ADVERTISEMENT

ಅಭ್ಯರ್ಥಿಗಳಿಂದ ಆಮಿಷ: ಪ್ರಜಾಪ್ರಭುತ್ವಕ್ಕೆ ಅಪಚಾರ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 8:59 IST
Last Updated 28 ಫೆಬ್ರುವರಿ 2018, 8:59 IST
ಬಾಬಾಗೌಡ ಪಾಟೀಲ
ಬಾಬಾಗೌಡ ಪಾಟೀಲ   

ಬೆಳಗಾವಿ: ವಿಧಾನಸಭೆ ಚುನಾವಣೆ ಯಲ್ಲಿ ಸ್ಪರ್ಧಿಸಲು ಬಯಸಿದವರು ಮತದಾರರಿಗೆ ಆಮಿಷಗಳನ್ನು ಒಡ್ಡುತ್ತಾ, ಜಾತಿ ಹೆಸರಿನಲ್ಲಿ ರಾಜಕಾರಣ ಮಾಡುತ್ತಾ ಪ್ರಜಾಪ್ರಭುತ್ವ ವ್ಯವಸ್ಥೆಗೆ ದ್ರೋಹ ಬಗೆಯುತ್ತಿದ್ದಾರೆ ಎಂದು ಜೆಡಿಎಸ್‌ ಮುಖಂಡ, ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಆರೋಪಿಸಿದರು.‌

‘ಜಾತಿ, ಭಾಷೆಯ ವಿಷ ಬೀಜ ಬಿತ್ತಿ ವೈರಿಗಳನ್ನಾಗಿ ಮಾಡಿ ಬೆಂಕಿ ಹಚ್ಚಿ ಅಧಿಕಾರಕ್ಕೆ ಬರುವುದಕ್ಕೆ ಪ್ರಯತ್ನ ನಡೆಯುತ್ತಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಿಷಾದ ವ್ಯಕ್ತಪಡಿಸಿದರು.

‘ಆಕಾಂಕ್ಷಿಗಳು ನಡೆಸುತ್ತಿರುವ ಚಟು ವಟಿಕೆಗಳು ನಾಚಿಕೆ ತರಿಸುವಂತಿವೆ. ಕುಕ್ಕರ್‌, ಸೀರೆ, ಕೊಡಗಳನ್ನು ಕೊಟ್ಟು ಆಮಿಷ ಒಡ್ಡಲಾಗುತ್ತಿದೆ. ತೆಗೆದುಕೊಳ್ಳದಿದ್ದರೆ ನಮ್ಮ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾರೆ ಎನ್ನುವ ಭಯದಲ್ಲಿ ಜನರು ಪಡೆದುಕೊಳ್ಳುತ್ತಿದ್ದಾರೆ. ಕೊಟ್ಟಿದ್ದೆಲ್ಲವನ್ನೂ ಒಲ್ಲದ ಮನಸ್ಸಿನಿಂದ ತೆಗೆದುಕೊಳ್ಳುತ್ತಿದ್ದಾರೆ. ಇದರಲ್ಲಿ ಜನರ ತಪ್ಪಿಲ್ಲ’ ಎಂದು ಹೇಳಿದರು.

ADVERTISEMENT

ಜನದ್ರೋಹಿ ರಾಜಕಾರಣ: ‘ಜನಪರವಿರುವ ಬದಲಿಗೆ, ಜನದ್ರೋಹಿ ರಾಜಕಾರಣ ನಡೆಯುತ್ತಿದೆ. ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ರದ್ದುಪಡಿಸಿದ ನಂತರ ಯಾರು ಜೈಲಿಗೆ ಹೋದರು? ದೇಶದ ಇಂದಿನ ಪರಿಸ್ಥಿತಿಯನ್ನು ಗಮನಿಸಿಯೇ ನಾನು ಜೆಡಿಎಸ್ ಸೇರಿದ್ದೇನೆ. ಮುಂಬರುವ ಚುನಾವಣೆಯಲ್ಲಿ ಮತದಾರರು, ಜನರಿಗಾಗಿ ದುಡಿಯುವವರನ್ನು ಆಯ್ಕೆ ಮಾಡಬೇಕು. ಕರ್ನಾಟಕವು ಕಳ್ಳರ ನಾಡಾಗುವುದಕ್ಕೆ ಅವಕಾಶ ಕೊಡಬಾರದು’ ಎಂದು ಕೋರಿದರು.

ಹಗಲು ಕಾರ್ಯಕರ್ತರು ಬೇಕಾಗಿಲ್ಲ: ‘ಕಾಂಗ್ರೆಸ್‌ನವರಿಗೆ ಹಗಲಿನಲ್ಲಿ ಕೆಲಸ ಮಾಡುವ ಕಾರ್ಯಕರ್ತರು ಬೇಕಾಗಿಲ್ಲ. ಅಲ್ಲಿ ಚಮಚಾಗಿರಿ ಮಾಡಿದವರಿಗಷ್ಟೇ ಮಾನ್ಯತೆ ಇದೆ. ಇದನ್ನು  ಧಿಕ್ಕರಿಸಿಯೇ ಜೆಡಿಎಸ್‌ ಸೇರಿದ್ದೇನೆ. ಸ್ವಸಾಮರ್ಥ್ಯದಿಂದ ಮೇಲೆ ಬಂದ್ದಿದ್ದೇನೆ ವಿನಃ ಕಾಂಗ್ರೆಸ್‌ನಿಂದಲ್ಲ’ ಎಂದು ಈಚೆಗೆ ಕಾಂಗ್ರೆಸ್‌ ತೊರೆದ ಗ್ರಾಮೀಣ ಮತಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಶಿವನಗೌಡ ಪಾಟೀಲ ತಿಳಿಸಿದರು. ‘ಕಾಂಗ್ರೆಸ್‌ನಲ್ಲಿರುವ ಹಲವರು ಈಗಲೂ ಬೆಂಬಲ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಹಳಷ್ಟು ಮಂದಿ ಜೆಡಿಎಸ್‌ ಸೇರಬಹುದು’ ಎಂದರು. ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡ ಲಗಿ, ಮುಖಂಡರಾದ ಫೈಜುಲ್ಲಾ ಮಾಡಿ ವಾಲೆ, ಅಶೋಕ ಪಾಟೀಲ ಇದ್ದರು.

ಹೈಕಮಾಂಡ್‌ ಹೇಳಿದರೆ ಸ್ಪರ್ಧೆ

‘ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ನಿರ್ಧರಿಸಿಲ್ಲ. ಹೈಕಮಾಂಡ್‌ ಹೇಳಿದರೆ ಹಾಗೂ ಜನರು ಬಯಸಿದರೆ ಕಿತ್ತೂರು ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧವಿದ್ದೇನೆ’ ಎಂದು ಸ್ಪಷ್ಟಪಡಿಸಿದರು. ‘ಜಿಲ್ಲೆಯಲ್ಲಿ ಯಾವುದೇ ಪಕ್ಷಕ್ಕೂ ಕಡಿಮೆ ಇಲ್ಲದಷ್ಟು ಸ್ಥಾನಗಳನ್ನು ಜೆಡಿಎಸ್‌ ಪಡೆಯಲಿದೆ. ಕುಮಾರಸ್ವಾಮಿ ನಾಯಕತ್ವಕ್ಕೆ ಒಳ್ಳೆಯ ಬೆಂಬಲ ದೊರೆಯುತ್ತದೆ’ ಎಂದರು.

* * 

ಚುನಾವಣೆಯಲ್ಲಿ ಪ್ರಚಾರಕ್ಕೆ ಬೇಕಾಗುವ ವೆಚ್ಚವನ್ನಷ್ಟೇ ನಮ್ಮ ಅಭ್ಯರ್ಥಿಗಳು ಮಾಡುತ್ತಾರೆ. ಮತ ಹಾಕಿ ಎಂದು ಜನರಿಗೆ ಹಣ ಹಂಚುವುದಿಲ್ಲ.
ಬಾಬಾಗೌಡ ಪಾಟೀಲ
ಜೆಡಿಎಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.