ADVERTISEMENT

ಅದ್ದೂರಿಯ ಅಡ್ಡಪಲ್ಲಕ್ಕಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 11:05 IST
Last Updated 3 ಫೆಬ್ರುವರಿ 2012, 11:05 IST

ಸವದತ್ತಿ: ಶುಕ್ರವಾರ ನಡೆಯುವ ಮೂಲಿಮಠದ ನೂತನ ಶ್ರಿಗಳಾದ ಮಲ್ಲಿಕಾರ್ಜುನ ಸ್ವಾಮೀಜಿ ಪಟ್ಟಾಧಿಕಾರದ ಅಂಗವಾಗಿ ಉಜ್ಜಯಿನಿ, ಶ್ರೀಶೈಲ, ಕಾಶಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಹಾಗೂ ಸಿದ್ಧಾಂತ ಶಿಖಾಮಣಿ ಗ್ರಂಥದ ಮೆರವಣಿಗೆ ಗುರುವಾರ ಸಡಗರದಿಂದ ನಡೆಯಿತು.

 ಕಲ್ಮಠದಿಂದ ತಾಲ್ಲೂಕು ಕ್ರೀಡಾಂಗಣದವರೆಗೆ ನಗರದ ಪ್ರಮುಖ ಬೀದಿಗಳು ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದವು. ಪ್ರತಿ ಒಬ್ಬರು ತಮ್ಮ ಮನೆಗಳ ಮುಂದೆ ರಂಗೋಲಿಗಳಿಂದ ಚಿತ್ತಾರ ಬರೆದ ದೃಶ್ಯ ನೋಡುಗರ ಮನ ಮುದಗೊಳಿಸುವಂತಿದ್ದವು.

ಉಜ್ಜಯಿನಿಯ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು, ಶ್ರಿಶೈಲದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು, ಕಾಶಿಯ ಡಾ. ಚಂದ್ರಶೇಖರ ಶಿವಾಚಾರ್ಯರ ಅಡ್ಡಪಲ್ಲಕಿ ಹಾಗೂ ಸಿದ್ಧಾಂತ ಶಿಖಾಮಣಿ ಉತ್ಸವ ಶಾಸಕ ಆನಂದ ಮಾಮನಿ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು. ಶಿವಬಸವ ಸ್ವಾಮೀಜಿ, ಮುರಘೇಂದ್ರ ಸ್ವಾಮೀಜಿ, ಗುರುಸಿದ್ಧ ಶಿವಾಚಾರ್ಯರ ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ಮೆರವಣಿಗೆಯಲ್ಲಿ 2051ಮಾತೆಯರಿಂದ ಕುಂಭಮೇಳ, ಜಗ್ಗ ಹಲಿಗೆ,  ಡೊಳ್ಳು, ಕರಡಿ ಮಜಲು, ಬೆಂಗಳೂರಿನ ವೀರಭದ್ರೇಶ್ವರ ಜಾನಪದ ವೀರಗಾಸೆ ಮುಂತಾದ ಜನಪದ ವಾದ್ಯಗಳು ಹಾಗೂ ಕಲಾವಿದರ ನೃತ್ಯ ಮನಸೆಳೆದವು.  

 ಶಿವಾನಂದ ಹೂಗಾರ, ರಾಜಣ್ಣ ಮಾಮನಿ, ಎಂ.ಟಿ. ಶಿಗ್ಲಿ ಹಾಗೂ ಭಕ್ತರು ಪಾಲ್ಗೊಂಡಿದ್ದರು.
ಜೀವನದರ್ಶನ ಪ್ರವಚನ ಸಮಾರೋಪ

ಸವದತ್ತಿ: `ಮಠಗಳು ಜನರ ಮಟ್ಟವನ್ನು ಸುಧಾರಿಸುವ ಕೇಂದ್ರಗಳಾಗಿ, ಸತ್ಯ ಶುದ್ಧ ಕಾರ್ಯಗಳಿಗೆ ಪ್ರೊತ್ಸಾಹಿಸುತ್ತ ನಡೆದಾಗ ಸಮಾಜದಲ್ಲಿ ಅಮೋಘವಾದ ಬದಲಾವಣೆ ಸಾಧ್ಯ~ ಎಂದು ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯರು ಹೇಳಿದರು. ಇಲ್ಲಿನ ಮೂಲಿಮಠದ ನೂತನ ಪಟ್ಟಾಧಿಕಾರ
ದ ನಿಮಿತ್ತ ಆಯೋಜಿಸಿದ್ದ ಜೀವನ ದರ್ಶನ ಪ್ರವಚನದ ಸಮಾರೋಪ ಸಮಾರಂಭದಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿಯವರನ್ನು ಸನ್ಮಾನಿಸಿ ಅವರು ಮಾತನಾಡಿದರು.


`ಮಠಾಧೀಶರ ನುಡಿಗಿಂತ ನಡೆಗೆ ಹೆಚ್ಚು ಆದ್ಯತೆ ನೀಡಿದ ನಮ್ಮ ಜನರು, ಮಠಗಳಿಂದ ಕನ್ನಡ ಸಾಹಿತ್ಯ, ಜನಪದ ಕಲೆಗಳು ಉಳಿದಿವೆ ಎಂಬುದನ್ನು ಅರಿತಿದ್ದಾರೆ~ ಎಂದರು.ಮಾಜಿ ಶಾಸಕ ರಾಜಣ್ಣ ಮಾಮನಿ ಮಾತನಾಡಿ, ಮಠಾಧೀಶರು  ಧರ್ಮ ಸಾರುವುದರೊಂದಿಗೆ ಶೈಕ್ಷಣಿಕ ರಂಗದಲ್ಲಿ ಮಹತ್ತರ ಕೊಡುಗೆ ನೀಡ್ದ್ದಿದಾರೆ ಎಂದರು.

ಮುರಗೋಡದ ನೀಲಕಂಠ ಸ್ವಾಮೀಜಿ ಮಾತನಾಡಿದರು. ಮೂರುಸಾವಿರಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ನಾಗನೂರಿನ ಸಿದ್ಧರಾಮ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ಕಮತಗಿಯ ಹುಚ್ಚೇಶ್ವರ ಸ್ವಾಮೀಜಿ, ಚಿಕ್ಕೋಡಿಯ ಸಂಪಾದನಾ ಸ್ವಾಮೀಜಿ, ಜಡೆಯ ಮಹಾಂತಸ್ವಾಮಿಗಳು,

ನಿಡಗುಂದಿಯ ಶಿವ ಬಸವಸ್ವಾಮೀಜಿ, ಬಾಗೇವಾಡಿಯ ಶಿವಾನಂದ ಸ್ವಾಮೀಜಿ, ಅಮಿನಗಡದ ಶಂಕರಾಜೇಂದ್ರ ಸ್ವಾಮೀಜಿ, ಶಹಪುರದ ಗುರುಪಾದ ಸ್ವಾಮೀಜಿ, ಸುಂದರೇಶ ದಿಕ್ಷೆತ, ಮಾಜಿ ಸಚಿವ ಶಿವಾನಂದ ಕೌಜಲಗಿ, ಆರ್.ವಿ. ಪಾಟೀಲ, ಎಂ.ಟಿ. ಶಿಗ್ಲಿ, ಪರ್ವತಗೌಡ ಪಾಟೀಲ, ಡಾ. ವಿ.ಐ. ಪಾಟೀಲ, ಅಶೋಕ ಹಂಪಣ್ಣವರ, ಎಸ್.ಎನ್. ಒಂಸಗೂಡಿ, ಎನ್.ಸಿ. ಬೆಂಡಿಗೇರಿ, ಬಿ.ಎಂ. ಯಲಿಗಾರ, ಅನ್ನದಾನೇಶ್ವರ ತುಪ್ಪದ ಮುಂತಾದವರು ಉಪಸ್ಥಿತರಿದ್ದರು.ಶಾಸಕ ಆನಂದ ಮಾಮನಿ ಸ್ವಾಗತಿಸಿದರು. ಸಹದೇವ ಯರಗೊಪ್ಪ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.