ADVERTISEMENT

ಎತ್ತಿನಹೊಳೆ ಹರಿಯುವುದು ಅನುಮಾನ: ಶಾಸಕ ನಿಸರ್ಗ ನಾರಾಯಣಸ್ವಾಮಿ ಅಸಮಾಧಾನ

ರಾಜ್ಯ ಸರ್ಕಾರದ ನಡೆಗೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 4:18 IST
Last Updated 17 ಸೆಪ್ಟೆಂಬರ್ 2021, 4:18 IST
ನಿಸರ್ಗ ನಾರಾಯಣಸ್ವಾಮಿ
ನಿಸರ್ಗ ನಾರಾಯಣಸ್ವಾಮಿ   

ದೇವನಹಳ್ಳಿ: ‘ಎತ್ತಿನಹೊಳೆ ಯೋಜನೆಯನ್ನು ಅನುಷ್ಠಾನಗೊಳಿಸುವಂತಹ ಯಾವುದೇ ಲಕ್ಷಣ ಕಾಣುತ್ತಿಲ್ಲ. ಸರ್ಕಾರ ಸುಳ್ಳು ಭರವಸೆ ನೀಡುವ ಕೆಲಸ ಮಾಡುತ್ತಿದೆ. ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನೀರಾವರಿ ಯೋಜನೆಗಳಿಗೆ ಅನುದಾನ ಏರಿಕೆ ಮಾಡುತ್ತಿದ್ದಾರೆಯೇ ಹೊರತು ಜನರಿಗೆ ಅನುಕೂಲ ಮಾಡುವ ಉದ್ದೇಶ ಎರಡೂ ರಾಷ್ಟ್ರೀಯ ಪಕ್ಷಗಳಿಗೂ ಇಲ್ಲ’ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ದೂರಿದರು.

ಯೋಜನೆ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೈರಗೊಂಡ್ಲು ಜಲಾಶಯ ನಿರ್ಮಾಣ ಸಂಬಂಧ ಭೂಮಿ ಸ್ವಾಧೀನಪಡಿಸಿಕೊಳ್ಳಲು ತುಮಕೂರು ಭಾಗದ ರೈತರಿಗೆ ಎಕರೆಗೆ ₹ 8 ಲಕ್ಷ, ದೊಡ್ಡಬಳ್ಳಾಪುರ ತಾಲ್ಲೂಕಿನ ರೈತರಿಗೆ ₹ 32 ಲಕ್ಷ ನಿಗದಿಪಡಿಸಲಾಗಿದೆ. ಈ ಬಗ್ಗೆ ಸದನದಲ್ಲಿ ಸುದೀರ್ಘವಾಗಿ ಚರ್ಚೆ ನಡೆಯುತ್ತಿದೆ ಎಂದರು.ಎತ್ತಿನಹೊಳೆ ಯೋಜನೆ ನಡೆಯುತ್ತಿರುವ ಭಾಗದಲ್ಲಿ ಭೂಸ್ವಾಧೀನ ಮಾಡಿಕೊಂಡಿಲ್ಲ. ಈಗ ನಡೆಯುತ್ತಿರುವ ವಿದ್ಯಮಾನ ಗಮನಿಸಿದರೆ ಬಯಲುಸೀಮೆ ಭಾಗಕ್ಕೆ ನೀರು ತರುವುದು ಅಸಾಧ್ಯ ಎನಿಸುತ್ತಿದೆ. ಕೇವಲ ಚುನಾವಣೆಯಲ್ಲಿ ಲಾಭ ಪಡೆದುಕೊಳ್ಳಲು ಎರಡೂ ಪಕ್ಷದ ಮುಖಂಡರು ಕಚ್ಚಾಡುತ್ತಿದ್ದಾರೆ ಎಂದು ಟೀಕಿಸಿದರು.

ಎತ್ತಿನಹೊಳೆ ಯೋಜನೆಯಡಿ 10 ಟಿಎಂಸಿ ಅಡಿ ನೀರು ಸಂಗ್ರಹಕ್ಕೆ ಮುಖ್ಯಮಂತ್ರಿ ಯೋಜನೆ ರೂಪಿಸಿದ್ದರು. ನಂತರ 5 ಟಿಎಂಸಿ ಅಡಿಗೆ ಇಳಿಕೆ ಮಾಡಿದ್ದಾರೆ. ಭೂಸ್ವಾಧೀನಕ್ಕೆ ಅನುದಾನ ಒದಗಿಸಲು ಹಣಕಾಸಿನ ಮುಗ್ಗಟ್ಟು ಎದುರಾದರೆ ಎರಡೂವರೆ ಟಿಎಂಸಿ ಅಡಿ ನೀರು ಸಂಗ್ರಹ ಮಾಡಲು ಯೋಜನೆ ರೂಪಿಸಲಾಗುತ್ತದೆ
ಎಂದರು.

ADVERTISEMENT

ಕೇವಲ ಎರಡೂವರೆ ಟಿಎಂಸಿ ಅಡಿ ನೀರು ಸಂಗ್ರಹಗೊಂಡರೆ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗೆ ಎತ್ತಿನಹೊಳೆ ನೀರು ಹರಿಯುವುದು ಕನಸಿನ ಮಾತಾಗಲಿದೆ. 5 ಟಿಎಂಸಿ ಅಡಿ ನೀರು ಸಂಗ್ರಹಿಸಿದರೆ ಯೋಜನೆ ಅನುಷ್ಠಾನಗೊಳ್ಳುವ ಆಶಾಭಾವನೆಯನ್ನು ಇಟ್ಟುಕೊಳ್ಳಬಹುದು. ಸದನ ಮುಗಿದ ನಂತರ ಸಭೆ ಕರೆದು ತೀರ್ಮಾನಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು
ತಿಳಿಸಿದರು.

ಎಚ್.ಎನ್. ವ್ಯಾಲಿ ಯೋಜನೆಗೆ ಸಂಬಂಧಿಸಿದಂತೆ ನಮ್ಮ ಭಾಗಕ್ಕೆ 208 ಎಂಎಲ್‌ಡಿ ನೀರು ಕೊಡುವುದಾಗಿ ಭರವಸೆ ನೀಡಲಾಗಿತ್ತು. ಈಗ 92 ಎಂಎಲ್‌ಡಿ ನೀರು ಬರುತ್ತಿದೆ. ದೇವನಹಳ್ಳಿ 6, ಚಿಕ್ಕಬಳ್ಳಾಪುರ 26, ಗೌರಿಬಿದನೂರು ತಾಲ್ಲೂಕಿನ 4 ಕೆರೆಗಳಿಗೆ ನೀರು ಹರಿಸಲಾಗಿದೆ. ಶಿಡ್ಲಘಟ್ಟದ ಕೆರೆಗಳಿಗೆ ಹರಿಸಿಲ್ಲ ಎಂದು ವಿವರಿಸಿದರು.

ಬಿಡಬ್ಲ್ಯುಎಸ್‌ಎಸ್‌ಬಿಯು ಅಷ್ಟೊಂದು ನೀರು ಕೊಡಲು ಸಾಧ್ಯವಾಗುವುದಿಲ್ಲ ಎಂದು ನೀರಾವರಿ ಸಚಿವರಿಗೆ ಹಿಂಬರಹ ನೀಡಿದೆ. ಮೊದಲು ಡಿಪಿಆರ್ ಮಾಡಿದವರೇ ಈಗ ನೀರು ಕೊಡಲು ಸಾಧ್ಯವಾಗಲ್ಲ ಎನ್ನುತ್ತಿರುವುದರ ಹಿಂದೆ ಷಡ್ಯಂತ್ರ ಅಡಗಿದೆ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರವೇ ನೀರಾವರಿ ಯೋಜನೆಗಳಿಗೆ ಮುಕ್ತಿ ಸಿಗಲಿದೆ. ಜನರಿಗೆ ದ್ರೋಹ ಬಗೆಯುತ್ತಿರುವವರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದು ಅವರು ತಿಳಿಸಿದರು,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.