ADVERTISEMENT

‘ಮಹಿಳೆಯರಿಗೆ ಆರ್ಥಿಕ ಸಬಲತೆ ಅಗತ್ಯ’

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 5 ನೇ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2019, 15:55 IST
Last Updated 19 ಆಗಸ್ಟ್ 2019, 15:55 IST
ವಿಜಯಪುರ ಹೋಬಳಿ ಯಲುವಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಐದನೇ ವಾರ್ಷಿಕೋತ್ಸವನ್ನು ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಆರತಿ ಗಜೇಂದ್ರ ಉದ್ಘಾಟಿಸಿದರು
ವಿಜಯಪುರ ಹೋಬಳಿ ಯಲುವಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಐದನೇ ವಾರ್ಷಿಕೋತ್ಸವನ್ನು ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಆರತಿ ಗಜೇಂದ್ರ ಉದ್ಘಾಟಿಸಿದರು   

ವಿಜಯಪುರ: ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಂದಾಗಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದು ಗೊಡ್ಲು ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಆರತಿ ಗಜೇಂದ್ರ ಹೇಳಿದರು.

ಹೋಬಳಿಯ ಯಲುವಹಳ್ಳಿ ಗ್ರಾಮದಲ್ಲಿ ಸೋಮವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ 5 ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಹಿಳೆಯರು ನಾಲ್ಕು ಗೋಡೆಗಳ ನಡುವೆ ಕುಳಿತು ಜೀವಿಸುವ ಪರಿಸ್ಥಿತಿ ಈಗಿಲ್ಲ. ಸಮಾಜದ ಏಳಿಗೆಯಲ್ಲಿ ಪುರುಷರಷ್ಟೇ ಪ್ರಧಾನ ಪಾತ್ರವನ್ನು ಮಹಿಳೆಯರೂ ವಹಿಸುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

‘ಕುಟುಂಬದ ನಿರ್ವಹಣೆಯಷ್ಟೇ ಜವಾಬ್ದಾರಿಯನ್ನು ಸಮಾಜದ ಏಳಿಗೆಯಲ್ಲೂ ತೋರಿಸಬೇಕಾಗಿದೆ. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಮೂಲಕ ಸಮಾಜದಲ್ಲಿ ಒಳ್ಳೆಯ ಪ್ರಜೆಗಳನ್ನಾಗಿ ರೂಪಿಸಿ; ಹೆಣ್ಣು ಮಕ್ಕಳಿಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟು ಅವರನ್ನು ಸ್ನೇಹಿತೆಯಂತೆ ನೋಡಿಕೊಳ್ಳಬೇಕು’ ಎಂದರು.

‘ಮನೆಗಳಲ್ಲಿ ತಾಯಂದಿರು ಗಂಡು ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವ ಮೂಲಕ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಬಹುದಾಗಿದೆ’ ಎಂದು ಹೇಳಿದರು.

‘ಆರ್ಥಿಕವಾಗಿ ಸಬಲರಾಗುವ ಕಡೆಗೂ ಗಮನ ಹರಿಸಬೇಕು. ಸ್ವಯಂ ಉದ್ಯೋಗಾಧಾರಿತ ತರಬೇತಿ ಪಡೆದುಕೊಂಡು, ದುಡಿಮೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ಎಂಬ್ರಾಯಿಡರಿಯಂತಹ ಕೌಶಲಾಧಾರಿತ ತರಬೇತಿ ನೀಡಬೇಕು’ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮನ್ವಯಾಧಿಕಾರಿ ಶರ್ಮಿಳಾ ಮಾತನಾಡಿ, ‘ಧರ್ಮಸ್ಥಳ ಯೋಜನೆಯ ಮೂಲಕ ನೀಡುವ ಎಲ್ಲ ತರಬೇತಿಗಳನ್ನು ಪಡೆದುಕೊಂಡು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಬೇಕು. ಎಲ್ಲ ರಂಗಗಳಲ್ಲೂ ಭಾಗವಹಿಸಬೇಕು’ ಎಂದು ಸಲಹೆ ನೀಡಿದರು.

‘ಮಹಿಳೆಯರು ಎಲ್ಲ ರಂಗದಲ್ಲೂ ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಉತ್ತಮ ಮಾರ್ಗದರ್ಶನ ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಮಹಿಳೆಯರಿಗೆ ಆರ್ಥಿಕವಾಗಿ ಸಬಲರಾಗಲು ಇಂತಹ ತರಬೇತಿ ನೀಡಿ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ’ ಎಂದರು.

ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ಮೃತಪಟ್ಟಿರುವವರಿಗೆ ಮೌನಾಚರಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಮೇಲ್ವಿಚಾರಕಿ ಹೇಮಾವತಿ, ಮಹಿಳಾ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.