ADVERTISEMENT

ಆರ್‌ಪಿಡಿ ಕಾಲೇಜಿನಲ್ಲಿ ಇವಿಎಂಗಳು ‘ಭದ್ರ’

ಪೊಲೀಸರು, ಕೇಂದ್ರ ಮೀಸಲು ಪಡೆ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 14 ಮೇ 2018, 6:33 IST
Last Updated 14 ಮೇ 2018, 6:33 IST
ಬೆಳಗಾವಿಯ ಆರ್‌ಪಿಡಿ ಕಾಲೇಜಿನಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಇಡಲಾಗಿರುವ ‘ಸ್ಟ್ರಾಂಗ್‌ ರೂಂ’ಗಳಿಗೆ ಕೇಂದ್ರೀಯ ಮೀಸಲು ಪಡೆಯ ಭದ್ರತೆ ಒದಗಿಸಲಾಗಿದೆ
ಬೆಳಗಾವಿಯ ಆರ್‌ಪಿಡಿ ಕಾಲೇಜಿನಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಇಡಲಾಗಿರುವ ‘ಸ್ಟ್ರಾಂಗ್‌ ರೂಂ’ಗಳಿಗೆ ಕೇಂದ್ರೀಯ ಮೀಸಲು ಪಡೆಯ ಭದ್ರತೆ ಒದಗಿಸಲಾಗಿದೆ   

ಬೆಳಗಾವಿ: ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ 203 ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿರುವ ವಿದ್ಯುನ್ಮಾನ ಮತಯಂತ್ರ
ಗಳನ್ನು ಇಲ್ಲಿನ ಟಿಳಕವಾಡಿಯ ಆರ್‌ಪಿಡಿ ಕಾಲೇಜಿನಲ್ಲಿ ಇಡಲಾಗಿದ್ದು, ಈ ‘ಸ್ಟ್ರಾಂಗ್‌ ರೂಂ’ಗಳಿಗೆ 24x7 ಭದ್ರತೆ ಒದಗಿಸಲಾಗಿದೆ.

ಮತಯಂತ್ರಗಳೊಂದಿಗೆ ವಿವಿಪ್ಯಾಟ್‌ಗಳನ್ನು ಭದ್ರತಾ ಕೊಠಡಿಯಲ್ಲಿ ಇಡಲಾಗಿದೆ. ಮತದಾನದ ಬಳಿಕ, ಮತಯಂತ್ರಗಳನ್ನು ತಾಲ್ಲೂಕು ಕೇಂದ್ರಗಳಿಗೆ ತರಲಾಗಿತ್ತು. ನಂತರ, ಪೊಲೀಸ್‌ ಬಂದೋಬಸ್ತ್‌ನಲ್ಲಿ ಜಿಪಿಎಸ್‌ ಅಳವಡಿಸಿದ ವಾಹನಗಳಲ್ಲಿ ಇಲ್ಲಿಗೆ ತರಲಾಯಿತು.

ಭಾನುವಾರ ಬೆಳಿಗ್ಗೆ 9ರ ಸುಮಾರಿಗೆ ಎಲ್ಲ ಕ್ಷೇತ್ರಗಳಿಂದ ಮತಯಂತ್ರ ಹಾಗೂ ಇತರ ಪರಿಕರಗಳು ಎಣಿಕೆ ಕೇಂದ್ರ ತಲುಪಿದವು. ಇವುಗಳನ್ನು ಕ್ಷೇತ್ರವಾರು ಭದ್ರತಾ ಕೊಠಡಿಗಳಲ್ಲಿ ಇಟ್ಟು ಸೀಲ್‌ ಮಾಡಲಾಯಿತು. ಮತ ಎಣಿಕೆ ದಿನದವರೆಗೆ ಕೇಂದ್ರ ಮೀಸಲು ಪಡೆಯ ಶಸ್ತ್ರಸಜ್ಜಿತ ಸಿಬ್ಬಂದಿ ನಿಗಾ ವಹಿಸಲಿದ್ದಾರೆ. ಮೂರು ಹಂತದ ಭದ್ರತೆ ಒದಗಿಸಲಾಗಿದ್ದು, ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ.

ADVERTISEMENT

ಕೇಂದ್ರಕ್ಕೆ ಜಿಲ್ಲಾ ಚುನಾವಣಾಧಿಕಾರಿ ಎಸ್‌. ಜಿಯಾವುಲ್ಲಾ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು. ಭದ್ರತಾ ಕೊಠಡಿ, ಮತ ಎಣಿಕೆ ಕೇಂದ್ರಗಳನ್ನು ಸಿದ್ಧಪಡಿಸಿರುವುದು, ಕೌಂಟರ್ ಸ್ಥಾಪನೆ, ಮಾಧ್ಯಮ ಕೇಂದ್ರ ಸ್ಥಾಪನೆ, ಪಾರ್ಕಿಂಗ್ ವ್ಯವಸ್ಥೆ, ದೂರವಾಣಿ ಸಂಪರ್ಕ ಮೊದಲಾದವುಗಳ ಮಾಹಿತಿ ಪಡೆದರು.

‘ಎಲ್ಲ ಕ್ಷೇತ್ರಗಳ ಮತ ಎಣಿಕೆಯೂ ಒಂದೇ ಕಡೆ ನಡೆಯಲಿದೆ. 15ರ ಬೆಳಿಗ್ಗೆ 8ರಿಂದ ಮತ ಎಣಿಕೆ ಆರಂಭಗೊಳ್ಳ
ಲಿದ್ದು, ಮೊದಲು ಅಂಚೆ ಮೂಲಕ ಬಂದ ಮತಪತ್ರಗಳನ್ನು ಎಣಿಕೆ ಮಾಡಲಾಗುವುದು. ನಂತರ ಇವಿಎಂಗಳನ್ನು ತೆಗೆದು
ಕೊಳ್ಳಲಾಗುವುದು. ಆಯೋಗದ ಮಾರ್ಗಸೂಚಿ ಪ್ರಕಾರ ಸ್ಟ್ರಾಂಗ್ ರೂಂಗಳನ್ನು ಸಿದ್ಧಪಡಿಸಲಾಗಿದೆ. ಕೊಠಡಿಯ ಮುಖ್ಯ ಪ್ರವೇಶ ದ್ವಾರ ಹೊರತುಪಡಿಸಿ ಎಲ್ಲ ಕಿಟಕಿಗಳು ಹಾಗೂ ವೆಂಟಿಲೇಷನ್‌ಗಳನ್ನು ಮುಚ್ಚಲಾಗಿದೆ. ಗೋಡೆಗಳನ್ನು ನಿರ್ಮಿಸಿ ಕಿಟಕಿಗಳನ್ನು ಭದ್ರವಾಗಿ ಬಂದ್ ಮಾಡಲಾಗಿದೆ’ ಎಂದು ತಿಳಿಸಿದರು.

‘ಕ್ಷೇತ್ರಕ್ಕೊಂದು ಎಣಿಕೆ ಕೊಠಡಿ ಮತ್ತು ಎರಡು ಸ್ಟ್ರಾಂಗ್ ರೂಂಗಳನ್ನು ವ್ಯವಸ್ಥೆ ಮಾಡಲಾಗಿದೆ. ಚುನಾವಣಾ ಸಿಬ್ಬಂದಿ, ಮತಎಣಿಕೆ ಸಿಬ್ಬಂದಿ, ಪೊಲೀಸ್ ವೀಕ್ಷಕರು ಹಾಗೂ ಜಿಲ್ಲಾ ಚುನಾವಣಾಧಿಕಾರಿಗೆ ವಿಶೇಷ ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ. ಮುಖ್ಯ ಚುನಾವಣಾಧಿಕಾರಿ ಕಚೇರಿ ಜೊತೆ ಸಂಪರ್ಕಕ್ಕಾಗಿ ಹಾಟ್‌ಲೈನ್ ಸಂಪರ್ಕ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.