ADVERTISEMENT

ಅಂಧರಿಗಾಗಿ ಕಾರು ರ್‍ಯಾಲಿ 16ರಂದು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 8:42 IST
Last Updated 13 ಮಾರ್ಚ್ 2014, 8:42 IST

ಬೆಳಗಾವಿ: ‘ರೌಂಡ್‌ ಟೇಬಲ್‌ ಇಂಡಿಯಾ ಆಶ್ರಯದಲ್ಲಿ ಮಾ. 16ರಂದು ನಗರದಲ್ಲಿ ಪ್ರಥಮ ಬಾರಿಗೆ ದೃಷ್ಟಿಹೀನರಿಗಾಗಿ ಕಾರು ರ್‍ಯಾಲಿ ಆಯೋಜಿಸಲಾಗಿದೆ’ ಎಂದು ಅಧ್ಯಕ್ಷ ಶ್ರೀಹರ್ಷ ರಾವ್‌ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೃಷ್ಟಿಹೀನ­ರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾರು ರ್‍ಯಾಲಿ ಆಯೋಜಿಸಲಾಗಿದ್ದು, ಅಂದು ಬೆಳಿಗ್ಗೆ 9ಕ್ಕೆ ಲಿಂಗರಾಜ ಕಾಲೇಜಿನ ಬಳಿ ರ್‍ಯಾಲಿಗೆ ಚಾಲನೆ ಸಿಗಲಿದೆ. ನಗರದ ವಿವಿಧ ಬಡಾವಣೆಗಳನ್ನು ಒಳಗೊಂ­ಡಂತೆ 32 ಕಿ.ಮೀ. ಪ್ರದೇಶದಲ್ಲಿ ರ್‍ಯಾಲಿ ನಡೆಯಲಿದ್ದು, 60 ಜನ ದೃಷ್ಟಿಹೀನರು ಭಾಗವಹಿಸಲಿದ್ದಾರೆ’ ಎಂದರು.

‘ಇದು ದೃಷ್ಟಿಹೀನರಲ್ಲಿ ಆತ್ಮಸ್ಥೈರ್ಯ ತುಂಬಲು ಆಯೋಜಿಸಿರುವ ಕಾರ್ಯಕ್ರಮವೇ ಹೊರತು, ಸ್ಪರ್ಧೆಯಲ್ಲ. ಈಗಾಗಲೇ ನವದೆಹಲಿ, ಮುಂಬೈ, ಹೈದರಾಬಾದ್‌, ಕಾನ್ಪುರ, ಮೈಸೂರು ನಗರಗಳಲ್ಲಿ ಕಾರು ರ್‍ಯಾಲಿ ಆಯೋಜಿಸಲಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲೂ ರ್‍ಯಾಲಿ ಆಯೋಜಿಸಲಾಗುತ್ತಿದ್ದು, ಇದರಲ್ಲಿ ಬಂದ ಹಣವನ್ನು ಸಾಮಾಜಿಕ ಚಟುವಟಿಕೆಗಳಿಗಾಗಿ ಬಳಸಲಾಗು­ವುದು’ ಎಂದು ತಿಳಿಸಿದರು.

‘ರ್‍ಯಾಲಿಯಲ್ಲಿ ಭಾಗವಹಿಸುವ ಬಗ್ಗೆ ದೃಷ್ಟಿಹೀನರಿಗೆ ಇದೇ  15ರಂದು ತರ­ಬೇತಿ ನೀಡಲಾಗುವುದು. ತರಬೇತಿ­ಯಲ್ಲಿ 80ಕ್ಕೂ ಹೆಚ್ಚು ದೃಷ್ಟಿಹೀನರು ಪಾಲ್ಗೊಳ್ಳಲಿದ್ದು, ಈ ಪೈಕಿ ಆದ್ಯತೆಯ ಮೇರೆಗೆ 60 ಮಂದಿಯನ್ನು ಆಯ್ಕೆ ಮಾಡಲಾಗುವುದು. ತರಬೇತಿಯಲ್ಲಿ ಪಡೆದ ಮಾಹಿತಿಯ ಮೇರೆಗೆ 16ರಂದು ನಡೆಯಲಿರುವ ರ್‍ಯಾಲಿಯಲ್ಲಿ ದೃಷ್ಟಿಹೀನರು ಕಾರು ಚಾಲನೆ ಮಾಡುವ ಕುರಿತು ಚಾಲಕರಿಗೆ ನಿರ್ದೇಶನ ನೀಡಲಿದ್ದಾರೆ’ ಎಂದರು.

ಸಮರ್ಥನಂ ಅಂಗವಿಲಕರ ಸಂಸ್ಥೆಯ ವ್ಯವಸ್ಥಾಪಕ ಅರುಣಕುಮಾರ, ‘ಉತ್ತರ ಕರ್ನಾಟಕದಲ್ಲಿ ದೃಷ್ಟಿಹೀನರಿಗೆ ಯಾವುದೇ ರೀತಿಯಲ್ಲಿ ಉತ್ತೇಜನ ಸಿಗುತ್ತಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯ ನಡುವೆಯೂ ರೌಂಡ್‌ ಟೇಬಲ್‌ ಇಂಡಿಯಾ ದೃಷ್ಟಿಹೀನರಿಗಾಗಿ ಕಾರು ರ್‍ಯಾಲಿ ಆಯೋಜಿಸಲು ಮುಂದಾಗಿರು­ವುದು ಶ್ಲಾಘನೀಯ’ ಎಂದ ಅವರು, ದೃಷ್ಟಿಹೀನರು ಕಣ್ಣಿನಿಂದ ಅಂಗವಿಕಲರೇ ಹೊರತು, ಬುದ್ದಿಯಿಂದ ಅಲ್ಲ. ಹೀಗಾಗಿ ದೃಷ್ಟಿಹೀನರು ತಮ್ಮ ಪ್ರತಿಭೆ ಪ್ರದರ್ಶಿಸಲು ಇದೊಂದು ವೇದಿಕೆಯಾಗಲಿದೆ’ ಎಂದು ತಿಳಿಸಿದರು.

ರೌಂಡ್‌ ಟೇಬಲ್‌ ಇಂಡಿಯಾ ಮಾಜಿ ಅಧ್ಯಕ್ಷ ಆನಂದ ಹೆಡಾ, ಉಪಾಧ್ಯಕ್ಷ ಸಂತೋಷ ಸರೋದೆ, ಕಾರ್ಯದರ್ಶಿ ಆನಂದ ದೇಸಾಯಿ, ಖಜಾಂಚಿ ಮಂದಾರ ಮುತಕೇಕರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.