ADVERTISEMENT

ದೊಡ್ಡಬಳ್ಳಾಪುರ: ಉದ್ದಿಮೆಯೊಳಗಿನ ದುರ್ಬಲ ಎಳೆಗಳು

ನೇಕಾರರ ಬದುಕಿನ ದಿಕ್ಕು ಬದಲಿಸಿದ 1985 ಕಾಯ್ದೆ * ಬದಲಾದ ಕಾಲಘಟ್ಟದಲ್ಲಿ ಯುವ ಜನರು ದೂರ

ನಟರಾಜ ನಾಗಸಂದ್ರ
Published 20 ಮೇ 2020, 8:26 IST
Last Updated 20 ಮೇ 2020, 8:26 IST
ವಿದ್ಯುತ್‌ ಮಗ್ಗದಲ್ಲಿ ಸೀರೆ ನೇಯುವಲ್ಲಿ ನಿರತ ನೇಕಾರ (ಸಂಗ್ರಹ ಚಿತ್ರ)
ವಿದ್ಯುತ್‌ ಮಗ್ಗದಲ್ಲಿ ಸೀರೆ ನೇಯುವಲ್ಲಿ ನಿರತ ನೇಕಾರ (ಸಂಗ್ರಹ ಚಿತ್ರ)   

ದೊಡ್ಡಬಳ್ಳಾಪುರ: ಇಲ್ಲಿನ ಜನರ ಬೆಳಗಿನ ಬದುಕು ಪ್ರಾರಂಭವಾಗುವುದೇ ಮಗ್ಗಗಳ ಲಾಳಿ ಲಟಪಟ ಸದ್ದಿನ ಸುಪ್ರಭಾತದೊಂದಿಗೆ. ಅಷ್ಟರಮಟ್ಟಿಗೆ ವಿದ್ಯುತ್ ಮಗ್ಗಗಳು ಜನರ ಬದುಕಿನ ಅವಿಭಾಜ್ಯ ಅಂಗವಾಗಿ ಬೆಳೆದು ಬಂದಿವೆ. ಆದರೆ, ಲಾಕ್‌ಡೌನ್‌ ನಂತರ ಇಡೀ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ.

ದೊಡ್ಡಬಳ್ಳಾಪುರದ ಇಡೀ ಆರ್ಥಿಕತೆ ಅವಲಂಬನೆಯಾಗಿರುವುದೇ ವಿದ್ಯುತ್ ಮಗ್ಗಗಳ ಮೇಲೆ. ಸ್ವಾತಂತ್ರ್ಯಪೂರ್ವದಿಂದಲೂ ರೇಷ್ಮೆ ನಗರವೆಂದೇ ಖ್ಯಾತಿ ಹೊಂದಿರುವ ದೊಡ್ಡಬಳ್ಳಾಪುರ ಮಗ್ಗಗಳ ಲಾಳಿ ಸದ್ದಿನಲ್ಲಿ ಅಲ್ಪಸ್ವಲ್ಪ ಏರುಪೇರಾದರೂಸಾಕು. ಮಾರುಕಟ್ಟೆಗೆ ರೈತರು ತಂದ ಹಣ್ಣು, ತರಕಾರಿ ಬೆಲೆ ಹರಾಜು ಆಗದೆ ನಿಂತು ಹೋಗುತ್ತವೆ. ನಗರದಲ್ಲಿನ ಸಣ್ಣ ಪುಟ್ಟ ಹೋಟೆಲ್‌ಗಳಲ್ಲಿ ವ್ಯಾಪಾರ ಕುಸಿತವಾಗುತ್ತದೆ. ದಿನಸಿ ಅಂಗಡಿಗಳಲ್ಲಿ ಸಾಲದ ಪಟ್ಟಿ ಬೆಳೆಯುತ್ತದೆ. ಮಕ್ಕಳ ಶಾಲಾ ಶುಲ್ಕ ಬಾಕಿ ಉಳಿಯುತ್ತವೆ...ಹಿಗೇ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಒಂದು ಕಾಲಕ್ಕೆ ಕೈ ಮಗ್ಗಗಳನ್ನು ಹೊಂದಿದ್ದ ಇಲ್ಲಿನ ನೇಕಾರರು ಕಾಲ ಬದಲಾದಂತೆ ವಿದ್ಯುತ್ ಮಗ್ಗಗಳಿಗೆ ಹೊಂದಿಕೊಂಡಿದ್ದಾರೆ. ರೇಷ್ಮೆ ಸೀರೆಗಳಿಗೆ ಬೇಡಿಕೆ ಕಡಿಮೆಯಾದಂತೆ ಕೃತಕ ರೇಷ್ಮೆ, ಕಾಟನ್...ಹೀಗೆ ಮಾರುಕಟ್ಟೆಯಲ್ಲಿನ ಬೇಡಿಕೆ, ಬೆಲೆಗೆ ತಕ್ಕಂತೆ ವಿವಿಧ ನಮೂನೆ ಸೀರೆಗಳ ನೇಯ್ಗೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ADVERTISEMENT

ಒಂದರಿಂದ ನಾಲ್ಕು ಮಗ್ಗಗಳನ್ನು ಹೊಂದಿರುವ ನೇಕಾರರ ಸಂಖ್ಯೆಯೇ ಹೆಚ್ಚು. ಒಂದೆರಡು ಮಗ್ಗಗಳನ್ನು ಹೊಂದಿರುವ ಯಾರೂ ಕೂಡ ಕಾರ್ಮಿಕರನ್ನು ಅವಲಂಬಿಸುವುದಿಲ್ಲ. ಕಂಡಿಕೆ, ವೈಂಡಿಂಗ್ ನೇಯ್ಗೆ ಸೇರಿದಂತೆ ಎಲ್ಲ ಕೆಲಸವನ್ನು ಮನೆಯ ಮಹಿಳೆಯರು, ಮಕ್ಕಳು ಸೇರಿಯೇ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಮನೆಯಲ್ಲಿನ ಮಕ್ಕಳು (ಗಂಡು, ಹೆಣ್ಣು ಮಕ್ಕಳು) ಶಾಲೆಗೆ ಹೋಗುವಷ್ಟರಲ್ಲಿ ವೈಂಡಿಂಗ್, ಕಂಡಿಕೆಗಳನ್ನು ಹಾಕಿಕೊಟ್ಟು ಹೋಗುತ್ತಾರೆ. ಇನ್ನು ಮನೆಯಲ್ಲಿನ ಅಡುಗೆ ಕೆಲಸವಾದ ನಂತರ ಮಹಿಳೆಯರೂ ಸಹ ನೇಕಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ.

ಕಾಲೇಜಿನಲ್ಲಿ ತರಗತಿ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ಯುವಕರು ನೇಕಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಪದವಿ ಶಿಕ್ಷಣ ಮುಗಿಯುಷ್ಟರಲ್ಲಿ ಸಂಪೂರ್ಣವಾಗಿ ನೇಕಾರಿಕೆ ಉದ್ಯಮದಲ್ಲಿ ಸಕ್ರಿಯರಾಗುತ್ತಿದ್ದರು. ವಿದ್ಯಾಭ್ಯಾಸ ಮುಗಿಸುತ್ತಿದ್ದಂತೆ ಬೇರೆ ಉದ್ಯೋಗಗಳತ್ತ ಒಲವು ತೋರದೆ ಮನೆಯಲ್ಲಿನ ನೇಕಾರಿಕೆಯಲ್ಲಿ ಬಹುತೇಕ ಯುವಸಮೂಹ ತೊಡಗಿಸಿಕೊಳ್ಳುತಿತ್ತು. ಇದು 80, 90ರ ದಶಕದ ದೊಡ್ಡಬಳ್ಳಾಪುರದ ಚಿತ್ರಣ.

ವಿಚಿತ್ರ ಕಾನೂನು: ಬೃಹತ್ ಬಟ್ಟೆ ಮಿಲ್‌ಗಳ ಒತ್ತಡಕ್ಕೆ ಮಣಿದು 1985ರಲ್ಲಿ ಜಾರಿಗೆ ತರಲಾದ ಕೈಮಗ್ಗ ಮೀಸಲಾತಿ ಅಧಿನಿಯಮ ಕಾನೂನು ಇಡೀ ನಗರದಲ್ಲಿನ ನೇಕಾರಿಕೆ ಉದ್ಯಮದ ಚಿತ್ರಣವನ್ನೇ ಬದಲಿಸುತ್ತಾ ಬಂತು. ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಯಾವುದೇ ಬಟ್ಟೆಯನ್ನು ವಿದ್ಯುತ್ ಮಗ್ಗದಲ್ಲಿ ನೇಯುವಂತಿಲ್ಲ. ಸರ್ಕಾರ ನಿಗದಿಪಡಿಸಿದ ಸೀರೆ ನೇಯ್ದರೆ ಕೇಳುವವರಿಲ್ಲ. ಈ ಕಾಯಿದೆಯನ್ನೇ ನೆಪವಾಗಿಟ್ಟುಕೊಂಡ ಜವಳಿ ಇಲಾಖೆ ಅಧಿಕಾರಿಗಳು ನಗರಕ್ಕೆ ದಾಳಿಯಿಟ್ಟು ಸೀರೆಯಲ್ಲಿ ಹೂವುಗಳನ್ನು ಮೂಡಿಸಲಾಗಿದೆ. ಬುಟ್ಟಾ ಹಾಕಲಾಗಿದೆ. ಅಂಚು, ಸೆರಗು ನೇಯಲಾಗಿದೆ...ಹೀಗೆ ನೂರೆಂಟು ಇಲ್ಲಸಲ್ಲದ ಕಾನೂನು ಪಾಠ ಹೇಳುತ್ತ ‘ಕೈಮಗ್ಗದಲ್ಲಿ ನೇಯುವ ಸೀರೆಗಳನ್ನು ವಿದ್ಯುತ್ ಮಗ್ಗಗಳಲ್ಲಿ ನೇಯ್ದು ದೊಡ್ಡ ಅಪರಾಧ ಮಾಡಿದ್ದೀರಿ’ ಎನ್ನುತ್ತಾಎಫ್ಐಆರ್ ದಾಖಲಿಸಿ ನೇಕಾರರು ಕೋರ್ಟ್‌ಗಳಿಗೆ ಅಲೆದಾಡುವಂತೆ ಮಾಡಲು ಪ್ರಾರಂಭಿಸಿದರು.

ಮಧ್ಯವರ್ತಿಗಳಿಂದ ನಲುಗಿದ ಉದ್ಯಮ: ಇದೇ ಸಮಯಕ್ಕೆ ಜವಳಿ ಉದ್ಯಮದಲ್ಲಿ ಆದ ತಾಂತ್ರಿಕ ಉನ್ನತೀಕರಣದ ಸವಾಲನ್ನು ವಿದ್ಯುತ್ ಮಗ್ಗಗಳ ನೇಕಾರರು ಎದುರಿಸಲು ಸಾಧ್ಯವಾಗದೆ ಇಡೀ ಉದ್ಯಮ ಮಧ್ಯವರ್ತಿಗಳ ಕೈಗೆ ಸಿಕ್ಕಿ ನಲುಗಿತು. ಇದರಿಂದ ಬೇಸತ್ತ ನೇಕಾರರು ನಮ್ಮ ತಲೆಮಾರಿಗೆ ನೇಕಾರಿಕೆ ಉದ್ಯೋಗ ಸಾಕು. ಮಕ್ಕಳು ಸರ್ಕಾರಿ ಉದ್ಯೋಗ ಅಥವಾ ಕೈಗಾರಿಕೆಗಳಲ್ಲಿ ಉದ್ಯೋಗ ಹುಡುಕಿಕೊಂಡು ಬದುಕು ಕಟ್ಟಿಕೊಳ್ಳಲಿ ಎಂಬ ಧೋರಣೆಯಿಂದ ಇವತ್ತು ನೇಕಾರಿಕೆಯಲ್ಲಿ ಯುವ ಸಮೂಹವನ್ನು ಹುಡುಕಿದುರೂ ಕಾಣದಂತಾಗಿದ್ದಾರೆ. 40 ರಿಂದ 45ವರ್ಷ ಮೇಲ್ಪಟ್ಟವರನ್ನಷ್ಟೇ ನೇಕಾರಿಕೆಯಲ್ಲಿ ಕಾಣಬಹುದಾಗಿದೆ.

ದೊಡ್ಡಬಳ್ಳಾಪುರ ಹಾಗೂ ರಾಜ್ಯದ ಇತರೆಡೆಗಳ ನೇಕಾರರ ಮನೆಗಳಲ್ಲಿರುವ ಬಹುತೇಕ ವಿದ್ಯುತ್ ಮಗ್ಗಗಳಿಗೂ, ಕೈಮಗ್ಗಗಳಿಗೂ ಅಷ್ಟೇನು ದೊಡ್ಡ ವ್ಯತ್ಯಾಸ ಇಲ್ಲ. ನಗರದಲ್ಲಿನ ಬಹುತೇಕ ಮಗ್ಗಗಳ ಪಕ್ಕದಲ್ಲಿ 1 ಅಶ್ವಶಕ್ತಿ(ಎಚ್‌.ಪಿ.) ವಿದ್ಯುತ್ ಚಾಲಿತ ಮೋಟಾರು ಅಳವಡಿಸಲಾಗಿದೆ. ಉಳಿದಂತೆ ಮಗ್ಗದ ಚಾಲನೆಯಲ್ಲಿ ಕೈಮಗ್ಗಕ್ಕಿಂತಲೂ ಅಷ್ಟೇನು ದೊಡ್ಡ ವ್ಯತ್ಯಾಸ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.