
ದೊಡ್ಡಬಳ್ಳಾಪುರ: ಸೂರತ್ ಹಾಗೂ ಇತರೆಡೆ ರೇಪಿಯರ್ ಮಗ್ಗಗಳಲ್ಲಿ ನೇಯ್ದ ಸೀರೆಗಳನ್ನು ಇಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ನೇಕಾರರ ಹಿತರಕ್ಷಣಾ ಸಮಿತಿ, ದೊಡ್ಡಬಳ್ಳಾಪುರ ಟೆಕ್ಸ್ ಟೈಲ್ಸ್ ವೀವರ್ಸ್ ಅಸೋಸಿಯೇಶನ್, ನೇಕಾರರ ಹೋರಾಟ ಸಮಿತಿ, ವಿವಿಧ ನೇಕಾರ ಸಂಘಟನೆಗಳ ನೇತೃತ್ವದಲ್ಲಿ ನೇಕಾರರು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಸೂರತ್ ಹಾಗೂ ಇತರೆಡೆ ರೇಪಿಯರ್ ಮಗ್ಗಗಳಲ್ಲಿ ನೇಯ್ದ ಸೀರೆಗಳನ್ನು ಇಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ದೊಡ್ಡಬಳ್ಳಾಪುರದ ನೇಕಾರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೇಕಾರರ ಹಿತರಕ್ಷಣೆಗಾಗಿ ವಿದ್ಯುತ್ ಮಗ್ಗಗಳ ಮೀಸಲು ಕಾಯ್ದೆ ರೂಪಿಸಬೇಕು. ಹೊರ ರಾಜ್ಯಗಳಿಂದ ಬರುವ ಸೀರೆ ಮಾರಾಟ ತಡೆಯಬೇಕು. ನೇಯ್ಗೆ ಉದ್ಯಮ ಬಿಕ್ಕಟ್ಟಿಗೆ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಬೇಕೆಂದು ಪ್ರತಿಭಟನನಿರತರು ಆಗ್ರಹಿಸಿದರು.
ರೇಪಿಯರ್ ಮತ್ತು ಸೂರತ್‌ನಿಂದ ತಂದ ಸೀರೆಗಳನ್ನು ಇಲ್ಲಿಗೆ ತಂದು ಮಾರುವುದನ್ನು ಈ ಕೂಡಲೇ ನಿಲ್ಲಿಸಬೇಕು. ರೇಪಿಯರ್ ಮಗ್ಗಗಳಲ್ಲಿ ಇಲ್ಲಿನ ಮಾದರಿಯ ಸೀರೆಗಳನ್ನು ನೇಯದಂತೆ ಸರ್ಕಾರ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ದೊಡ್ಡಬಳ್ಳಾಪುರದಲ್ಲಿ 25 ಸಾವಿರ ಮಗ್ಗಗಳಿದ್ದು, ಗುಡಿ ಕೈಗಾರಿಕೆಯಾಗಿರುವ ನೇಕಾರಿಕೆಯನ್ನು ವಿವಿಧ ಹಂತಗಳ ನೇಕಾರರು ಹಾಗೂ ಕುಟುಂಬ ಸೇರಿ ಒಂದು ಲಕ್ಷ ಮಂದಿ ಅವಲಂಬಿಸಿದ್ದಾರೆ. ನಮ್ಮ ನೇಕಾರಿಕೆಯಲ್ಲಿ ನಾವು ಉತ್ಪಾದನೆ ಮಾಡುವ ಸೀರೆಗಳನ್ನು ಸೂರತ್‌ನಲ್ಲಿರುವ ಆಧುನಿಕ ತಂತ್ರಜ್ಞಾನದ ರೇಪಿಯರ್ ವಿರ್ಜೆಟ್ ಮಗ್ಗಗಳಲ್ಲಿ ಉತ್ಪಾದನೆ ಮಾಡುತ್ತಿದ್ದು, ಇಲ್ಲಿಗೆ ತಂದು ನಾವು ಮಾರುತ್ತಿರುವ ಬೆಲೆಗಿಂತ ಅರ್ಧ ಬೆಲೆಗೆ ಮಾರಾಟ ಮಾಡಿ ನೇಕಾರಿಕೆ ಉದ್ಯಮವನ್ನು ಹಾಳು ಮಾಡಲಾಗುತ್ತಿದೆ. ಸರ್ಕಾರ ಈ ಬಗ್ಗೆ ಕಾಯ್ದೆ ರೂಪಿಸಿ ನೇಕಾರರ ಹಿತ ಕಾಪಾಡಬೇಕೆಂದು ನೇಕಾರರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಪಿ.ಎ.ವೆಂಕಟೇಶ್ ಒತ್ತಾಯಿಸಿದರು.
ನೇಕಾರರು ಭಾವನಾತ್ಮಕವಾಗಿರದೇ ವಾಸ್ತವ ಸಂಗತಿ ಅರ್ಥ ಮಾಡಿಕೊಳ್ಳಬೇಕಿದೆ. ಇದು ಸರ್ಕಾರದ ಕಾಯ್ದೆಗೆ ಸಂಬಂಧಿಸಿದ ವಿಚಾರವಾಗಿರುವುದರಿಂದ ನಿರಂತರ ಹೋರಾಟ ಹಾಗೂ ಒತ್ತಾಯದ ಮೂಲಕ ಬಗೆಹರಿಸಿಕೊಳ್ಳಬೇಕಿದೆ ಎಂದು ನೇಕಾರ ವೇದಿಕೆ ಅಧ್ಯಕ್ಷ ವೇಣುಗೋಪಾಲ್ ಹೇಳಿದರು.
ನೇಕಾರರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವಂತೆ ತಹಶೀಲ್ದಾರ್ ಮಲ್ಲಪ್ಪ ಕೆ.ಯರಗೋಳ, ಕರ್ನಾಟಕ ರಾಜ್ಯ ಕೈ ಮಗ್ಗ ಮತ್ತು ಜವಳಿ ಇಲಾಖೆ ಜಂಟಿ ನಿರ್ದೇಶಕ ಪ್ರಕಾಶ್, ಜಿಲ್ಲಾ ಉಪನಿರ್ದೇಶಕ ಸುರೇಶ್ ಅವರಿಗೆ ನೇಕಾರರು ಮನವಿ ಸಲ್ಲಿಸಲಾಯಿತು.
ಕೇಂದ್ರ ರೇಷ್ಮೆ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಟೆಕ್ಸ್ ಟೈಲ್ಸ್ ವೀವರ್ಸ್ ಅಸೋಸಿಯೇಶನ್ ಮುಖಂಡ ಆರ್.ಎಸ್.ಶ್ರೀನಿವಾಸ್, ವಿ.ನರಸಿಂಹಮೂರ್ತಿ, ಡಿ.ಆರ್.ದ್ರುವಕುಮಾರ್ ಇದ್ದರು.
ನೇಯ್ಗೆ ಉದ್ಯಮದ ಬಿಕ್ಕಟ್ಟಿಗೆ ಕೇಂದ್ರ ಸರ್ಕಾರ ಪರಿಹಾರ ಸೂಚಿಸಬೇಕಿದ್ದು ಅಧಿಕಾರಿಗಳು ಹಾಗೂ ಸರ್ಕಾರ ಜವಾಬ್ದಾರಿ ವಹಿಸಿಕೊಳ್ಳಬೇಕಿದೆಟಿ.ವೆಂಕಟರಮಣಯ್ ಮಾಜಿ ಶಾಸಕ