ಅಥಣಿ: ತಾಲ್ಲೂಕಿನ ಶೇಡಬಾಳ ಗ್ರಾಮದ ಬಸ್ ನಿಲ್ದಾಣ ಹತ್ತಿ ಗೂಡಂಗಡಿಗಳಿಗೆ ಮಂಗಳವಾರ ಮಧ್ಯ ರಾತ್ರಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡ ಪರಿಣಾಮ ಸುಮಾರು 14 ಅಂಗಡಿಗಳು ಸಂಪೂರ್ಣ ಬೆಂಕಿಗಾಹುತಿಯಾಗಿದ್ದಲ್ಲದೇ, 25 ಲಕ್ಷ ರೂ.ಗಳವರೆಗೆ ವಸ್ತುಗಳ ಸುಟ್ಟು ಕರಕಲಾಗಿವೆ.
ಲಕ್ಷ್ಮಣ ಚೌಡಪ್ಪ ಕಾಂಬಳೆ ಎಂಬುವವರಿಗೆ ಸೇರಿದ ಪಾದರಕ್ಷೆ ಅಂಗಡಿಗೆ ಮೊದಲು ಹತ್ತಿಕೊಂಡ ಬೆಂಕಿ ನಂತರ ಇನ್ನುಳಿದ ಎಲ್ಲ ಅಂಗಡಿಗಳಿಗೆ ಪಸರಿಸಿತು. ಮಧ್ಯರಾತ್ರಿ ವೇಳೆ ಈ ಅಗ್ನಿ ಅನಾಹುತ ಸಂಭವಿಸಿದ್ದರಿಂದ ಅಥಣಿ, ಉಗಾರ ಮತ್ತು ಇನ್ನಿತರ ಕೇಂದ್ರಗಳಿಂದ ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸುವುದು ತಡವಾಯಿತು.
ಅಷ್ಟೊತ್ತಿಗೆ ಗ್ರಾಮಸ್ಥರು ಬೆಂಕಿ ನಂದಿಸುವ ಪ್ರಯತ್ನಕ್ಕೆ ಮುಂದಾದರಾದರೂ ಜ್ವಾಲೆಯ ತೀವ್ರತೆ ಬಹುಬೇಗ ವ್ಯಾಪಿಸತೊಡಗಿದ್ದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿಲ್ಲವೆನ್ನಲಾಗಿದೆ.
ಘಟನೆಯಲ್ಲಿ ಬಾಲಚಂದ್ರ ಅಗಸರ ಎಂಬುವವರ ಸುಮಾರು ಒಂದು ಲಕ್ಷ ರೂ., ತಮ್ಮಣ್ಣ ನಾವಿ 1.4 ಲಕ್ಷ ರೂ., ಮುರಗೆಪ್ಪ ನಾವಿ ಮತ್ತು ಅಣ್ಣಪ್ಪ ನಾವಿ ಎಂಬುವವರ ತಲಾ 80 ಸಾವಿರ ರೂ., ಅಮೀತ ಕುಡಚಿ ಎಂಬುವವರ 60 ಸಾವಿರ ರೂ., ಮಾಜಿ ಗ್ರಾ.ಪಂ. ಅಧ್ಯಕ್ಷ ಅಜೀತ ನರಸಗೌಡರ ಎಂಬುವವರ 1.25 ಲಕ್ಷ ರೂ., ವಿಜಯ ಮುರಗೆಪ್ಪ ಚನ್ನಿ ಎಂಬುವವರ 2 ಲಕ್ಷ ರೂ., ಪ್ರಕಾಶ ಚನ್ನಿಯವರ ಝರಾಕ್ಸ್ ಮಷೀನ್, ಸಾಹಿತ್ಯ ಸೇರಿದಂತೆ 5 ಲಕ್ಷ ರೂ., ಲಕ್ಷ್ಮಣ ಹೊನಕಾಂಬಳೆ ಎಂಬುವವರ 1 ಲಕ್ಷ ರೂ., ಮಹಾದೇವ ಚೌಡಪ್ಪ ಕಾಂಬಳೆಯವರ 1 ಲಕ್ಷ ರೂ., ಮನೋಜ ಲಕ್ಷ್ಮಣ ಕಾಂಬಳೆ ಎಂಬುವವರ 1.20 ಲಕ್ಷ ರೂ., ಮೌಲ್ಯದ ವಸ್ತುಗಳು ಬೆಂಕಿಗೆ ಸುಟ್ಟು ಕರಕಲಾಗಿವೆ.
ಇದರ ಜೊತೆಗೆ ಒಂದು ಸ್ಪ್ಲೆಂಡರ್ ಬೈಕ್, ಒಂದು ಎಮ್-80 ಮತ್ತು ಬಸವೇಶ್ವರ ಜಾತ್ರೆಗೆಂದು ಸಂಗ್ರಹಿಸಿಡಲಾಗಿದ್ದ ಸುಮಾರು 5 ಸಾವಿರ ತೆಂಗಿನಕಾಯಿಗಳು ಭಸ್ಮವಾಗಿವೆ.
ಗೂಡಂಗಡಿಗಳಲ್ಲಿ ಇಟ್ಟಿದ್ದ 9 ಗ್ಯಾಸ್ ಸಿಲಿಂಡರ್‌ಗಳು ಖಾಲಿ ಇದ್ದುದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಮತ್ತೊಬ್ಬರ ಅಂಗಡಿಯಲ್ಲಿಟ್ಟಿದ್ದ ಸುಮಾರು 50 ಲೀ., ಪೆಟ್ರೋಲ್‌ನ್ನು ಸಕಾಲದಲ್ಲಿ ಕೆಲ ಯುವಕರು ಹೊರ ಸಾಗಿಸಿದ್ದರಿಂದ ದುರಂತ ದೀರ್ಘಕ್ಕೆ ಹೋಗುವುದು ತಪ್ಪಿದಂತಾಗಿದೆ.
ಬುಧವಾರ ಬೆಳಿಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ ಜಿ.ಆರ್. ಶೀಲವಂತರ, ಕಂದಾಯ ನಿರೀಕ್ಷಕ ಬಸವರಾಜ ಬೋರಗಲ್, ಆರ್.ಎಸ್. ಕುಂಬಾರ ಮತ್ತಿತರರು ಪರಿಶೀಲನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.