ADVERTISEMENT

ನೀರು ಪೂರೈಕೆಗೆ ಪ್ರಥಮ ಆದ್ಯತೆ: ಶಾಸಕ

ನೀರು ಸಂಗ್ರಹಣಾ ಸಂಪು ನಿರ್ಮಾಣಕ್ಕೆ ಗುದ್ದಲಿ ಪೂಜೆ, ಜಲಮೂಲಗಳ ಸಂರಕ್ಷಣೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 14:30 IST
Last Updated 14 ಡಿಸೆಂಬರ್ 2019, 14:30 IST
ಚನ್ನರಾಯಪಟ್ಟಣದ ಬೆಟ್ಟಕೋಟೆ ಗ್ರಾ.ಪಂ ವ್ಯಾಪ್ತಿಯ ದೊಡ್ಡಹೊಸಹಳ್ಳಿ ಗ್ರಾಮದಲ್ಲಿ ನೀರಿನ ಸಂಪು ನಿರ್ಮಾಣಕ್ಕೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಚಾಲನೆ ನೀಡಿದರು
ಚನ್ನರಾಯಪಟ್ಟಣದ ಬೆಟ್ಟಕೋಟೆ ಗ್ರಾ.ಪಂ ವ್ಯಾಪ್ತಿಯ ದೊಡ್ಡಹೊಸಹಳ್ಳಿ ಗ್ರಾಮದಲ್ಲಿ ನೀರಿನ ಸಂಪು ನಿರ್ಮಾಣಕ್ಕೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಚಾಲನೆ ನೀಡಿದರು   

ವಿಜಯಪುರ: ‘ಲಭ್ಯವಿರುವ ನೀರನ್ನು ಸದ್ಬಳಕೆ ಮಾಡಿಕೊಂಡು, ಜಲಮೂಲಗಳನ್ನು ಸಂರಕ್ಷಣೆ ಮಾಡಿ, ಅಂತರ್ಜಲ ಮಟ್ಟ ವೃದ್ಧಿಗೊಳಿಸುವತ್ತ ಜನರು ಗಮನ ಹರಿಸಬೇಕು’ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಚನ್ನರಾಯಪಟ್ಟಣ ಹೋಬಳಿ ದೊಡ್ಡಹೊಸಹಳ್ಳಿ ಗ್ರಾಮದಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಸಿ.ಎಸ್.ಆರ್ ಅನುದಾನದಡಿಯಲ್ಲಿ ನಾಲ್ಕು ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಸಂಗ್ರಹಣಾ ಟ್ಯಾಂಕ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿ ಅವರು ಮಾತನಾಡಿದರು.

‘ತೀವ್ರ ಬರಗಾಲಕ್ಕೆ ಒಳಗಾಗಿದ್ದ ಬಯಲುಸೀಮೆ ಭಾಗದಲ್ಲಿ ಅಂತರ್ಜಲ ಮಟ್ಟ 1,800 ಅಡಿಗಳಿಗೆ ಕುಸಿದಿದೆ. ಜನ, ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನಗಳಲ್ಲಿ ನೀರು ಪೂರೈಕೆಗೆ ಪ್ರಥಮ ಆದ್ಯತೆ ನೀಡಲಾಗುತ್ತಿದೆ. ಈ ಬಾರಿಯೂ ಯಾವುದೇ ಕೆರೆಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗದ ಕಾರಣ ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗುವ ಸಂಭವವಿದೆ. ಹಾಗಾಗಿ ಸಂಪಿನಲ್ಲಿನೀರು ಸಂಗ್ರಹಿಸಿ ಅವಶ್ಯವಿರುವ ಕಡೆಗೆ ಪೂರೈಕೆ ಮಾಡುವ ವ್ಯವಸ್ಥೆ ಮಾಡಲಾಗುತ್ತದೆ. ಇಂತಹ ಯೋಜನೆಗಳನ್ನು ಬಳಕೆ ಮಾಡಿಕೊಳ್ಳಲು ಜನರು ಮುಂದಾಗಬೇಕು’ ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮೀನಾರಾಯಣಪ್ಪ ಮಾತನಾಡಿ, ‘ಸರ್ಕಾರದಿಂದ ಬಿಡುಗಡೆಯಾಗುವ ಅನುದಾನ ದುರುಪಯೋಗವಾಗದಂತೆ ಗಮನ ಹರಿಸಬೇಕಿರುವುದು ಪ್ರತಿಯೊಬ್ಬರ ಕರ್ತವ್ಯ. ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಈ ಬಗ್ಗೆ ಸ್ಥಳೀಯರು ಗಮನ ಹರಿಸಿ ಪರಿಶೀಲನೆ ಮಾಡಬೇಕು. ಲೋಪದೋಷ ಕಂಡು ಬಂದರೆ ಸಂಬಂಧಪಟ್ಟವರ ಗಮನಕ್ಕೆ ತರಬೇಕು’ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯ ನಂದೀಶ್ ಮಾತನಾಡಿ, ‘ಈಗಾಗಲೇ ಬೆಟ್ಟಕೋಟೆ, ರೆಡ್ಡಿಹಳ್ಳಿ ಗ್ರಾಮಗಳಲ್ಲಿ ಸಂಪುಗಳು ನಿರ್ಮಾಣವಾಗಿವೆ. ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲೂ ಸಂಪು ನಿರ್ಮಾಣವಾದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾವೇರಿ ನೀರು ಹರಿಸುವ ಯೋಜನೆ ಚಾಲನೆಯಲ್ಲಿ ಇರುವ ಕಾರಣ, ಸುತ್ತಲಿನ ಹಳ್ಳಿಗಳಿಗೂ ಯೋಜನೆ ವಿಸ್ತರಿಸಬೇಕು’ ಎಂದು ಹೇಳಿದರು.

ಜೆಡಿಎಸ್ ಹೋಬಳಿ ಘಟಕದ ಅಧ್ಯಕ್ಷ ಮುನಿರಾಜು, ಮುಖಂಡ ಕಾರಹಳ್ಳಿ ಮುನೇಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ಭೀಮೇಶ್, ವೆಂಕಟೇಗೌಡ, ಮುಖಂಡರಾದ ಶಿವಾನಂದ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬೀರೇಶ್, ಕರ ವಸೂಲಿಗಾರ ತಿಮ್ಮೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.