ADVERTISEMENT

ಆಧಾರ್ ಪ್ರಕ್ರಿಯೆ ಸ್ಥಗಿತ

ಬಸವರಾಜ ಹವಾಲ್ದಾರ
Published 17 ಫೆಬ್ರುವರಿ 2012, 9:40 IST
Last Updated 17 ಫೆಬ್ರುವರಿ 2012, 9:40 IST

ಬೆಳಗಾವಿ: ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ಆಧಾರ್ ಗುರುತಿನ ಚೀಟಿ ನೀಡುವ ಕಾರ್ಯ ಜಿಲ್ಲೆಯಲ್ಲಿ ಏಕಾಏಕಿ ಬಂದ್ ಆಗಿದೆ. ಇದರಿಂದ ಇನ್ನು ಆಧಾರ ಗುರುತಿನ ಚೀಟಿ ಪಡೆಯದ ಜನರು ಕಂಗಾಲಾಗಿದ್ದಾರೆ.

ಫೆ.13 ರಿಂದ ಆಧಾರ ಗುರುತಿನ ಚೀಟಿ ನೀಡುವ ಕಾರ್ಯ ಸ್ಥಗಿತಗೊಳಿತಗೊಳಿಸಲಾಗಿದೆ. ಇಲ್ಲಿನ ಆಧಾರ್ ಗುರುತಿನ ಚೀಟಿ ವಿತರಿಸುವ ಉಸ್ತುವಾರಿ ಅಧಿಕಾರಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತಾಧಿಕಾರಿ ಸಮಿತಿಯಿಂದ ಬಂದಿದ್ದ `ಇಮೇಲ್~ ಆಧಾರದ ಮೇಲೆ ಬಂದ್ ಮಾಡಲಾಗಿದೆ.

ಈ ಯೋಜನೆಯನ್ನು ಯಾಕೆ ಸ್ಥಗಿತಗೊಳಿಸಲಾಗುತ್ತಿದೆ ಎಂಬುದು ಇಲ್ಲಿನ ಅಧಿಕಾರಿಗಳಿಗೂ ಗೊತ್ತಿಲ್ಲ. ಮೇಲಿನ ಆದೇಶದಂತೆ ಬಂದ್ ಮಾಡಲಾಗಿದೆ. ನಾನು ಅಧಿಕಾರವಹಿಸಿಕೊಂಡು ಒಂದು ವಾರವಷ್ಟೇ ಆಗಿದೆ ಎನ್ನುತ್ತಾರೆ ಆಧಾರ ಯೋಜನೆಯ ಉಸ್ತುವಾರಿ ವಹಿಸಿಕೊಂಡಿರುವ ಶಿರಸ್ತೇದಾರ ಎಸ್.ಎಫ್. ಪೈಜಿ.
`ಇದು ನಮ್ಮ ಜಿಲ್ಲೆಯಲ್ಲಿ ಮಾತ್ರ ಬಂದ್ ಮಾಡುವಂತೆ ಸೂಚಿಸಿಲ್ಲ. ಇನ್ನು ಹಲವು ಜಿಲ್ಲೆಗಳಲ್ಲಿಯೂ ಬಂದ್ ಮಾಡಲಾಗಿದೆ. ಆದರೆ ಬೇರೆ ಜಿಲ್ಲೆಗಳ ಹೆಸರು ಗೊತ್ತಿಲ್ಲ. ಮುಂದಿನ ಸೂಚನೆ ಬರುವವರೆಗೂ ಕೇಂದ್ರಗಳು ಬಂದ್ ಆಗಿರುತ್ತವೆ~ ಎನ್ನುತ್ತಾರೆ ಅವರು.

ಜಿಲ್ಲೆಯಲ್ಲಿ ಆಧಾರ್ ಗುರುತಿನ ಚೀಟಿ ನೀಡುವ ಕಾರ್ಯ ಆರಂಭದಿಂದಲೂ ಆಮೆಗತಿಯಲ್ಲಿ ಸಾಗಿತ್ತು. ಸ್ಥಳ, ಸಿಬ್ಬಂದಿ ಹಾಗೂ ಕೇಂದ್ರಗಳ ಕೊರತೆ ಸೇರಿದಂತೆ ಹಲವಾರು ಸಮಸ್ಯೆಗಳು ಎದುರಾಗಿದ್ದವು. ಹೀಗಾಗಿ ನಿರೀಕ್ಷಿತ ಪ್ರಮಾಣದಲ್ಲಿ ಗುರಿ ಸಾಧಿಸಲು ಸಾಧ್ಯವಾಗಿರಲಿಲ್ಲ.

ಜಿಲ್ಲೆಯಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ `ಆಧಾರ್~ ಗುರುತಿನ ಚೀಟಿ ನೀಡುವ ಕಾರ್ಯ ಆರಂಭಿಸಲಾಗಿತ್ತು. ಜಿಲ್ಲೆಯಲ್ಲಿ 2011ರ ಜನಗಣತಿ ಪ್ರಕಾರ 42.50 ಲಕ್ಷ ಜನಸಂಖ್ಯೆಯಿದೆ. ಇಲ್ಲಿಯವರೆಗೆ ಕೇವಲ 7.50 ಲಕ್ಷ ಜನರು ಮಾತ್ರ ಆಧಾರ್ ಗುರುತಿನ ಚೀಟಿಗಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಉಳಿದವರು ಇನ್ನು ಮೇಲಷ್ಟೇ ನೋಂದಾಯಿಸಬೇಕಿದೆ.

ಈಗಾಗಲೇ ಫೋಟೊ ತೆಗೆಸಿಕೊಂಡು ಮೂರು ತಿಂಗಳು ಕಳೆದರೂ ಚೀಟಿ ಬಂದಿಲ್ಲ. ಕುಟುಂಬದವರೆಲ್ಲ ಒಂದೇ ಬಾರಿ ಚೀಟಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ ಒಬ್ಬರ ಕಾರ್ಡ್ ಬಂದಿದ್ದರೆ ಇನ್ನೊಬ್ಬರದ್ದು ಬಂದಿಲ್ಲ. ಆದರೆ ಈಗ ಏಕಾಏಕಿ ಕೆಂದ್ರಗಳನ್ನು ಬಂದ್ ಮಾಡಲಾಗಿದೆ.


ಆಧಾರ್ ಕೇಂದ್ರಗಳ ನಿರ್ವಹಣೆ ವಹಿಸಿಕೊಂಡಿರುವ ಏಜೆನ್ಸಿಯವರು ಸರಿಯಾಗಿ ಸಂಬಳ ನೀಡುತ್ತಿಲ್ಲ ಎಂಬ ಕಾರಣಕ್ಕೆ ನಗರದ ಹಲವಾರು ಕೇಂದ್ರಗಳನ್ನು ಬಂದ್ ಮಾಡಿ ಸಿಬ್ಬಂದಿ ಪ್ರತಿಭಟನೆ ಮಾಡಿದ್ದರು. ಈ ನಡುವೆಯೇ ಕೇಂದ್ರಗಳನ್ನು ಬಂದ್ ಮಾಡಿರುವುದರಿಂದ ಗುತ್ತಿಗೆ ಮೇಲಿದ್ದ ನೌಕರಿ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.


ಏಜೆಂಟ್‌ರಿಗೆ ನಿರಾಸೆ:
ಆಧಾರ್ ಗುರುತಿನ ಚೀಟಿ ಪಡೆಯಲು ಸ್ವವಿವರ ತುಂಬಿ ಕೊಡಬೇಕಾಗಿದ್ದ ಅರ್ಜಿಯನ್ನು ಉಚಿತವಾಗಿ ಹಂಚಲಾಗುತ್ತಿತ್ತು. ಆದರೆ ಮಧ್ಯವರ್ತಿಗಳ ಹಾವಳಿಯಿಂದಾಗಿ ಅರ್ಜಿಗಳು ಕೆಲವು ಕೇಂದ್ರಗಳಲ್ಲಿ 20 ರೂಪಾಯಿಗೆ ಒಂದರಂತೆ ಮಾರಾಟವಾಗುತ್ತಿದ್ದವು. ಈಗ ಕೇಂದ್ರಗಳು ಬಂದ್ ಆಗಿರುವುದರಿಂದ ಮಧ್ಯವರ್ತಿಗಳಿಗೆ ನಿರಾಸೆಯಾಗಿದೆ.

ಜಿಲ್ಲೆಯಲ್ಲಿ ಇಲ್ಲಿಯವರೆಗೆ ಶೇ 14 ರಷ್ಟು ಮಾತ್ರ ಗುರಿ ಸಾಧನೆಯಾಗಿದೆ. ಇನ್ನು 35 ಲಕ್ಷ ಮಂದಿಯಷ್ಟು ಬಾಕಿ ಇದ್ದಾರೆ. ಆಧಾರ್ ಗುರುತಿನ ಚೀಟಿ ನೀಡುವ ಕೇಂದ್ರಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆಯೇ? ಅಥವಾ ಶಾಶ್ವತವಾಗಿ ಬಂದ್ ಮಾಡಲಾಗಿದೆಯೇ ಎಂಬುದು ಅಧಿಕಾರಿಗಳು ಗೊತ್ತಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.