ADVERTISEMENT

ಆನೇಕಲ್: ಮಹಿಳಾ ಆರ್ಥಿಕ ಸಬಲೀಕರಣಕ್ಕೆ ಕಿರು ಉದ್ಯಮ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 4:57 IST
Last Updated 10 ಜನವರಿ 2026, 4:57 IST
ಆನೇಕಲ್ ತಾಲ್ಲೂಕಿನ ಮರಸೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯಿಂದ ಆಯೋಜಿಸಿದ್ದ ಹೊಲಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕಲಿಕಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು
ಆನೇಕಲ್ ತಾಲ್ಲೂಕಿನ ಮರಸೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯಿಂದ ಆಯೋಜಿಸಿದ್ದ ಹೊಲಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕಲಿಕಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು   

ಆನೇಕಲ್: ತಾಲ್ಲೂಕಿನ ಮರಸೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಹೊಲಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕಲಿಕಾರ್ಥಿಗಳಿಗೆ ಪ್ರಮಾಣಪತ್ರವನ್ನು ಶುಕ್ರವಾರ ವಿತರಿಸಲಾಯಿತು.

ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಹೊಲಿಗೆ ತರಬೇತಿ, ಬ್ಯೂಟಿಷಿಯನ್‌ ಸೇರಿದಂತೆ ವಿವಿಧ ಕೌಶಲ ತರಬೇತಿ ಪಡೆದು ಕಿರು ಉದ್ಯಮ ಸ್ಥಾಪಿಸಬೇಕು. ಇದರಿಂದ ಆರ್ಥಿಕವಾಗಿ ಸಬಲರಾಗುವುದರ ಜೊತೆಗೆ ಸ್ವಾವಲಂಭಿ ಆಗಬಹುದು. ಮರಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿಯೂ ಗ್ರಾಮ ಪಂಚಾಯಿತಿಯಿಂದ ಹೊಲಿಗೆ ತರಬೇತಿ ಶಿಬಿರ ರೂಪಿಸಿ ಮಹಿಳೆಯರಿಗೆ ತರಬೇತಿ ನೀಡಲಾಗಿದೆ ಎಂದು ಮರಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳ ನಾರಾಯಣರೆಡ್ಡಿ ತಿಳಿಸಿದರು.

ಮರಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2-3 ಗಾರ್ಮೆಂಟ್ಸ್‌ಗಳಿದ್ದು, ಗ್ರಾಮ ಪಂಚಾಯಿತಿಯಿಂದ ಹೊಲಿಗೆ ತರಬೇತಿ ಕಲಿತ ಕಲಿಕಾರ್ಥಿಗಳಿಗೆ ಉದ್ಯೋಗ ನೀಡುವಂತೆ ಕಂಪನಿಯವರನ್ನು ಕೇಳಲಾಗಿದೆ. ಇದರಿಂದ ಮಹಿಳೆಯರಿಗೆ ಹೆಚ್ಚು ಅನುಕೂಲವಾಗಲಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಉನ್ನತ ಸಾಧನೆ ಮಾಡಿದ್ದಾರೆ. ಮಹಿಳೆಯರಿಗೆ ಪ್ರೋತ್ಸಾಹ ನೀಡುವುದರಿಂದ ಅವರು ಮತ್ತಷ್ಟು ಸಬಲರಾಗುತ್ತಾರೆ ಎಂದರು.

ADVERTISEMENT

ಮರಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಆರೇಳು ವರ್ಷಗಳಿಂದ ಹೊಲಿಗೆ ತರಬೇತಿ ಶಿಬಿರಗಳನ್ನು ವಿವಿಧ ಗ್ರಾಮಗಳಲ್ಲಿ ಆಯೋಜಿಸಲಾಗಿದೆ. ಮಹಿಳಾ ಸಂಘಗಳು ಕಿರು ಗಾರ್ಮೆಂಟ್ಸ್‌ಗಳನ್ನು ಸ್ಥಾಪಿಸಿಕೊಂಡು ಸ್ಥಳೀಯ ಹೊಲಿಗೆ ತರಬೇತಿ ಪಡೆದಿರುವವರಿಗೆ ಉದ್ಯೋಗ ನೀಡುವುದರಿಂದ ಉದ್ಯಮವನ್ನು ನಡೆಸಿದಂತಾಗುತ್ತದೆ ಮತ್ತು ಹೆಚ್ಚಿನ ಲಾಭ ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಬ್ಯೂಟಿಕ್‌ಗಳ ಸ್ಥಾಪನೆಯಿಂದ ಮಹಿಳೆಯರು ಸಾವಿರಾರು ರೂಪಾಯಿಗಳನ್ನು ಹೊಲಿಗೆಗಾಗಿ ವೆಚ್ಚ ಮಾಡುತ್ತಿದ್ದಾರೆ. ಗ್ರಾಮಗಳಲ್ಲಿಯೇ ಈ ಸೌಲಭ್ಯ ದೊರೆಯುವುದರಿಂದ ಅನುಕೂಲವಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಚಂದ್ರಕಲಾ ಯಲ್ಲಪ್ಪ ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಬಂಡಾಪುರ ರಮೇಶ್‌ ರೆಡ್ಡಿ, ಮಂಜುಳ ಸೋಮಶೇಖರ್‌, ರಶ್ಮಿ ಅನಿಲ್‌, ನಾಗಲಕ್ಷ್ಮೀ, ನಿರ್ಮಲಾ, ಸುಧಾ, ವೆಂಕಟಸ್ವಾಮಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಯೋಗೇಶ್, ಪ್ರಕಾಶ್‌, ಹೊಲಿಗೆ ತರಬೇತಿ ಕೇಂದ್ರದ ಸಂಪನ್ಮೂಲ ವ್ಯಕ್ತಿ ಪಾರ್ವತಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.