹಳ ಮುಖ್ಯ’ ಎಂದರು.

‘ಅಧಿಕಾರಿ ವರ್ಗ, ಜನಪ್ರತಿನಿಧಿಗಳು ಕಸದ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಇಚ್ಛಾಸಕ್ತಿಯನ್ನು ತೋರುತ್ತಿಲ್ಲ. ಸರ್ಕಾರ ಗಮನ ಹರಿಸಿ ಸಮಸ್ಯೆಗೆ ಪರಿಹಾರವನ್ನು ಒದಗಿಸಿ ಕೆರೆ ಪರಿಸರ ಉಳಿಸಬೇಕು ಹಾಗೂ ಜನ ಸಾಮಾನ್ಯರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಣೆ ಮಾಡಬೇಕು’ ಎಂದು ಸೂಲಿಬೆಲೆ ಸ್ಥಳೀಯ ಮುಖಂಡ ಚನ್ನಪ್ಪ ಅವರು ಆಗ್ರಹಿಸಿದ್ದಾರೆ.

‘ಕೆರೆ ಕುಂಟೆಗಳ ಹಳ್ಳಗಳಲ್ಲಿ ಅಲ್ಪ ಸ್ವಲ್ಪ ಸಂಗ್ರಹವಾಗಿರುವ ನೀರು, ಕಸ ಸುರಿಯುತ್ತಿರುವುದರಿಂದ ಕಲುಷಿತಗೊಂಡು ಪ್ರಾಣಿ ಪಕ್ಷಿಗಳಿಗೆ ಮಾರಕವಾಗಿದೆ. ಗ್ರಾಮ ಪಂಚಾಯಿತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಇದ್ದರೂ ಬಳಕೆ ಮಾಡದೇ, ಕಸವನ್ನು ಕೆರೆ ಅಂಗಳಕ್ಕೆ ಸುರಿಯುತ್ತಿರುವುದು ಎಷ್ಟು ಸರಿ’ ಎಂದು ಸ್ಥಳೀಯ ನಿವಾಸಿ ಶಿವಶಂಕರ್ ಪ್ರಶ್ನಿಸಿದ್ದಾರೆ.

‘ಸೂಲಿಬೆಲೆಯ ಸುತ್ತಮುತ್ತಲಿನ ಕೆರೆಗಳ ಅಂಗಳಕ್ಕೆ ಕಸ ಸುರಿಯುತ್ತಿರುವುದರಿಂದ ನಾಯಿಗಳ ಹಾವಳಿ ಜಾಸ್ತಿಯಾಗಿದೆ. ಹಾಗೂ ಪರಿಸರ ಮಾಲಿನ್ಯಕ್ಕೆ ಧಕ್ಕೆಯಾಗುತ್ತಿದೆ’ ಎಂದು ಸ್ಥಳೀಯ ನಿವಾಸಿ ಮಂಜುನಾಥ್ ಎಸ್.ಕೆ. ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.