ವಿಜಯಪುರ: ಕೊರೊನಾ ಸಂಕಷ್ಟ ಎದುರಾಗಿದ್ದ ಕಾರಣದಿಂದಾಗಿ ಇಲ್ಲಿನ ವಾರದ ಸಂತೆ ರದ್ದುಪಡಿಸಲಾಗಿದ್ದು, 5 ತಿಂಗಳ ನಂತರ ಈ ವಾರದಿಂದ ಪುನರಾರಂಭವಾಗಿದೆ.
ಪುರಸಭಾ ಮುಖ್ಯಾಧಿಕಾರಿ ಪ್ರದೀಪ್ ಕುಮಾರ್ ಮಾತನಾಡಿ, ‘ತಹಶೀಲ್ದಾರ್ ಆದೇಶದ ಮೇರೆಗೆ ಸಂತೆ ರದ್ದುಗೊಳಿಸಲಾಗಿತ್ತು. ಆ ನಂತರದ ದಿನಗಳಲ್ಲಿ ರೈತರು ಹಳೆಯ ಪುರಸಭೆ ಮುಂಭಾಗದ ರಸ್ತೆಯ ಎರಡೂ ಬದಿಗಳಲ್ಲಿ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಇದರಿಂದ ಸಾರ್ವಜನಿಕರು ಹಾಗೂ ವಾಹನಗಳ ಓಡಾಟಗಳಿಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ಇಂದು ಸಂತೆಯಲ್ಲಿ ಅಂಗಡಿಗಳನ್ನು ಇಟ್ಟುಕೊಳ್ಳಲು ಅವಕಾಶ ನೀಡಿದ್ದರೂ ಬಹುತೇಕ ವ್ಯಾಪಾರಸ್ಥರು ರಸ್ತೆ ಬದಿಯಲ್ಲೆ ವ್ಯಾಪಾರ ವಹಿವಾಟುಗಳು ನಡೆಸಿಕೊಳ್ಳುತ್ತಿದ್ದರಿಂದಾಗಿ ಇಂದೂ ಕೂಡಾ ಜನರು ಪರದಾಡುವಂತಾಗಿತ್ತು’ ಎಂದರು.
ತರಕಾರಿ ಅಂಗಡಿ ವ್ಯಾಪಾರಿ ಮುರಳಿ ಮಾತನಾಡಿ, ‘ಒಂದೆಡೆ ತರಕಾರಿಗಳ ಬೆಲೆ ಏರಿಕೆಯ ನಡುವೆ ನಾವು ಹಾಕಿರುವ ಬಂಡವಾಳ ತೆಗೆಯುವುದು ಕಷ್ಟವಾಗಿದೆ. ವ್ಯಾಪಾರ ವಹಿವಾಟುಗಳು ಸಂತೆ ಮೈದಾನಕ್ಕೆ ಬಂದಿವೆ. ವ್ಯಾಪಾರ ಕುದುರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಮುಂದಿನ ವಾರದಿಂದ ಎಲ್ಲಾ ಅಂಗಡಿಗಳನ್ನು ಸಂತೆ ಮೈದಾನಕ್ಕೆ ಸ್ಥಳಾಂತರಿಸಿದರೆ ಅನುಕೂಲವಾಗಲಿದೆ’ ಎಂದರು.
ಸುಂಕ ರದ್ದುಪಡಿಸಿ: ಕಡಲೆ ಪುರಿ ಅಂಗಡಿ ಮಾಲೀಕ ವಿಜಯ್ ಕುಮಾರ್ ಮಾತನಾಡಿ, ‘ಈಗಾಗಲೆ ವ್ಯಾಪಾರ ತುಂಬಾ ಕಡಿಮೆಯಾಗಿದೆ. ಕನಿಷ್ಠ ಸಂತೆಯಲ್ಲಿ ವ್ಯಾಪಾರ ಸಾಧಾರಣ ಸ್ಥಿತಿಗೆ ಬರುವವರೆಗೂ ಪುರಸಭೆಯ ಸುಂಕ ವಸೂಲು ರದ್ದು
ಪಡಿಸಬೇಕು. ಇದರಿಂದ ಎಲ್ಲಾ ವ್ಯಾಪಾರಸ್ಥರಿಗೂ ಅನುಕೂಲವಾಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.