
ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಭಾರತೀಯ ಕಿಸಾನ್ ಸಂಘ ಮತ್ತು ಆನೇಕಲ್ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ವತಿಯಿಂದ ನೀರಿದ್ದರೆ ನಾಳೆ - ನೀರಿಗಾಗಿ ನಡಿಗೆ ಜಲಜಾಗೃತಿ ವಾಕಥಾನ್‌ನಲ್ಲಿ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು
ಆನೇಕಲ್: ಕೆರೆಗಳಿಗೆ ಕೈಗಾರಿಕೆ ಹಾಗೂ ಕೊಳಚೆ ನೀರು ಸೇರುತ್ತಿರುವುದನ್ನು ತಡೆಯಲು ಆಗ್ರಹಿಸಿ ತಾಲ್ಲೂಕಿನ ಚಂದಾಪುರದಲ್ಲಿ ಭಾರತೀಯ ಕಿಸಾನ್ ಸಂಘ ಆನೇಕಲ್ ಘಟಕ ಮತ್ತು ಆನೇಕಲ್ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯಿಂದ ‘ನೀರಿದ್ದರೆ ನಾಳೆ - ನೀರಿಗಾಗಿ ನಡಿಗೆ’ ಜಲಜಾಗೃತಿ ವಾಕಥಾನ್ ಶನಿವಾರ ನಡೆಯಿತು.
ಜಲಜಾಗೃತಿ ವಾಕಥಾನ್‌ನಲ್ಲಿ ರೈತರು, ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. ಹಸಿರು ಶಾಲುಗಳನ್ನು ಹೊದ್ದು ಜಾಗೃತಿ ಜಾಥಾದಲ್ಲಿ ಪಾಲ್ಗೊಂಡಿದ್ದರು.
ಉಳಿಸಿ ಉಳಿಸಿ ಜಲ ಉಳಿಸಿ, ನೀರು ಉಳಿಸಿ ನಾಳೆ ಕಟ್ಟಿ, ರೈತನೇ ದೇಶದ ರೂವಾರಿ, ನಮ್ಮ ಭೂಮಿ ನಮ್ಮ ಹಕ್ಕು ಘೋಷಣೆಗಳು ಜಾಥಾದಲ್ಲಿ ಮೊಳಗಿದವು.
ಉರಿ ಬಿಸಿಲಿನ ನಡುವೆಯೂ ರೈತರು, ಪರಿಸರ ಪ್ರೇಮಿಗಳು ತಾಲೂಕಿನ ಚಂದಾಪುರದಿಂದ ಮುತ್ತಾನಲ್ಲೂರು ಕೆರೆಯವರೆಗೂ ಜಾಥಾ ನಡೆಸಿ ಕೆರೆಗಳ ಸಂರಕ್ಷಣೆಗೆ ಸಂಕಲ್ಪ ಮಾಡಿದರು. ಬೈಕ್ ಮತ್ತು ಕಾರುಗಳಲ್ಲಿ ಚಂದಾಪುರದಿಂದ ಮುತ್ತಾನಲ್ಲೂರುವರೆಗೂ ಸಂಚರಿಸಿ ಘೋಷಣೆಗಳನ್ನು ಕೂಗಿದರು.
ಮುತ್ತನಲ್ಲೂರು ಕೆರೆಗೆ ತ್ಯಾಜ್ಯ ನೀರು ಹರಿಯುತ್ತಿರುವ ರಾಜಕಾಲುವೆಯ ಮುಂಭಾಗದಲ್ಲಿ ರೈತರು ಸೇರಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಿವೃತ್ತ ಯೋಧ ಮೇಜರ್ ರಘುರಾಮರೆಡ್ಡಿ ಮಾತನಾಡಿ, ಜಲ ಮೂಲ ಸಂರಕ್ಷಣೆ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ. ಕೆರೆಗಳಿಗೆ ತ್ಯಾಜ್ಯ ನೀರು ಹರಿಯದಂತೆ ಕ್ರಮವಹಿಸಬೇಕು. ತ್ಯಾಜ್ಯನೀರು ಹರಿಬಿಡುವ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಂಡು, ನೋಟಿಸ್ ನೀಡಬೇಕು. ಮುಂದಿನ ಪೀಳಿಗೆಗೆ ಗುಣಮಟ್ಟದ ಶುದ್ಧ ಜಲ ನೀಡುವ ಸಲುವಾಗಿ ಪ್ರತಿಯೊಬ್ಬರು ಹೋರಾಟ ನಡೆಸಬೇಕೆಂದು ಹೇಳಿದರು.
ಜಲಮೂಲಗಳ ಸಂರಕ್ಷಣೆಗಾಗಿ ಪಕ್ಷಾತೀತವಾಗಿ ಹೋರಾಟ ರೂಪಿಸಲಾಗಿದೆ. ಚಂದಾಪುರ ಕೆರೆಯ ನೀರು ತಾಲ್ಲೂಕಿನ ವಿವಿಧ ಕೆರೆಗಳಿಗೆ ಹರಿಯುತ್ತದೆ. ಈ ಭಾಗದ ಕೆರೆಗಳು ಒಂದಕ್ಕೊಂದು ಸಂಪರ್ಕ ಹೊಂದಿರುವುದರಿಂದ ಒಂದು ಕೆರೆಗೆ ತ್ಯಾಜ್ಯ ನೀರು ಬಂದರೂ ಅದು ಮತ್ತೊಂದು ಕೆರೆಗೆ ಹೋಗುತ್ತದೆ. ಇದರಿಂದಾಗಿ ಈ ಭಾಗದ ಅಂತರ್ಜಲ ಕಲುಷಿತವಾಗುತ್ತಿದೆ ಎಂದು ಚಿನ್ಮಯ ಸೇವಾ ಸಂಸ್ಥೆ ಮುಖ್ಯಸ್ಥ ಚಿನ್ನಪ್ಪ.ವೈ.ಚಿಕ್ಕಹಾಗಡೆ ಹೇಳಿದರು.
2022ರಲ್ಲಿ ಕೆರೆಗಳಿಗೆ ತ್ಯಾಜ್ಯ ನೀರು ಹರಿಯುತ್ತಿರುವುದರ ಸಂಬಂಧ ಮುತ್ತಾನಲ್ಲೂರಿನಿಂದ ಚಂದಾಪುರದವರೆಗೆ ಪಾದಯಾತ್ರೆ ಆಯೋಜಿಸಲಾಗಿತ್ತು. 2018 ರಲ್ಲಿ ರಾಜಭವನ ಚಲೋ ರೂಪಿಸಲಾಗಿತ್ತು. ಕೆರೆಗಳು ಮತ್ತು ಜಲಮೂಲಗಳ ಸಂರಕ್ಷಣೆಗಾಗಿ ಎಲ್ಲರೂ ಒಂದಾಗಿ ಹೋರಾಟ ನಡೆಸುವ ಅನಿವಾರ್ಯ ಇದೆ ಎಂದರು.
ಆನೇಕಲ್ ತಾಲ್ಲೂಕು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಗೌರವಾಧ್ಯಕ್ಷ ಜಯಪ್ರಕಾಶ್, ಭಾರತೀಯ ಕಿಸಾನ್ ಸಂಘದ ಮಂಜುನಾಥ್, ಕೆಆರ್‌ಎಸ್ ಮುಖಂಡ ವಿಜಯ ರೆಡ್ಡಿ, ಮುಖಂಡರಾದ ಹಂದೇನಹಳ್ಳಿ ರಾಮಚಂದ್ರರೆಡ್ಡಿ, ಪರಶುರಾಮ್, ಭೈರೇಶ್, ಮುರುಗೇಶ್, ಉಮಾ ಮಂಜುಳಾ, ಸಿ.ಆರ್.ವಿಜಯ್ ಕುಮಾರ್, ಹರೀಶ್ ಅಣ್ಣಯ್ಯ, ರಾಜೇಶ್, ಸುನೀಲ್, ಅಶೋಕ್, ಶ್ರೀನಾಥ್, ಮಂಜುನಾಥ್, ಅಂಬರೀಶ್ ರೆಡ್ಡಿ, ಸತೀಶ್ ರೆಡ್ಡಿ, ಪುಟ್ಟಣ್ಣ ಇದ್ದರು.
ಕಾಟಾಚಾರಕ್ಕೆ ನೀರಿನ ಮಾದರಿ ಸಂಗ್ರಹ
ಆನೇಕಲ್ ತಾಲೂಕಿನ ವಿವಿಧ ಕೆರೆಗಳು ಕಲುಷಿತಗೊಂಡಿದೆ. ಕಲುಷಿತಗೊಂಡ ಕೆರೆಗಳಿಗೆ ಹಲವಾರು ಬಾರಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದರು. ಆದರೆ ವರದಿ ಏನೆಂಬುದು ತಿಳಿದಿಲ್ಲ. ಯಾವ ಕ್ರಮವು ಕೈಗೊಂಡಿಲ್ಲ. ಇದನ್ನು ಗಮನಿಸಿದರೆ ಕಾಟಾಚಾರಕ್ಕೆ ನೀರಿನ ಮಾದರಿ ಸಂಗ್ರಹಿಸಲಾಯಿತೇ ಎನ್ನಿಸುತ್ತದೆ ಎಂದು ರೈತ ಮುಖಂಡ ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದರು. ತುರ್ತು ಕ್ರಮಕ್ಕೆ ಆಗ್ರಹ: ಚಂದಾಪುರ ಕೆರೆಗೆ ತ್ಯಾಜ್ಯ ನೀರು ಹರಿಬಿಡುವುದರ ಸಂಬಂಧ ಸುಪ್ರೀಂಕೋರ್ಟ್ ದಂಡ ಸಹ ವಿಧಿಸಿತ್ತು. ಆದರೂ ಸಂಸ್ಕರಿಸದ ತ್ಯಾಜ್ಯ ನೀರು ಕೆರೆಗಳಿಗೆ ಹರಿಯುತ್ತಿದೆ. ತ್ಯಾಜ್ಯ ನೀರು ಕೆರೆಗೆ ಹರಿಯುತ್ತಿರುವುದರಿಂದ ಈ ಭಾಗದಲ್ಲಿ ರೋಗಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತುರ್ತು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಉದ್ಘಾಟನೆಗೆ ಬಂದ ಅಧಿಕಾರಿಗಳಿಗೆ ತರಾಟೆ
ಜಲ ಜಾಗೃತಿ ಜಾಥಾ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಸ್ಥಳೀಯ ಸಂಸ್ಥೆ ಮುಖ್ಯ ಅಧಿಕಾರಿಗಳಿಗೆ ರೈತ ಸಂಘದ ಮುಖಂಡರು ಮತ್ತು ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ತಾಲ್ಲೂಕಿನ ಕೆರೆಗಳಿಗೆ ಕೈಗಾರಿಕೆ ದ್ರವ ತ್ಯಾಜ್ಯ ಹಾಗೂ ಕೊಳಚೆ ನೀರು ಸೇರುತ್ತಿದ್ದರು ಯಾವುದೇ ಕ್ರಮ ಕೈಗೊಂಡಿಲ್ಲ. ತಪ್ಪಿಸ್ಥತರ ವಿರುದ್ಧ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿರುವುದೇಕೆ? ಎಂದು ಚಂದಾಪುರ ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಬೊಮ್ಮಸಂದ್ರ ಪುರಸಭಾ ಮುಖ್ಯಾಧಿಕಾರಿ ವೆಂಕಟೇಶ್ ಮತ್ತು ಹೆಬ್ಬಗೋಡಿ ನಗರಸಭಾ ಆಯುಕ್ತ ರಾಜೇಂದ್ರ ಅವರನ್ನು ಪಶ್ನಿಸಿದರು. ಚಂದಾಪುರ ಕೆರೆ ಸೇರಿದಂತೆ ವಿವಿಧ ಕೆರೆಗಳಿಗೆ ತ್ಯಾಜ್ಯ ನೀರು ಹರಿಯುತ್ತಿದ್ದು ಕೈಗಾರಿಕೆಗಳ ತ್ಯಾಜ್ಯ ನೀರೇ ಹೆಚ್ಚು ಹರಿಯುತ್ತಿದೆ. ಕೆರೆಗಳಲ್ಲಿ ಎಸ್‌ಟಿಪಿ ಘಟಕ ಸ್ಥಾಪಿಸಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.