ADVERTISEMENT

ಸೂಲಿಬೆಲೆ: ಸ್ವಾವಲಂಬನೆ ಹಾದಿಯಲ್ಲಿ ಮಹಿಳಾ ಒಕ್ಕೂಟ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2022, 2:46 IST
Last Updated 10 ಮಾರ್ಚ್ 2022, 2:46 IST
ಸೂಲಿಬೆಲೆ ಹೋಬಳಿಯ ಸೊಣ್ಣಹಳ್ಳಿಪುರದ ಸೃಷ್ಟಿ ಮಹಿಳಾ ಒಕ್ಕೂಟದ ಪ್ರತಿನಿಧಿಗಳು
ಸೂಲಿಬೆಲೆ ಹೋಬಳಿಯ ಸೊಣ್ಣಹಳ್ಳಿಪುರದ ಸೃಷ್ಟಿ ಮಹಿಳಾ ಒಕ್ಕೂಟದ ಪ್ರತಿನಿಧಿಗಳು   

ಸೂಲಿಬೆಲೆ: ಹೋಬಳಿಯ ಸೊಣ್ಣಹಳ್ಳಿಪುರದ ಸೃಷ್ಟಿ ಮಹಿಳಾ ಒಕ್ಕೂಟವು ಸ್ಯಾನಿಟರಿ ಪ್ಯಾಡ್, ಫಿನಾಯಿಲ್, ಪೇಪರ್ ಬ್ಯಾಗ್ ತಯಾರಿಕೆಯೊಂದಿಗೆ ಉದ್ಯಮಶೀಲ ಒಕ್ಕೂಟವಾಗಿ ಮುನ್ನಡೆಯುತ್ತಿದೆ.

ಒಕ್ಕೂಟವು ಸ್ಥಳೀಯವಾಗಿ ಮಹಿಳೆಯರ ಸ್ವಾವಲಂಬಿ ಬದುಕಿಗೆ ದಾರಿದೀಪವಾಗಿದೆ ಎನ್ನುತ್ತಾರೆ ಒಕ್ಕೂಟದ ಅಧ್ಯಕ್ಷೆ ಭಾರತಿ.

ಸ್ಥಳೀಯವಾಗಿ ಹಾಗೂ ಕೆನರಾ ತರಬೇತಿ ಕೇಂದ್ರದಿಂದ ಸ್ಯಾನಿಟೈಸರ್, ಪೇಪರ್ ಬ್ಯಾಗ್, ಸೋಪು, ಕ್ಯಾಂಡಲ್ ಸೇರಿದಂತೆ ಇನ್ನಿತರ ವಸ್ತುಗಳ ತಯಾರಿಕೆ ತರಬೇತಿ ಪಡೆದಿರುವ ಒಕ್ಕೂಟದ ಸದಸ್ಯರು ಸ್ಥಳೀಯವಾಗಿ ಮಹಿಳೆಯರಿಗೆ ಉದ್ಯೋಗ ಸೃಷ್ಟಿಸಿದ್ದಾರೆ. ಆ ಮೂಲಕ ಸ್ವಾವಲಂಬಿ ಬದುಕನ್ನು ಕಟ್ಟಿಕೊಡುವ ಒಕ್ಕೂಟವಾಗಿ ಸೃಷ್ಟಿ ಮಹಿಳಾ ಒಕ್ಕೂಟ ಮುನ್ನಡೆಯುತ್ತಿದೆ ಎನ್ನುತ್ತಾರೆ ಕಾರ್ಯದರ್ಶಿ ಶೈಲಾ.

ADVERTISEMENT

2011ರಲ್ಲಿ ಈಘಟಕ ಆರಂಭಿಸಲಾಯಿತು. ಪ್ರಾರಂಭದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಶಾಲೆಗಳಿಗೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್ ವಿತರಿಸಲಾಗುತ್ತಿತ್ತು. ಬೇಡಿಕೆಗೆ ಅನುಗುಣವಾಗಿ ತಯಾರಿಕೆ ನಡೆಯುತ್ತಿತ್ತು. ಕೈಯಲ್ಲಿ ತಯಾರಿಸುತ್ತಿದ್ದ ಕಾರಣ ಗುಣಮಟ್ಟದ ಕೊರತೆ ಹಾಗೂ ಐಎಸ್‌ಐ ಮಾರ್ಕ್ ಇಲ್ಲದಿರುವುದರಿಂದ ಕೆಲಕಾಲ ವಹಿವಾಟಿನಲ್ಲಿ ವ್ಯತ್ಯಾಸವಾಯಿತು.

ಇಂದಿರಾನಗರ ರೋಟರಿ ಕ್ಲಬ್ ಬೆಂಗಳೂರು ಹಾಗೂ ಮಣಿಪಾಲ್ ಫೌಂಡೇಷನ್ ಸಹಯೋಗದಲ್ಲಿ ಸ್ಯಾನಿಟರಿ ಪ್ಯಾಡ್ ತಯಾರಿಕಾ ಯಂತ್ರಗಳನ್ನು ಸ್ಥಾಪಿಸಲಾಯಿತು. ಕಚ್ಚಾ ವಸ್ತುಗಳಿಗೂ ಸಹಾಯಹಸ್ತ ನೀಡಿದ ನಂತರ ನೆರೆ ರಾಜ್ಯಗಳ ಧರ್ಮಾವರಂ, ಸೇಲಂ ಮತ್ತಿತರ ನಗರಗಳಿಗೆ ಸರಬರಾಜು ಮಾಡಲಾಗುತ್ತಿತ್ತು.

ಕಚ್ಚಾ ವಸ್ತುಗಳ ಅಭಾವ ಮತ್ತು ವಸ್ತುಗಳನ್ನು ಅಹಮದಾಬಾದ್‌ನಿಂದ ತರಿಸಿಕೊಳ್ಳಬೇಕಾಗಿದ್ದ ಕಾರಣದಿಂದ ತಯಾರಿಕೆಯಲ್ಲಿ ವ್ಯತ್ಯಯವಾಗಿ ಬೇಡಿಕೆಯನ್ನು ಕಡಿತಗೊಳಿಸಲಾಯಿತು.

ನಿರ್ವಹಣೆ ಕಷ್ಟವೆನಿಸಿದಾಗ ಇದರ ಜೊತೆಗೆ ಪೇಪರ್ ಚೀಲ ತಯಾರಿಸಲು ಒಕ್ಕೂಟದಿಂದ ಯೋಜನೆ ರೂಪಿಸಿಕೊಳ್ಳಲಾಯಿತು. ಮೊದಲು ಪ್ರಾರಂಭ ಮಾಡಿದಾಗ ಪೇಪರ್ ಬೆಲೆ ಕೆ.ಜಿ. ₹ 8 ಇತ್ತು. ಪ್ರಸ್ತುತ ₹ 42 ಆಗಿದೆ. ಇವುಗಳ ನಡುವೆಯೂ ಪೇಪರ್ ಬ್ಯಾಗ್ ತಯಾರಿಕಾ ಘಟಕ ನಡೆಯುತ್ತಿದ್ದು, 24 ಮಹಿಳೆಯರಿಗೆ ಉದ್ಯೋಗ ನೀಡಲಾಗಿದೆ ಎನ್ನುತ್ತಾರೆ ಒಕ್ಕೂಟದ ಪ್ರತಿನಿಧಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.