ADVERTISEMENT

ಆಧಾರ್‌ಸಹಿತ ಬಯೊಮೆಟ್ರಿಕ್‌ ಹಾಜರಾತಿ

ಎಂ.ಮಹೇಶ
Published 4 ಡಿಸೆಂಬರ್ 2017, 6:53 IST
Last Updated 4 ಡಿಸೆಂಬರ್ 2017, 6:53 IST
ಬೆಳಗಾವಿ ಜಿಲ್ಲಾಸ್ಪತ್ರೆಯ ನೋಟ
ಬೆಳಗಾವಿ ಜಿಲ್ಲಾಸ್ಪತ್ರೆಯ ನೋಟ   

ಬೆಳಗಾವಿ: ಇಲ್ಲಿನ ಜಿಲ್ಲಾಸ್ಪತ್ರೆ ಹಾಗೂ ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್ಸ್‌)ಯಲ್ಲಿ ವೈದ್ಯರು ಮತ್ತು ಪ್ರಾಧ್ಯಾಪಕರಿಗೆ ಡಿ.1ರಿಂದ ಆಧಾರ್‌ಸಹಿತ ಬಯೊಮೆಟ್ರಿಕ್‌ ಹಾಜರಾತಿ ಕಡ್ಡಾಯಗೊಳಿಸಲಾಗಿದೆ.

ಭಾರತೀಯ ವೈದ್ಯಕೀಯ ಪರಿಷತ್‌ (ಎಂಸಿಐ) ನಿರ್ದೇಶನದ ಮೇರೆಗೆ ಈ ಸಾಧನಗಳನ್ನು ಅಳವಡಿಸಲಾಗಿದೆ. ಕರ್ತವ್ಯಕ್ಕೆ ಹಾಜರಾಗುವಾಗ ಮತ್ತು ನಿರ್ಗಮಿಸುವಾಗ ಬಯೊಮೆಟ್ರಿಕ್‌ ಸಾಧನದಲ್ಲಿ ಬೆರಳಚ್ಚು ನೀಡಬೇಕು ಎನ್ನುವುದನ್ನು ಕಡ್ಡಾಯಗೊಳಿಸಲಾಗಿದೆ.

‘ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು ತಡವಾಗಿ ಬರುವುದು ಹಾಗೂ ಬೇಗ ಹೋಗುವುದನ್ನು ತಪ್ಪಿಸಲು ಎಂಸಿಐ ಈ ಕ್ರಮ ಕೈಗೊಂಡಿದೆ. ಕೆಲವರು ಖಾಸಗಿ ಕ್ಲಿನಿಕ್‌ಗಳಲ್ಲಿದ್ದುಕೊಂಡು ಸರ್ಕಾರಿ ಕೆಲಸಕ್ಕೆ ವಿಳಂಬ ಮಾಡುತ್ತಾರೆ. ಇಂತಹ ಪ್ರವೃತ್ತಿಗೆ ಕಡಿವಾಣ ಹಾಕುವುದಕ್ಕೆ ಈ ವ್ಯವಸ್ಥೆ ಸಹಕಾರಿಯಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ಮೂರು ಸಾಧನ ಅಳವಡಿಕೆ: ಈ ಕುರಿತು ಮಾಹಿತಿ ನೀಡಿದ ಬಿಮ್ಸ್‌ ನಿರ್ದೇಶಕ ಡಾ.ಷಣ್ಮುಖ ಟಿ. ಕಳಸದ, ‘ಪರಿಷತ್‌ ಸೂಚನೆಯಂತೆ ಈಗಾಗಲೇ ಮೂರು ಕಡೆಗಳಲ್ಲಿ ಬಯೊಮೆಟ್ರಿಕ್ ಅಳವಡಿಸಲಾಗಿದೆ. ಎರಡು ಕಡೆ ಈಗಾಗಲೇ ಚಾಲನೆ ನೀಡಲಾಗಿದೆ. ಇನ್ನೊಂದರ ಬಳಕೆಯನ್ನೂ ಶೀಘ್ರವೇ ಆರಂಭಿಸಲಾಗುವುದು. ನ. 27ರಿಂದ ಪ್ರಾಯೋಗಿಕವಾಗಿ ಬಯೊಮೆಟ್ರಿಕ್ ವ್ಯವಸ್ಥೆಯನ್ನು ವೈದ್ಯರು, ಪ್ರಾಧ್ಯಾಪಕರು ಬಳಸುತ್ತಿದ್ದಾರೆ. ಡಿ.1ರಿಂದ ಆಧಾರ್‌ಸಹಿತ ಬಯೊಮೆಟ್ರಿಕ್‌ ಹಾಜರಾತಿ ಕಡ್ಡಾಯಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

‘ಈ ಸುಧಾರಿತ ವ್ಯವಸ್ಥೆಯಿಂದ ಯಾವ ವೈದ್ಯರು ಎಷ್ಟು ವೇಳೆಗೆ ಕೆಲಸಕ್ಕೆ ಬಂದರು, ಹೋದರು ಎನ್ನುವುದನ್ನು ಕುಳಿತಲ್ಲಿಯೇ ತಿಳಿದುಕೊಳ್ಳಬಹುದಾಗಿದೆ. ಎಲ್ಲ ವೈದ್ಯರೂ ಕಾರ್ಯನಿರ್ವಹಿಸುತ್ತಿದ್ದಾರೆ, ಬೋಧಕೇತರರ ಕೊರತೆ ಇಲ್ಲ ಎಂದು ಕೆಲವು ಖಾಸಗಿ ವೈದ್ಯಕೀಯ ಕಾಲೇಜುಗಳವರು ಹಾಜರಾತಿ ಪುಸ್ತಕದಲ್ಲಿ ಮಾತ್ರ ತೋರಿಸುತ್ತಿರುವುದನ್ನು ಎಂಸಿಐ ಗುರುತಿಸಿದೆ. ಹೀಗಾಗಿ, ಖಾಸಗಿ ಸೇರಿದಂತೆ ಎಲ್ಲ ವೈದ್ಯಕೀಯ ಕಾಲೇಜುಗಳಿಗೂ ಹೊಸ ವ್ಯವಸ್ಥೆ ಜಾರಿಗೊಳಿಸಿದೆ. ಒಎಫ್‌ಎಂಎಸ್‌ (ಆನ್‌ಲೈನ್‌ ಫಾಕಲ್ಟಿ ಅಟೆಂಡೆನ್ಸ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ) ಆರಂಭಿಸಲಾಗಿದೆ. ಇದು ಆಧಾರ್‌ಗೆ ಲಿಂಕ್‌ ಆಗಿರುವ ವ್ಯವಸ್ಥೆಯಾಗಿದೆ’ ಎಂದು ತಿಳಿಸಿದರು.

‘ಬಿಮ್ಸ್‌ನಲ್ಲಿ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು ಹಾಗೂ ಸಹ ಪ್ರಾಧ್ಯಾಪಕರು ಮತ್ತು ಜಿಲ್ಲಾಸ್ಪತ್ರೆಯಲ್ಲಿ ಎಲ್ಲ ವೈದ್ಯರಿಗೂ ಹೊಸ ಹಾಜರಾತಿ ವ್ಯವಸ್ಥೆ ಕಡ್ಡಾಯವಾಗಿದೆ. 120 ವೈದ್ಯರಲ್ಲಿ ಪ್ರಸ್ತುತ 108 ಮಂದಿ ಇದ್ದಾರೆ. ಕೆಲವೇ ದಿನಗಳಲ್ಲಿ ಎಂಟು ವೈದ್ಯರ ಭರ್ತಿಗೆ ಪ್ರಕ್ರಿಯೆ ನಡೆಯಲಿದೆ. ಸ್ಟಾಫ್‌ ನರ್ಸ್‌ಗಳಿಗೂ ಬಯೊಮೆಟ್ರಿಕ್‌ ಅಳವಡಿಸಲಾಗಿದೆ. ಸತತ ಮೂರು ದಿನ ತಡವಾಗಿ ಬಂದರೆ ಅಥವಾ ಬೇಗ ಬಂದರೆ ನಿರ್ದಿಷ್ಟ ಕಾರಣ ನೀಡಬೇಕಾಗುತ್ತದೆ. ಕರ್ತವ್ಯಲೋಪ ಕಂಡುಬಂದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಅವರು ಹೇಳಿದರು.

* * 

ಹೊಸ ಹಾಜರಾತಿ ವ್ಯವಸ್ಥೆಯಿಂದಾಗಿ ವೈದ್ಯರು ಸಕಾಲಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗಬೇಕಾಗುತ್ತದೆ. ಇದರಿಂದ ರೋಗಿಗಳಿಗೆ ಅನುಕೂಲವಾಗುತ್ತದೆ.
ಡಾ.ಷಣ್ಮುಖ ಟಿ. ಕಳಸದ,
ನಿರ್ದೇಶಕರು, ಬಿಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.