ADVERTISEMENT

ದೊಡ್ಡಬಳ್ಳಾಪುರ | ವಿಶ್ವ ಹೆಪಟೈಟಿಸ್‌ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 2:11 IST
Last Updated 1 ಆಗಸ್ಟ್ 2025, 2:11 IST
ದೊಡ್ಡಬಳ್ಳಾಪುರ ಸರ್ಕಾರಿ ಸಾರ್ವಜನಿಕ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿಶ್ವ ಹೆಪಟೈಟಿಸ್‌ ದಿನಾಚರಣೆ ಆಚರಿಸಲಾಯಿತು
ದೊಡ್ಡಬಳ್ಳಾಪುರ ಸರ್ಕಾರಿ ಸಾರ್ವಜನಿಕ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿಶ್ವ ಹೆಪಟೈಟಿಸ್‌ ದಿನಾಚರಣೆ ಆಚರಿಸಲಾಯಿತು   

ದೊಡ್ಡಬಳ್ಳಾಪುರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಗರದ ಸರ್ಕಾರಿ ಸಾರ್ವಜನಿಕ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವಿಶ್ವ ಹೆಪಟೈಟಿಸ್‌ ದಿನಾಚರಣೆ ಆಚರಿಸಲಾಯಿತು.

ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ರಮೇಶ್‌ ಮಾಹಿತಿ ನೀಡಿ, ಹೆಪಟೈಟಿಸ್‌ ಯಕೃತ್ತಿನ ಅಂದರೆ ದೇಹದ ಪ್ರಮುಖ ಅಂಗವಾದ ಲಿವರ್‌ನಲ್ಲಿ ಉರಿಯೂತ ಉಂಟು ಮಾಡುವ ಕಾಯಿಲೆ. ಯಕೃತ್ತು ಜೀರ್ಣಕ್ರಿಯೆ, ಪೋಷಕಾಂಶಗಳ ಹೀರಿಕೊಳ್ಳುವಿಕೆ ಮತ್ತು ವಿಷಕಾರಿ ವಸ್ತುಗಳ ನಿರ್ಮೂಲನೆಗೆ ಸಹಾಯ ಮಾಡುವ ಪ್ರಮುಖ ಅಂಗ. ಯಕೃತ್ತು ಉರಿಯೂತಕ್ಕೆ ಒಳಗಾದಾಗ ಅದರ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.

ಅರಿವಿನ ಕೊರತೆ ಹಾಗೂ ತಪ್ಪು ಮಾಹಿತಿಯಿಂದ ಜನರು ಹೆಪಟೈಟಿಸ್‌ ಸೇವೆ ಪಡೆಯುತ್ತಿಲ್ಲ. ಈ ದಿಸೆಯಲ್ಲಿ ರೋಗಗಳ ಬಗ್ಗೆ ಜಾಗೃತಿ ಮತ್ತು ತಿಳುವಳಿಕೆಯನ್ನು ಹೆಚ್ಚಿಸಲು ಪ್ರತಿ ವರ್ಷ ವಿಶ್ವ ಹೆಪಟೈಟಿಸ್‌ ದಿನವನ್ನು ಆಚರಿಸಲಾಗುತ್ತಿದೆ. ಹೆಪಟೈಟಿಸ್‌ ಬಿ ವೈರಸ್‌ ಅನ್ನು ಕಂಡುಹಿಡಿದ ನೊಬೆಲ್‌ ಪ್ರಶಸ್ತಿ ವಿಜೇತ ಪ್ರೊ. ಬರೂಚ್‌ ಸ್ಯಾಮ್ಯುಯೆಲ್‌ ಬ್ಲಂಬರ್ಗ್ ಅವರ ಜನ್ಮದಿನವಾಗಿದೆ ಎಂದರು.

ADVERTISEMENT

ಐದು ವಿಧದ ಹೆಪಟೈಟಿಸ್‌ ವೈರಸ್‌ಗಳಲ್ಲಿ ಎ, ಬಿ, ಸಿ, ಡಿ ಮತ್ತು ಇ ಇವುಗಳ ಪೈಕಿ ಎ ಮತ್ತು ಇ ಹೆಚ್ಚಾಗಿ ಕಲುಷಿತ ನೀರು ಅಥವಾ ಆಹಾರದ ಮೂಲಕ ಹರಡುತ್ತವೆ. ಎಲ್ಲಾ ಹೆಪಟೈಟಿಸ್‌ ವೈರಸ್‌ಗಳು ತೀವ್ರವಾದ ಸೋಂಕು ಮತ್ತು ಯಕೃತ್ತಿನ ಉರಿಯೂತ ಉಂಟು ಮಾಡಬಹುದು. ಆದರೆ ಹೆಪಟೈಟಿಸ್‌ ಬಿ, ಸಿ ಮತ್ತು ಡಿ ವೈರಸ್‌ಗಳ ಸೋಂಕು ದೀರ್ಘಕಾಲದ ಹೆಪಟೈಟಿಸ್‌ಗೆ ಕಾರಣವಾಗಲಿದೆ. ಇದು ಸಿರೋಸಿಸ್‌ ಮತ್ತು ಯಕೃತ್ತಿನ ಕ್ಯಾನ್ಸರ್‌ ಉಂಟು ಮಾಡಲಿದೆ. ಈ ಸೋಂಕನ್ನು ಸಕಾಲದಲ್ಲಿ ಗುರುತಿಸದಿದ್ದರೆ ಗಂಭೀರ ಆರೋಗ್ಯ ಸಮಸ್ಯೆ ಉಂಟುಮಾಡಬಹುದು. ಇದರ ಲಕ್ಷಣಗಳು ಆರಂಭಿಕ ಹಂತಗಳಲ್ಲಿ ಸಾಮಾನ್ಯವಾಗಿ ಸೌಮ್ಯವಾಗಿರುತ್ತವೆ. ಆದರೆ ಚಿಕಿತ್ಸೆ ವಿಳಂಬವಾದರೆ ಅದು ದೇಹಕ್ಕೆ ಹೆಚ್ಚಿನ ಹಾನಿಯನ್ನು ಉಂಟು ಮಾಡುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಡಾ.ಸುಷ್ಮಾ, ಡಾ.ರಾಜು, ಕಾರ್ಯಕ್ರಮ ಸಂಯೋಜಕ ಕಿರಣ್, ನರ್ಸಿಂಗ್‌ ಅಧಿಕಾರಿಗಳಾದ ಜಮುನಾ, ಸಲ್ಮಾ, ಪ್ರೇಮ, ವಂದನಾ, ಶೈಲಜಾ, ನಂದಿನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.