ADVERTISEMENT

ಆರು ನಾಡ ಬಾಂಬ್ ಪತ್ತೆ: ಆರೋಪಿ ಪರಾರಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 9:12 IST
Last Updated 23 ಏಪ್ರಿಲ್ 2013, 9:12 IST

ಚನ್ನಮ್ಮನ ಕಿತ್ತೂರು: ಇಲ್ಲಿಗೆ ಸಮೀಪದ ಕುಲವಳ್ಳಿ ಗುಡ್ಡದ ದಾರಿಯಲ್ಲಿ ಕಾಡು ಪ್ರಾಣಿಗಳ ಹತ್ಯೆಗೆ ಬಳಸಲು ಕೊಂಡೊಯ್ಯುತ್ತಿದ್ದ ಆರು ನಾಡಬಾಂಬ್‌ಗಳನ್ನು ಕಿತ್ತೂರು ವಲಯ ಅರಣ್ಯ ಅಧಿಕಾರಿಗಳು ಸೋಮವಾರ ವಶಪಡಿಸಿಕೊಂಡಿದ್ದಾರೆ.

ಈ ಬಾಂಬ್‌ಗಳನ್ನು ಕೊಂಡೊಯ್ಯುತ್ತಿದ್ದರೆನ್ನಲಾದ ಕುಲವಳ್ಳಿ ಗ್ರಾಮದ ಸುಬಾನಿ ನನ್ನೆಸಾಬ ನತ್ತೂಪಾರೀಸ್(26) ಮತ್ತು ಕತ್ರಿದಡ್ಡಿಯ ಪರಶುರಾಮ ಲಕ್ಷ್ಮಣ ಖನಗಾವಿ (22) ಪರಾರಿಯಾಗಿದ್ದು, ಇವರಿಗೆ ಸೇರಿದ ಬೈಕ್‌ವೊಂದು ಅರಣ್ಯ ಅಧಿಕಾರಿಗಳಿಗೆ ಸಿಕ್ಕಿದೆ.

ದ್ವಿಚಕ್ರ ವಾಹನದ ಮೇಲೆ ಆಗಮಿಸಿದ ಇಬ್ಬರು ತಮ್ಮ ಬೈಕ್ ಅನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿ ಕಾಡಿನ ನಡುವೆ ಹೋಗಿದ್ದಾರೆ. ರಸ್ತೆ ಬದಿಯಲ್ಲಿ ನಿಂತಿದ್ದ ವಾಹನ ಕಂಡು ಅರಣ್ಯ ಅಧಿಕಾರಿಗಳು ಕಾಡಿನ ನಡುವೆ ಹೋಗಿದ್ದಾರೆ. ಇದೇ ಸಂದರ್ಭದಲ್ಲಿ ಬಾಂಬ್ ಸಿಡಿದ ಶಬ್ದ ಕಿವಿಗೆ ಬಿದ್ದಿದೆ. ಇದನ್ನು ಕಂಡು ಅಧಿಕಾರಿಗಳು ಆರೋಪಿಗಳ ಬೆನ್ನಟ್ಟಿದ್ದಾರೆ. ಆದರೆ ಆರೋಪಿಗಳು ಪರಾರಿಯಾಗುವಲ್ಲಿ ಯಶಸ್ವಿಯಾದರು ಎನ್ನಲಾಗಿದೆ.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ  ಪಿ.ಕೆ. ನಾಯ್ಕ, ವಲಯ ಅರಣ್ಯಾಧಿಕಾರಿ ಡಿ. ಎ. ಬದಾಮಿ, ಉಪವಲಯ ಅರಣ್ಯಾಧಿಕಾರಿ ಬಿ.ಎಸ್. ಪಾಟೀಲ, ಅರಣ್ಯ ಸಂರಕ್ಷಕರಾದ ಎನ್. ಜಿ. ಮೊಕಾಶಿ ಹಾಗೂ ಎಂ. ಬಿ. ಕಂಠಿಕರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.