ADVERTISEMENT

ಯಲಿಯೂರು | ಗ್ರಾಮಸಭೆಯಲ್ಲಿ ಸಮಸ್ಯೆಗಳ ಸುರಿಮಳೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 4:54 IST
Last Updated 18 ಜನವರಿ 2026, 4:54 IST
ದೇವನಹಳ್ಳಿ ತಾಲ್ಲೂಕಿನ ಯಲಿಯೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಗ್ರಾಮ ಸಭೆ ನಡೆಯಿತು
ದೇವನಹಳ್ಳಿ ತಾಲ್ಲೂಕಿನ ಯಲಿಯೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಗ್ರಾಮ ಸಭೆ ನಡೆಯಿತು   

ಯಲಿಯೂರು (ದೇವನಹಳ್ಳಿ): ತಾಲ್ಲೂಕಿನ ಚನ್ನರಾಯಪಟ್ಟಣದ ಹೋಬಳಿಯ ಯಲಿಯೂರು ಗ್ರಾಮ ಪಂಚಾಯಿತಿಯಿಂದ 2025–26ನೇ ಸಾಲಿನ ಮೊದಲ ಹಂತದ ಗ್ರಾಮಸಭೆಯನ್ನು ಶನಿವಾರ ಯಲಿಯೂರು ಗ್ರಾಮದಲ್ಲಿ ನಡೆಸಲಾಯಿತು.

ಗ್ರಾಮಸಭೆ ವೇದಿಕೆ ಗ್ರಾಮಸ್ಥರ ಸಮಸ್ಯೆಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಕೇಂದ್ರಬಿಂದುವಾಗಿತ್ತು. ಸಭೆಯಲ್ಲಿ ಭಾಗವಹಿಸಿದ್ದ ರೈತರು ಮತ್ತು ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ, ಒಳಚರಂಡಿ ವ್ಯವಸ್ಥೆ ಕೊರತೆ, ರಸ್ತೆಗಳ ದುಸ್ಥಿತಿ, ಸ್ಮಶಾನದ ಅಸಮರ್ಪಕ ನಿರ್ವಹಣೆ, ಶಾಲೆ ಕಾಂಪೌಂಡ್ ಕೊರತೆ, ಒವರ್‌ಹೆಡ್‌ ಟ್ಯಾಂಕ್ ನಿರ್ವಹಣೆ ಸೇರಿದಂತೆ ಹಲವು ಮೂಲ ಸೌಕರ್ಯ ಸಮಸ್ಯೆಗಳನ್ನು ಮುಂದಿಟ್ಟರು.

ವರ್ಷಕ್ಕೆ ಕನಿಷ್ಠ ಎರಡು ಗ್ರಾಮಸಭೆ ನಡೆಸಬೇಕಾದ ನಿಯಮ ಇದ್ದರೂ, ಒಂದೇ ಸಭೆ ನಡೆಸಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಕಳೆದ ಎರಡು ವರ್ಷಗಳಿಂದ ಗ್ರಾಮಸಭೆ ನಡೆಸದೇ ಇದ್ದುದಕ್ಕೆ ಕಾರಣವೇನು ಎಂದು ಗ್ರಾಮಸ್ಥರು ಅಧಿಕಾರಿಗಳನ್ನು ಪ್ರಶ್ನಿಸಿದರು. ವಾರ್ಡ್ ಸಭೆಗಳನ್ನು ನಡೆಸದೇ ಏಕಾಏಕಿ ಗ್ರಾಮಸಭೆ ಆಯೋಜಿಸಿರುವುದರಿಂದ ಎಲ್ಲ ಸಮಸ್ಯೆಗಳು ಸರಿಯಾಗಿ ಚರ್ಚೆಗೆ ಬರಲಿಲ್ಲ ಎಂಬ ಆರೋಪ ಕೇಳಿಬಂತು.

ADVERTISEMENT

ಗ್ರಾಮಸ್ಥರ ಧ್ವನಿಯನ್ನು ಆಲಿಸುವ ಜವಾಬ್ದಾರಿಯನ್ನು ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮರೆತಿದ್ದಾರೆ ಎಂದು ಭಾರತೀಯ ಕಿಸಾನ್ ಸಂಘದ ರೈತ ಮುಖಂಡ ಭಾಗ್ಯವಂತ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಸಭೆಯಲ್ಲಿ ವ್ಯಕ್ತವಾದ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡಬೇಕು, ನಿಯಮಿತವಾಗಿ ವಾರ್ಡ್ ಸಭೆ ಹಾಗೂ ಗ್ರಾಮಸಭೆಗಳನ್ನು ನಡೆಸಬೇಕು ಎಂಬ ಒತ್ತಾಯವನ್ನು ಗ್ರಾಮಸ್ಥರು ಸಭೆ ಮುಂದಿಟ್ಟರು.

ಪಂಚಾಯಿತಿಗೆ ಬರಬೇಕಾದ ಆದಾಯ ಕಡಿಮೆಯಾಗಿದೆ. ತೆರಿಗೆ ಹಾಗೂ ಸರ್ಕಾರದಿಂದ ಬರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಮೂಲ ಸೌಕರ್ಯಗಳನ್ನು ಒದಗಿಸುವ ಜವಾಬ್ದಾರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಮೇಲಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಚನ್ನಹಳ್ಳಿ ರಾಜಣ್ಣ ತಿಳಿಸಿದರು.

ಯಲಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಂಜಿನಮ್ಮ ನಾರಾಯಣಸ್ವಾಮಿ ಸಭೆ ಅಧ್ಯಕ್ಷತೆವಹಿಸಿದ್ದರು. ನೋಡಲ್ ಅಧಿಕಾರಿ ಸುಧಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಎ.ರವಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪೂಜಪ್ಪ, ಸದಸ್ಯರಾದ ಸುನೀಲ್ ಕುಬೇರ, ಸೊಣ್ಣೇಗೌಡ, ನೇತ್ರಾವತಿ, ಪವಿತ್ರ, ನಾರಾಯಣಸ್ವಾಮಿ, ರೂಪಾ, ಆನಂದ, ಲಕ್ಷ್ಮೀದೇವಮ್ಮ, ಪ್ರಿಯಾಂಕ, ಲಕ್ಷ್ಮೀನರಸಮ್ಮ, ವೆಂಕಟೇಶಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.