ಆನೇಕಲ್: ತಮಿಳುನಾಡು ಹೊಸೂರಿನ ಶಾನಮಾನು ಅರಣ್ಯ ಪ್ರದೇಶದಲ್ಲಿ ಕಾಡಾನೆಗಳ ಹಿಂಡೊಂದು ಎರಡು ದಿನಗಳಿಂದ ಬೀಡುಬಿಟ್ಟಿದೆ. ಈ ಹಿಂಡಿನಲ್ಲಿ 80ಕ್ಕೂ ಹೆಚ್ಚು ಕಾಡಾನೆಗಳಿದ್ದು, ಸ್ಥಳೀಯರಲ್ಲಿ ಆತಂಕ ಶುರುವಾಗಿದೆ.
ಶಾನಮಾವು, ಬೂದುರು, ಹಳಿಯಾಳ, ರಾಮಾಪುರ, ಬಿರ್ಜೆಪೆಲ್ಲಿ ಸೇರಿದಂತೆ ವಿವಿಧ ಗ್ರಾಮಗಳ ಕೃಷಿ ಜಮೀನುಗಳಿಗೆ ನುಗ್ಗಿದ ಆನೆಗಳು ರಾಗಿ, ಭತ್ತ ಮತ್ತು ತೋಟದ ಬೆಳೆ ತುಳಿದು ಹಾಕಿವೆ.
ತಮಿಳುನಾಡಿನಿಂದ 25 ಆನೆಗಳ ಹಿಂಡೊಂದು ಆನೇಕಲ್ ಭಾಗದತ್ತ ಬರುತ್ತಿದ್ದು, ಇವನ್ನು ಗಡಿಯಲ್ಲಿ ತಡೆಯಲು ಮುತ್ಯಾಮಡುವು ಸಮೀಪದ ಆನೆ ಮಾರ್ಗದ ಬಳಿ ಅರಣ್ಯ ಇಲಾಖೆ ಸಿಬ್ಬಂದಿಯು ಪಟಾಕಿ ಮತ್ತು ಬೆಂಕಿ ಹಾಕಿಕೊಂಡು ಕಾಡಿನತ್ತ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ.
ಮುತ್ಯಾಲಮಡುವು ಸಮೀಪದ ಗೌರಮ್ಮನ ಕೆರೆ, ಶೇಷಾದ್ರಿ ಕೆರೆ ಭಾಗಗಳಲ್ಲಿ ಆನೆಗಳ ಸಂಚಾರದ ಬಗ್ಗೆ ಮಾಹಿತಿ ಇದೆ. 25 ಆನೆಗಳ ಒಂದು ಹಿಂಡು, ಮೂರು ಆನೆಗಳ ಮತ್ತೊಂದು ಹಿಂಡು ಮತ್ತು ಒಂಟಿ ಆನೆಯೊಂದು ಆನೇಕಲ್ ಭಾಗದ ಅರಣ್ಯದಲ್ಲಿ ಕಂಡು ಬಂದಿದೆ. ಗ್ರಾಮಗಳತ್ತ ನುಗ್ಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಕೈಗೊಂಡಿದ್ದಾರೆ.
ಜನರು ಮೇಕೆ, ಕುರಿ, ದನ ಕರು ಮೇಯಿಸಲು ಕಾಡಿಗೆ ಹೋಗಬಾರದು. ಆನೆಗಳನ್ನು ಕೆರಳಿಸುವುದು, ಸೆಲ್ಫಿ ತೆಗೆದುಕೊಳ್ಳುವುದು ಮಾಡಬಾರದು ಎಂದು ಅರಣ್ಯ ಇಲಾಖೆ ಮತ್ತು ತಮಿಳುನಾಡು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಸುಗ್ಗಿ ಕಾಲದಲ್ಲಿ ಕಾಡಾನೆಗಳು ನಾಡಿನತ್ತ ನುಗ್ಗುವುದು ಸಾಮಾನ್ಯವಾಗಿದೆ. ತಮಿಳುನಾಡಿನ ಆನೆಗಳು ಜವಳಗೆರೆ, ದೇವರಬೆಟ್ಟ ಅರಣ್ಯ ಕಡೆಯಿಂದ ಮುತ್ಯಾಲಮಡುವು, ಮೆಣಸಿಗನಹಳ್ಳಿ, ವಣಕನಹಳ್ಳಿ, ಸುಣವಾರ ಗ್ರಾಮಗಳತ್ತ ಪ್ರತಿವರ್ಷ ಬರುವುದು ವಾಡಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.